ಬೆಂಗಳೂರು: 2018ರಲ್ಲೇ ಯುಬಿ ಸಿಟಿ ಗಲಾಟೆಯಲ್ಲಿ ಈ ಶ್ರೀಕಿ ಸಿಕ್ಕಿದ್ದಾಗ ಸಿದ್ದರಾಮಯ್ಯನವರು ಯಾಕೆ ಆತನನ್ನು ಬಂಧಿಸಿಲ್ಲ? ಇಬ್ಬರು ಕಾಂಗ್ರೇಸ್ ನಾಯಕರ ಮಕ್ಕಳ ಜೊತೆ ಸಿಕ್ಕಿಬಿದ್ದಾಗ ಯಾಕೆ ಅರೆಸ್ಟ್ ಮಾಡಿ ತನಿಖೆ ಮಾಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸಚಿವ ಆರಗ ಜ್ಞಾನೇಂದ್ರ ಟಾಂಗ್ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದಲ್ಲಿ ಪ್ರಭಾವಿಗಳನ್ನ ರಕ್ಷಣೆ ಮಾಡಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ನಾವೂ ಗಾಂಜಾ, ಡ್ರಗ್ಸ್ ಪ್ರಕರಣದಲ್ಲಿ ಆತನನ್ನು (ಶ್ರೀಕಿ) ಬಂಧಿಸಿದ್ದೆವು. ತನಿಖೆ ಮಾಡಿದಾಗ ಬಿಟ್ ಕಾಯಿನ್ ವಿಚಾರದಲ್ಲೂ ಈತನ ಪಾತ್ರ ಗೊತ್ತಾಗಿದೆ. ಹೀಗಾಗಿ ನಾವೂ ಇಡಿ ಮತ್ತು ಇಂಟರ್ ಪೋಲ್ ಗೆ ಶಿಫಾರಸ್ಸು ಮಾಡಿದ್ದೇವೆ ಎಂದರು.
ನಮ್ಮಲ್ಲಿ ಯಾವ ಘಟಾನುಘಟಿ ನಾಯಕರೂ ಸಂಪರ್ಕದಲ್ಲಿಲ್ಲ. ಆತನ ಜೊತೆಗೆ ಯಾರ ಸಂಪರ್ಕದಲ್ಲಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ಸಿದ್ದರಾಮಯ್ಯನವರು ಹೇಳಲಿ. ಆತನ ಸಂಪರ್ಕದಲ್ಲಿ ಇರುವುದು ಕಾಂಗ್ರೇಸ್ ನವರೇ. ಯಾರನ್ನು ರಕ್ಷಣೆ ಮಾಡುವ ಕೆಲಸ ನಾವು ಮಾಡುವುದಿಲ್ಲ ಎಂದರು.
ಇದನ್ನೂ ಓದಿ:ಸಿಂದಗಿಯಲ್ಲಿ ಭರ್ಜರಿ ಮುನ್ನಡೆ ಪಡೆದ ಬಿಜೆಪಿಯ ರಮೇಶ ಭೂಸನೂರ: ಗೆಲುವು ಖಚಿತ
ಉಪಚುನಾವಣೆ ಕುರಿತು ಮಾತನಾಡಿದ ಅವರು, ಸಿಂದಗಿ ಹಾಗೂ ಹಾನಗಲ್‌ನಲ್ಲಿ ಗೆಲ್ಲುತ್ತೇವೆ. ಹಾನಗಲ್ ಕ್ಷೇತ್ರದಲ್ಲಿ ಅಲ್ಪ ಸ್ವಲ್ಪ ಹಿನ್ನಡೆ ಇದೆ. ಆದರೆ ಇನ್ನೂ ಮತ ಎಣಿಕೆ ಬಾಕಿ ಇದೆ. ಮುಂದಿನ ಸುತ್ತುಗಳಲ್ಲಿ ನಾವು ಮುನ್ನಡೆಯಾಗುತ್ತದೆ. ನಾನು ಕೂಡ ಹಾನಗಲ್ ಹೋಗಿ ಬಂದಿದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಪ್ರಚಾರ ಮಾಡಿದ್ದಾರೆ. ಉದಾಸಿ ಕುಟುಂಬವೂ ಸಾಕಷ್ಟು ಕೆಲಸ ಮಾಡಿದೆ ಎಂದರು.
ಪುನೀತ್ ಸಮಾಧಿ ದರ್ಶನಕ್ಕೆ ಅವಕಾಶದ ಕುರಿತು ಮಾತನಾಡಿದ ಅವರು, ಇಂದು ಪುನಿತ್ ರಾಜಕುಮಾರ್ ಕಾರ್ಯ ಇದೆ. ಕುಟುಂಬದ ಎಲ್ಲ ಕೈಂಕರ್ಯ ಮುಗಿಯಲಿ. ನಂತರ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ. ಅಂತಿಮ ದರ್ಶನಕ್ಕೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 25ಲಕ್ಷ ಜನ ದರ್ಶನ ಪಡೆದಿದ್ದಾರೆ. ಸಮಾಧಿ ದರ್ಶನಕ್ಕೂ ನಾವು ವ್ಯವಸ್ಥೆ ಮಾಡುತ್ತೇವೆ ಎಂದರು.