Advertisement

ಚುನಾವಣಾ ಕಣಕ್ಕೆ ಭೀಷ್ಮನ ವಿದಾಯ

12:30 AM Mar 23, 2019 | Team Udayavani |

ರಾಜಕೀಯ ವಲಯದಲ್ಲಿ ಭೀಷ್ಮ ಎಂದೇ ಅರಿಯಲ್ಪಡುವ ಹಿರಿಯ ನಾಯಕ ಎಲ್‌.ಕೆ.ಆಡ್ವಾಣಿಯವರು ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿರುವುದು ಈ ಬಾರಿಯ ಲೋಕಸಭಾ ಚುನಾವಣೆಯ ಮಹತ್ವದ ಸಂಗತಿಗಳಲ್ಲಿ ಒಂದು. ಗುರುವಾರ ಪ್ರಕಟಗೊಂಡ ಬಿಜೆಪಿ ಅಭ್ಯರ್ಥಿಗಳ ಮೊದಲ ಯಾದಿಯಲ್ಲಿ ಆಡ್ವಾಣಿ ಇಷ್ಟರ ತನಕ ಪ್ರತಿನಿಧಿಸುತ್ತಿದ್ದ ಗುಜರಾತಿನ ಗಾಂಧಿನಗರ ಕ್ಷೇತ್ರದ ಅಭ್ಯರ್ಥಿಯಾಗಿ ಅಮಿತ್‌ ಶಾ ಹೆಸರಿತ್ತು. ಹಾಗೆಂದು ಆಡ್ವಾಣಿಯ ಈ ವಿದಾಯ ತೀರಾ ಅನಿರೀಕ್ಷಿತವೇನೂ ಅಲ್ಲ. 91 ವರ್ಷ ಪ್ರಾಯವಾಗಿರುವ ಅವರು ಚುನಾವಣಾ ಕಣಕ್ಕಿಳಿಯುವುದು ಬೇಡ ಎಂದು ನಿರ್ಧರಿಸಿದ್ದರೆ ಅದು ಬಹಳ ಸಮುಚಿತವಾದದ್ದೇ. 

Advertisement

ಹಾಗೇ ನೋಡಿದರೆ 2014ರ ಚುನಾವಣೆ ಸಂದರ್ಭದಲ್ಲೇ ಆಡ್ವಾಣಿಗೆ ಗಾಂಧಿನಗರದಿಂದ ಸ್ಪರ್ಧಿಸುವ ಇಚ್ಚೆ ಇರಲಿಲ್ಲ. ಆದರೆ ಆಡ್ವಾಣಿ ಬೇರೆ ಕ್ಷೇತ್ರ ಆರಿಸಿಕೊಂಡರೆ ಅಥವಾ ಸ್ಪರ್ಧಿಸದೆ ಇದ್ದರೆ ಅದರಿಂದ ರವಾನೆಯಾಗುವ ತಪ್ಪು ಸಂದೇಶ ಒಟ್ಟಾರೆ ಬಿಜೆಪಿಯ ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದ್ದ ಹಿನ್ನೆಲೆಯಲ್ಲಿ ಅವರನ್ನು ಒಪ್ಪಿಸಲಾಗಿತ್ತು. 

