Advertisement

ಬಿರುಮಲೆ ಬೆಟ್ಟ  ಸೊಗಸಿನ ತಾಣ: ಕನಸು ನನಸಾಗುವುದು ಎಂದು?

04:59 PM Oct 07, 2017 | |

ನಗರ: ಬಿರುಮಲೆ ಬೆಟ್ಟವನ್ನು ಸೊಗಸಿನ ತಾಣವಾಗಿಸುವ ಕನಸನ್ನು ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಆಗಾಗ ಜನರ ಮುಂದಿಡುತ್ತಿದ್ದಾರೆಯೇ ವಿನಾ ಯಾವುದೇ ಮಹತ್ತರ ಯೋಜನೆಯಾಗಲಿ, ಅಭಿವೃದ್ಧಿ ಕಾಮಗಾರಿಯಾಗಲಿ ನಡೆಸಲು ಈವರೆಗೆ ಸಾಧ್ಯವಾಗಿಲ್ಲ.

Advertisement

ಇಲ್ಲಿ ದೂರದರ್ಶನ ಮರು ಪ್ರಸಾರ ಕೇಂದ್ರ, ಚಿಣ್ಣರ ಪಾರ್ಕ್‌ ಆಟದ ಸಾಮಗ್ರಿಗಳು, ಗಾಂಧಿ ಮಂಟಪ, ಗ್ರಂಥಾಲಯ ಹೀಗೆ ಕೆಲವೊಂದು ವ್ಯವಸ್ಥೆಗಳು ಹೆಸರಿಗೆ ಮಾತ್ರವಿದೆಯೇ ವಿನಾ ಎಷ್ಟು ಸಮರ್ಪಕವಾಗಿದೆ ಎನ್ನುವುದನ್ನು ಹೋಗಿಯೇ ನೋಡಬೇಕು! ಸ್ಥಳೀಯ ಜೇಸಿಐ ಸಹಿತ ಸಂಘ -ಸಂಸ್ಥೆಗಳು ಸ್ವತ್ಛತೆ ಮಾಡಿದರೆ ಉಂಟು, ಇಲ್ಲದಿದ್ದರೆ ಈ ಬೆಟ್ಟಕ್ಕೆ ಕಾಲಿಡಲೂ ಸಾಧ್ಯವಾಗದ ಸ್ಥಿತಿ ಇದೆ.

ಬೆಟ್ಟ ವರವಾಗಲಿಲ್ಲ…!
ಪ್ರಾಕೃತಿಕವಾಗಿ ಪುತ್ತೂರಿಗೆ ಬೀರಮಲೆ ಎಂಬ ಬೆಟ್ಟ ವರವಾಗಿದ್ದರೂ ಕಳೆದ ಹಲವಾರು ವರ್ಷಗಳಿಂದ ಬಿರುಮಲೆ ಬೆಟ್ಟ ಪ್ರವಾಸಿ ತಾಣವಾಗಿರದೆ ಅನೈತಿಕ ತಾಣವಾಗಿಯೇ ಉಳಿದುಕೊಂಡಿದೆ. ಬೆಟ್ಟಕ್ಕೆ ಹೋಗುವ ದಾರಿಯ ಇಕ್ಕೆಲಗಳು ಪೊದೆಗಳಿಂದ ಕೂಡಿರುವುದು, ರಕ್ಷಣಾ ಸಿಬಂದಿ ಇಲ್ಲದಿರುವುದೂ ಇದಕ್ಕೆ ಕಾರಣವಾಗಿದೆ. ಜತೆಗೆ ಪಕ್ಕದ ಜಾಗಗಳಲ್ಲಿ ಸಮತಟ್ಟು ಮಾಡುವ ಕಾರ್ಯ ನಡೆಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನಗಳಿಗೂ ಕಾರಣವಾಗಿದೆ.

