Advertisement

ಡಾ.ಪೀಟರ್‌ ನೂತನ ಆರ್ಚ್‌ ಬಿಷಪ್‌

06:00 AM Mar 20, 2018 | Team Udayavani |

ಬೆಂಗಳೂರು: ಬೆಳಗಾವಿಯ ಬಿಷಪ್‌ ಡಾ.ಪೀಟರ್‌ ಮಚಾದೋ ಅವರನ್ನು ಬೆಂಗಳೂರಿನ ಆರ್ಚ್‌ ಬಿಷಪ್‌ ಆಗಿ ಪೋಪ್‌ ಫ್ರಾನ್ಸಿಸ್‌ ಅವರು ಸೋಮವಾರ ಸಂಜೆ 4.30ಕ್ಕೆ ಘೋಷಿಸಿದ್ದಾರೆ.

Advertisement

ಪೀಟರ್‌ ಅವರು 1954ರ ಮೇ 26ರಂದು ಹೊನ್ನಾವರದಲ್ಲಿ ಜನಿಸಿದ್ದು, 1976ರಲ್ಲಿ ಪಾದ್ರಿಯಾಗಿ ಕಾರವಾರದಲ್ಲಿ ದೀಕ್ಷೆ ಪಡೆದಿದ್ದಾರೆ. 2006ರ ಫೆಬ್ರವರಿ 2ರಲ್ಲಿ ಬೆಳಗಾವಿಯ ಬಿಷಪ್‌ ಆಗಿ ನೇಮಕಗೊಂಡಿದ್ದ ಅವರು, ಅದೇ ವರ್ಷ ಮಾರ್ಚ್‌ 30ರಂದು ಬಿಷಪ್‌ ಆಗಿ ದೀಕ್ಷೆ ಪಡೆದುಕೊಂಡಿದ್ದಾರೆ.

ರೋಮ್‌ನ ಪಾಂಟಿಫಿಕಲ್‌ ಅಬೇìನಿಯಾನ ವಿಶ್ವವಿದ್ಯಾಲಯದಲ್ಲಿ ಕ್ಯಾನನ್‌ ಲಾ ವಿಷಯದಲ್ಲಿ ಡಾಕ್ಟೆರೇಟ್‌ ಪಡೆದಿದ್ದಾರೆ. ಅಲ್ಲದೆ, ನ್ಯಾಯಾಂಗ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸಿದ್ದಾರೆ. ಇದರೊಂದಿಗೆ ಕರ್ನಾಟಕ ಪ್ರಾದೇಶಿಕ ಬಿಷಪ್ಸ್‌ ಲಿಥಿ ಆಯೋಗದ ಸಲಹೆಗಾರರು ಮತ್ತು ಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 13 ವರ್ಷಗಳಿಂದ ಬೆಂಗಳೂರಿನ ಆರ್ಚ್‌ ಬಿಷಪ್‌ ಆಗಿರುವ ಡಾ. ಬರ್ನಾಡ್‌ ಮೊರಸ್‌ ಅವರು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರು ನಿವೃತ್ತರಾಗಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಪೀಟರ್‌ ಮಚಾದೊರನ್ನು ನೇಮಿಸಿದ್ದಾರೆ.

ಯಾರಿವರು ಡಾ.ಪೀಟರ್‌?
ಬೆಳಗಾವಿಯ ಬಿಷಪ್‌ ಡಾ.ಪೀಟರ್‌ ಮಚಾದೋ ಅವರು ಬೆಂಗಳೂರು ಧರ್ಮಕ್ಷೇತ್ರದ ಏಳನೇ ಧರ್ಮಾಧ್ಯಕ್ಷರಾಗಿ ನೇಮಕಗೊಂಡಿದ್ದು, ಈ ಸ್ಥಾನಕ್ಕೇರಿದ ಬೆಳಗಾವಿಯ ಎರಡನೇ ಬಿಷಪ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಜನಿಸಿದ ಅವರು ಮೆಟ್ರಿಕ್ಯುಲೇಷನ್‌ಗೆ ಮುನ್ನವೇ ಬೆಳಗಾವಿಯ ಸೇಂಟ್‌ ಮೈಕೆಲ್ಸ್‌ ಸೆಮಿನರಿಗೆ ಸೇರಿದರು. ನಂತರ ಬೆಳಗಾವಿಯ ಸೇಂಟ್‌ ಪಾಲ್ಸ್‌ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಪಡೆದ ಅವರು ತತ್ವಶಾಸ್ತ್ರ ಹಾಗೂ ಸಿದ್ಧಾಂತಶಾಸ್ತ್ರ ಅಧ್ಯಯನಕ್ಕಾಗಿ ಪುಣೆಯ ಪಾಪಲ್‌ ಸೆಮಿನರಿಗೆ ತೆರಳಿದರು. ಬಳಿಕ ಪುಣೆ ವಿಶ್ವವಿದ್ಯಾಲಯದಲ್ಲೇ ವಾಣಿಜ್ಯ ಪದವಿ ಪಡೆದರು.

Advertisement

ಬೆಳಗಾವಿಯ ಬಿಪಷ್‌ರಾಗಿ ನೇಮಕಗೊಂಡ ಅವರು ಎಲ್ಲ ಸಮುದಾಯದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅಧಿಕಾರಿಗಳು, ರಾಜಕೀಯ ಮುಖಂಡರು, ಧಾರ್ಮಿಕ ಮುಖಂಡರೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡಿದ್ದರು. ಜತೆಗೆ ಬಡವರು, ಆರ್ಥಿಕವಾಗಿ ಹಿಂದುಳಿದವರಿಗೆ ಸಾಧ್ಯವಾದಷ್ಟು ನೆರವು ನೀಡುತ್ತಿದ್ದರು.

ಬೆಳಗಾವಿಯಲ್ಲಿ 12 ವರ್ಷ ಬಿಷಪ್‌ರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ, ಶೈಕ್ಷಣಿಕ ಮತ್ತು ಅಭಿವೃದ್ಧಿ ಕಾರ್ಯಗಳಿಗೂ ಪ್ರೋತ್ಸಾಹ ನೀಡುತ್ತಿದ್ದರು. ಹಲವೆಡೆ ಹೊಸ ಚರ್ಚ್‌ಗಳು, ಶಾಲೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಸಮಾಜ ಸೇವಾ ಯೋಜನೆಗಳನ್ನು ಆರಂಭಿಸಿದರು. ಶ್ರೇಷ್ಠ ಚಿಂತಕರಾಗಿದ್ದ ಅವರು ಓದಿನಲ್ಲೂ ವಿಶೇಷ ಆಸಕ್ತಿ ಹೊಂದಿದ್ದಾರೆ.

ರಾಜ್ಯದ ಅತಿ ಉನ್ನತ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿರುವುದನ್ನು ವಿನಮ್ರನಾಗಿ ಸ್ವೀಕರಿಸುತ್ತೇನೆ. ಬಡವರು ಹಾಗೂ ಸಮಾಜದ ಅಂಚಿನಲ್ಲಿರುವ ಜನರ ಕಲ್ಯಾಣಕ್ಕೆ ಪ್ರಯತ್ನಿಸುವ ನನ್ನ ಕಾರ್ಯ ಮುಂದುವರಿಸುತ್ತೇನೆ ಎಂದು ಪೀಟರ್‌ ಮಚಾದೋ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next