ಆಡ್ವಾಣಿ ಬಿಜೆಪಿಯ ಸ್ಥಾಪಕ ಸದಸ್ಯ. ಲೋಕಸಭೆಯಲ್ಲಿ ಬರೀ ಎರಡು ಸ್ಥಾನ ಹೊಂದಿದ್ದ ಪಕ್ಷವಿಂದು ಬಹುಮತದಿಂದ  ಸರ್ಕಾರ ರಚಿಸುವ ಹಂತಕ್ಕೆ ಬಂದಿದ್ದರೆ ಅದರ ಶ್ರೇಯಸ್ಸಿನಲ್ಲಿ ಆಡ್ವಾಣಿಗೂ ದೊಡ್ಡ ಪಾಲಿದೆ. ಉಪ ಪ್ರಧಾನಿ, ಗೃಹ ಸಚಿವ ಸೇರಿದಂತೆ ಹಲವು ಮಹತ್ವದ ಸ್ಥಾನಗಳನ್ನು ಅವರು ಅಲಂಕರಿಸಿದ್ದಾರೆ. ಆದರೆ ಪ್ರಧಾನಿಯಾಗುವ ಕನಸು ಮಾತ್ರ ಈಡೇರಲೇ ಇಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆ ಪಟ್ಟ ಅವರಿಂದ ದೂರವೇ ಉಳಿಯಿತು. ನಿಜವಾಗಿ ನೋಡಿದರೆ 2009ರ ಚುನಾವಣೆಯೇ ಆಡ್ವಾಣಿ ಪ್ರಧಾನಿ ಆಶೆ ಈಡೇರಲು ಸೂಕ್ತವಾಗಿದ್ದ ಕಾಲ. ಆದರೆ ಈ ಚುನಾವಣೆಯಲ್ಲಿ ಬಿಜೆಪಿಗೆ ಸರಕಾರ ರಚಿಸಲು ಅಗತ್ಯವಿರುವಷ್ಟು ಸ್ಥಾನ ಗಳಿಸಿಕೊಡಲು ಅವರಿಂದ ಸಾಧ್ಯವಾಗಲಿಲ್ಲ. ಎರಡನೇ ಅವಧಿಗೂ ಯುಪಿಎ ಮೈತ್ರಿಕೂಟ ಬಹುಮತ ಪಡೆದು ಸರಕಾರ ರಚಿಸಿ, ಬಿಜೆಪಿ ಪ್ರತಿಪಕ್ಷದಲ್ಲಿ ಕೂರಬೇಕಾಯಿತು. 2014ರ ಚುನಾವಣೆಯಲ್ಲಿ ಮೋದಿ ಅಲೆಯೇ ಮುಖ್ಯವಾಗಿದ್ದ ಕಾರಣ ಆಡ್ವಾಣಿ ಪ್ರಧಾನಿಯಾಗುವ ಸಾಧ್ಯತೆ ಇರಲಿಲ್ಲ. ಚುನಾವಣೆಗೂ ಮೊದಲೇ ಮೋದಿಯೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. 