ಆಗಬೇಕಾದ ಅಭಿವೃದ್ಧಿ
ಮುಖ್ಯವಾಗಿ ಬಿರುಮಲೆ ಬೆಟ್ಟವನ್ನು ಸಂಪರ್ಕಿಸುವ ರಸ್ತೆಗೆ ಸಂಪೂರ್ಣ ಡಾಮರು ಅಥವಾ ಕಾಂಕ್ರಿಟ್‌ ಹಾಕಬೇಕಾಗಿದೆ. ಮಕ್ಕಳ ಅನುಕೂಲತೆಗಾಗಿ ಈಗ ಇರುವ ಚಿಣ್ಣರ ಪಾರ್ಕ್‌ನ್ನು ವಿಸ್ತರಿಸಬೇಕು. ಈಗಾಗಲೇ ಇರುವ ರಂಗಮಂದಿರವನ್ನು ಸುಸಜ್ಜಿತಗೊಳಿಸಬೇಕು, ಸುಸಜ್ಜಿತ ಗ್ರಂಥಾಲಯ, ಹೂತೋಟ, ಶೌಚಾಲಯ ಅಂತೂ ಪ್ರವಾಸಿ ತಾಣಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಾಗಿದೆ. ಒಟ್ಟಿನಲ್ಲಿ ಪೂರ್ಣ ಪ್ರಮಾಣದ ಪ್ರವಾಸೋದ್ಯಮ ಕೇಂದ್ರವಾಗಿ ಮಾರ್ಪಾಡಾಗಬೇಕಾಗಿದೆ.

ಟ್ರೀ ಪಾರ್ಕ್‌ ಇಲ್ಲ
ಅರಣ್ಯ ಇಲಾಖೆಯ ವತಿಯಿಂದ ಬಿರುಮಲೆ ಬೆಟ್ಟದಲ್ಲಿ ಟ್ರೀ ಪಾರ್ಕ್‌ ರಚನೆಗೆ ಸರಕಾರಕ್ಕೆ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಆ ಪ್ರಸ್ತಾವನೆಯೂ ಮುಂದಕ್ಕೆ ಬೆಳವಣಿಗೆಯಾಗಿಲ್ಲ. ಬೆಟ್ಟ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಮಿತಿ ಕಾರ್ಯನಿರ್ವಹಿಸುತ್ತಿದ್ದರೂ ಕೇವಲ ಸಭೆಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ನೀಡುವುದಕ್ಕಷ್ಟೇ ಸೀಮಿತವಾಗಿದೆ. ವಾರ್ಷಿಕವಾಗಿ ಮಕ್ಕಳ ಹಬ್ಬವೊಂದು ಇಲ್ಲಿ ನಡೆಯುವುದು ಬಿಟ್ಟರೆ ಬೇರೆ ಯಾವುದೇ ಕಾರ್ಯಕ್ರಮಗಳೂ ನಡೆಯುತ್ತಿಲ್ಲ.

Advertisement

3 ಕೋಟಿ ರೂ. ಮಂಜೂರಾಗಿಲ್ಲ 
ಬಿರುಮಲೆ ಬೆಟ್ಟದ ಬಾಕಿ ಇರುವ ಸಂಪರ್ಕ ರಸ್ತೆ ಅಭಿವೃದ್ಧಿ ಹಾಗೂ ಒಟ್ಟು ಅಭಿವೃದ್ಧಿಗೆ ನಬಾರ್ಡ್‌ ಗೆ 3 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಅನುದಾನ ಮಂಜೂರಾತಿ ಮಾತ್ರ ಇನ್ನೂ ಆಗಿಲ್ಲ. ಮುಕ್ರಂಪಾಡಿ ಭಾಗದಿಂದ, ಗೋಳಿಕಟ್ಟೆ ಭಾಗದಿಂದ ಹಾಗೂ ದರ್ಬೆ ಭಾಗದಿಂದ ಸಂಪರ್ಕ ರಸ್ತೆ ಸಹಿತ ಇತರ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆ ಸಲ್ಲಿಸಿ ನಬಾರ್ಡ್‌ ನಿಂದ ಪತ್ರ ಬಂದ ಬಳಿಕ ಶಾಸಕರ ನೇತೃತ್ವದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಕ್ಷೆ ತಯಾರಿಸಿ ಕಳುಹಿಸಲಾಗಿದೆ.

ಅನುದಾನದ ನಿರೀಕ್ಷೆ
ಬೀರಮಲೆ ಬೆಟ್ಟ ಸಂಪರ್ಕ ರಸ್ತೆ ಸಹಿತ ವಿವಿಧ ರೀತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಯೋಜನೆ ಸಹಿತ 3 ಕೋಟಿ ರೂ. ಪ್ರಸ್ತಾವನೆಯನ್ನು ನಬಾರ್ಡ್‌ಗೆ ಕಳುಹಿಸಲಾಗಿದೆ. ಶಾಸಕರೂ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಅನುದಾನ ಮಂಜೂರಾಗಿಲ್ಲ. ಅನುದಾನದ ನಿರೀಕ್ಷೆಯಲ್ಲಿದ್ದೇವೆ.
ಪ್ರಮೋದ್‌ ಕುಮಾರ್‌
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌,
ಲೋಕೋಪಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next