ವಿಧಾನಸಭೆ: ಶಾಸಕರೊಬ್ಬರು ರಂಜಾನ್ ಪ್ರಯುಕ್ತ ಇಫ್ತಿಯಾರ್ ಕೂಟಕ್ಕೆ ಒತ್ತಾಯ ಮಾಡಿ ಕರೆದೊಯ್ದಾಗ ಅವರ ಐಎಂಎ ಸಂಸ್ಥೆ ಕಚೇರಿಗೆ ಹೋಗಿದ್ದೆ. ಅಲ್ಲಿ ಖರ್ಜೂರ ತಿಂದು ಬಂದೆ ಅಷ್ಟೆ. ಬಿರಿಯಾನಿ ತಿನ್ನಲು ಹೋಗಿರಲಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸೋಮವಾರ ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆಯ ವೇಳೆ ಸಚಿವ ಕೃಷ್ಣಬೈರೇಗೌಡರು ಹಗರಣದ ಬಗ್ಗೆ ಪ್ರಸ್ತಾಪಿಸಿದಾಗ ಮಧ್ಯಪ್ರವೇಶಿಸಿದ ಬಿಜೆಪಿಯ ಸಿ.ಟಿ.ರವಿ, 46 ಸಾವಿರ ಕುಟುಂಬಗಳಿಗೆ ಅನ್ಯಾಯ ಮಾಡಿದ ಸಂಸ್ಥೆಯ ಮುಖ್ಯಸ್ಥನ ಬಳಿ ಚುನಾವಣೆಗೆ ಹಣ ಪಡೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ನಿನ್ನ ಜತೆಯಿದೆ ಎಂದು ಆತನಿಗೆ ರಕ್ಷಣೆ ಕೊಡುವ ಹೇಳಿಕೆ ಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆತನ ಜತೆ ಬಿರ್ಯಾನಿ ತಿಂದವರೂ ಆ ಬಗ್ಗೆ ಮಾತನಾಡಬೇಕು ಎಂದು ಹೇಳಿದರು.
ಐಎಂಎ ಕಂಪನಿ ಬಗ್ಗೆ ಈ ಹಿಂದೆಯೇ ದೂರು ಬಂದಿದ್ದರೂ ಮುಖ್ಯಸ್ಥನಿಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಆತನಿಗೆ ಕ್ಲೀನ್ ಚಿಟ್ ಕೊಟ್ಟವನು ಜೈಲಿನಲ್ಲಿದ್ದಾನೆ. ಯಾರ ಬಳಿ ಆಡಳಿತ ಇತ್ತೋ, ಇಂಟಲಿಜೆನ್ಸ್ ಇತ್ತೋ ಅವರೇ ಅವನನ್ನು ರಕ್ಷಣೆ ಮಾಡಿದ್ದಾರೆ ಎಂದು ದೂರಿದರು. ಆಗ, ಸಿಎಂ ಎಚ್.ಡಿ.ಕುಮಾರಸ್ವಾಮಿ ಎದ್ದುನಿಂತು, ಬಿಜೆಪಿಯವರು ಯಾರ ಬಗ್ಗೆ ಬಿರ್ಯಾನಿ ತಿಂದರು ಎಂದು ಹೇಳುತ್ತಿದ್ದಾರೆ ಗೊತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆ ಬಗ್ಗೆ ಆರೋಪ ಸಹ ಮಾಡಲಾಗುತ್ತಿದೆ.
ನಾನು ಬಿರ್ಯಾನಿ ತಿನ್ನಲು ಹೋಗಿರಲಿಲ್ಲ. ಎರಡನೇ ಬಾರಿ ಹೃದಯ ಶಸ್ತ್ರಚಿಕಿತ್ಸೆಯಾದ ನಂತರ ನಾನು ನಾನ್‌ವೆಜ್ ಬಿಟ್ಟಿದ್ದೇನೆ ಎಂದರು. ಐಎಂಎ ಅಧ್ಯಕ್ಷರ ಪರಿಚಯವಿರಲಿಲ್ಲ. ಶಾಸಕರೊಬ್ಬರ ಒತ್ತಡಕ್ಕೆ ಮಣಿದು ಅಲ್ಲಿಗೆ ಹೋಗಿದ್ದೆ, ಅಲ್ಲಿ ಆ ಸಂಸ್ಥೆಯಲ್ಲಿ ಪ್ರಧಾನಿಯವರ ಭಾವಚಿತ್ರ ಹಾಕಲಾಗಿತ್ತು. 250 ಕೋಟಿ ರೂ. ತೆರಿಗೆ ಕೊಟ್ಟಿದ್ದಕ್ಕೆ ಪ್ರಶಸ್ತಿ ಕೊಟ್ಟಿರುವ ಬಗ್ಗೆಯೂ ಫೋಟೋ ಹಾಕಲಾಗಿತ್ತು ಎಂದರು. ಸಮ್ಮಿಶ್ರ ಸರ್ಕಾರ ಯಾವುದೇ ಕಾರಣಕ್ಕೂ ಬಡವರನ್ನು ವಂಚಿಸಿದವರನ್ನು ಬಿಡುವುದಿಲ್ಲ. ಈಗಾಗಲೇ ಎಸ್‌ಐಟಿಗೆ ಪ್ರಕರಣ ವಹಿಸಲಾಗಿದ್ದು ಸಂಸ್ಥೆಯ ಮುಖ್ಯಸ್ಥನನ್ನೂ ಬಂಧಿಸಲಾಗಿದೆ ಎಂದು ಹೇಳಿದರು.
ಸ್ಪೀಕರ್ ಚಟಾಕಿ: “ನಾನ್ ವೆಜ್ ಬಿಟ್ಟಿದ್ದೇನೆ’ ಎಂಬ ಕುಮಾರಸ್ವಾಮಿಯವರ ಮಾತಿಗೆ, ಸ್ಪೀಕರ್ ರಮೇಶ್‌ಕುಮಾರ್, “ಹಾಗೆ ಮಾಡಬೇಡಿ. ನಾನು ಅಮ್ಮಾ ಅವರಿಗೆ ಹೇಳೆ¤àನೆ. ಫಿಶ್ ಹಾಗೂ ನಾಟಿ ಕೋಳಿ ತಿನ್ನಿ. ಇಲ್ಲದಿದ್ದರೆ ನಾವು ತಿಂದು ತಿನ್ನೋರು ಬಿಟ್ಟಂತಾಗುತ್ತದೆ’ ಎಂದು ಚಟಾಕಿ ಹಾರಿಸಿದರು.