ಮೋದಿ ಸಂಪುಟದಲ್ಲಿ 75 ವರ್ಷ ಮೇಲ್ಪಟ್ಟವರಿಗೆ ಸಚಿವ ಸ್ಥಾನ ನೀಡದಿರುವ ನಿಯಮವನ್ನು ಅನುಸರಿಸಿದ ಕಾರಣ ಆಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿದಂತೆ ಹಲವು ಹಿರಿಯ ನಾಯಕರಿಗೆ ಸಚಿವ ಹುದ್ದೆ ಸಿಗಲಿಲ್ಲ. ಅವರಿಗೆಲ್ಲ ಮಾರ್ಗದರ್ಶಕ ಮಂಡಳಿ ಎಂಬ ಹೊಸ ವ್ಯವಸ್ಥೆಯೊಂದನ್ನು ರಚಿಸಲಾಯಿತು. ಮೋದಿ-ಶಾ ಜೋಡಿಯ ಕಾರುಬಾರಿನಲ್ಲಿ ಈ ಮಾರ್ಗದರ್ಶಕ ಮಂಡಳಿಗೆ ಹೇಳಿಕೊಳ್ಳುವಂಥ ಕೆಲಸ ಇರಲಿಲ್ಲ ಎನ್ನುವುದು ಬೇರೆ ಮಾತು. ಹಾಗೊಂದು ವೇಳೆ ಹಿರಿಯರಿಗೆ ಸಚಿವ ಸ್ಥಾನ ನೀಡಿದ್ದೇ ಆಗಿದ್ದರೂ ಆಡ್ವಾಣಿ ತನ್ನ ಶಿಷ್ಯನ ಕೈಕೆಳಗೆ ಸಚಿವನಾಗಿ ದುಡಿಯುವುದು ಅಸಂಭವವೇ ಆಗಿತ್ತು. ಆದರೆ ತನಗೆ ಅರ್ಹವಾಗಿ ಸಲ್ಲಬೇಕಾಗಿದ್ದ ಪ್ರಧಾನಿ ಪಟ್ಟ ಸಿಗಲಿಲ್ಲ ಎಂಬ ಕೊರಗೂ ಅವರಿಗೆ ಇತ್ತೇ? ಹೀಗೊಂದು ಅನುಮಾನ ಈಗ ಬಲವಾಗಿ ಕಾಡುತ್ತಿದೆ. ಹಾಲಿ ಸಂಸತ್ತಿನಲ್ಲಿ ಆಡ್ವಾಣಿ ಶೇ. 92 ಹಾಜರಾತಿ ಹೊಂದಿದ್ದರೂ ಇಡೀ ಐದು ವರ್ಷದಲ್ಲಿ ಮಾತನಾಡಿದ್ದು ಬರೀ 365 ಶಬ್ದಗಳನ್ನು ಎಂಬ ದಾಖಲೆ ಆಡ್ವಾಣಿ ಸಕ್ರಿಯ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಿದ್ದರು ಎನ್ನುವುದನ್ನು ಸಾಬೀತುಪಡಿಸುವಂತಿದೆ. ಒಂದು ರೀತಿಯ ರಾಜಕೀಯ ವಿರಕ್ತ ಭಾವ ಅವರನ್ನು ಕಾಡುತ್ತಿತ್ತು. ಇದು ತನಗೆ ಅರ್ಹವಾಗಿ ಸಲ್ಲಬೇಕಾಗಿದ್ದ ಹುದ್ದೆ ಸಿಗದೇ ಇದ್ದ ನಿರಾಶೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಹಾಗೆಂದು ಅವರ ಈಗಿನ ನಿವೃತ್ತಿಯ ನಿರ್ಧಾರವನ್ನು ಈ ನಿರಾಸಕ್ತಿಯೊಂದಿಗೆ ತಳುಕು ಹಾಕುವುದರಲ್ಲಿ ಅರ್ಥವಿಲ್ಲ. 91 ವರ್ಷ ಎನ್ನುವುದು ಕಡಿಮೆಯೇನಲ್ಲ. ನಿವೃತ್ತಿಯಾಗಲು ಇದಕ್ಕಿಂತ ಉತ್ತಮ ಸಮಯ ಇಲ್ಲ. 

ನಮ್ಮದು ಯುವ ಭಾರತ ಎನ್ನುತ್ತೇವೆ. ಆದರೆ ನಮ್ಮನ್ನಾಳುವವರು ಮಾತ್ರ ಹಿರಿಯರು. ಯುವಕರಿಗೆ ಅವಕಾಶ ಕೊಡಬೇಕು ಎನ್ನುವುದು ಮಾತಿಗಷ್ಟೇ ಸೀಮಿತವಾದ ಆಶಯ. ಈ ಸಂದರ್ಭದಲ್ಲಿ ಆಡ್ವಾಣಿ ಪ್ರಾಯದ ನೆಪವೊಡ್ಡಿ ಚುನಾವಣಾ ರಾಜಕೀಯದಿಂದ ನಿರ್ಗಮಿಸಲು ಇಚ್ಚಿಸಿರುವುದು ಸಕಾಲಿಕ ನಿರ್ಧಾರ. ಎನ್‌ಸಿಪಿ ನಾಯಕ ಶರದ್‌ ಪವಾರ್‌ ಕೂಡಾ ಈ ರೀತಿಯ ನಿರ್ಧಾರ ಕೈಗೊಂಡಿದ್ದಾರೆ. ಗಾಲಿ ಕುರ್ಚಿಯಲ್ಲಿ ಓಡಾಡುತ್ತಾ, ಆರೋಗ್ಯ ಕೈಕೊಟ್ಟಿದ್ದರೂ ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗಲು ಹಿಂದೇಟು ಹಾಕುತ್ತಿರುವವರನ್ನು ನೋಡುವಾಗ ತಾನಾಗೇ ಇನ್ನು ಚುನಾವಣೆ ಬೇಡ ಎಂದಿರುವ ಆಡ್ವಾಣಿ ಹಾಗೂ ಅವರಂಥ ಕೆಲವರು ಗ್ರೇಟ್‌ ಎನಿಸುತ್ತಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next