ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಖರ್ಗೆ ಸೇರಿದಂತೆ ಪ್ರಮುಖ ನಾಯಕರಿಂದ ಶುಭಾಶಯಗಳ ಮಹಾಪೂರ ಹರಿದುಬಂದಿದೆ.
ಎನ್‌ಡಿಎ ಮೈತ್ರಿ ಪಕ್ಷದ ನಾಯಕರೂ ಶುಭಾಹಾರೈಸಿದ್ದು, ಮಾಜಿ ಪ್ರಧಾನಿ ದೇವೇಗೌಡ ಅವರೂ ಟ್ವೀಟ್ ಮೂಲಕ ಪ್ರಧಾನಿ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸಲು ದೇಶ ಮೊದಲು ಎಂಬ ನಿಮ್ಮ ಧ್ಯೇಯ ಸಾರ್ಥಕವಾಗಲು ನಿಮಗೆ ದೇವರು ಆಯಸ್ಸು, ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುರ್ಮು ಟ್ವೀಟ್ ಮಾಡಿದ್ದಾರೆ.
ಮೋದಿ ಸಂಪುಟದ ಸಚಿವರಾದ ಅಮಿತ್ ಶಾ, ರಾಜನಾಥ ಸಿಂಗ್, ಜೆ.ಪಿ.ನಡ್ಡಾ ಸೇರಿದಂತೆ ಬಿಜೆಪಿ ನಾಯಕರೆಲ್ಲರೂ ಶುಭ ಹಾರೈಸಿದ್ದಾರೆ. ದೇಶಾದ್ಯಂತ ಬಿಜೆಪಿ ಘಟಕಗಳು, ಅಂಗಸಂಸ್ಥೆಗಳು ಹಾಗೂ ಪ್ರಧಾನಿ ಬೆಂಬಲಿಗರು ಸೇರಿ ರಕ್ತದಾನ, ದಾಸೋಹದಂತ ವಿವಿಧ ಕಾರ್ಯಕ್ರಮಗಳನ್ನೂ ಮಂಗಳವಾರ ನಡೆಸಿದ್ದಾರೆ.
ತಾಯಿಯ ನೆನೆದ ಮೋದಿ: ಆದಿವಾಸಿ ತಾಯಿಂದ ಸಿಹಿ
ಒಡಿಶಾದ ಭುವನೇಶ್ವರದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತಮ್ಮ ತಾಯಿಯನ್ನು ಸ್ಮರಿಸಿದ್ದಾರೆ. “”ನನ್ನ ಹುಟ್ಟುಹಬ್ಬದಂದು ಪ್ರತಿವರ್ಷ ನನ್ನ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದೆ. ಅವರು ನನಗೆ ಸಿಹಿ ತಿನಿಸುತ್ತಿದ್ದರು, ಈಗ ಅವರಿಲ್ಲ. ಆದರೆ, ನಾನು ಇಲ್ಲಿಗೆ ಬರುವ ಮೊದಲು ಆದಿವಾಸಿ ಕುಟುಂಬವೊಂದರ ಗೃಹ ಪ್ರವೇಶಕ್ಕೆ ತೆರಳಿದ್ದೆ. ಆ ಮನೆಯ ತಾಯಿ ನನಗೆ ಸಿಹಿ ತಿನಿಸಿ ಆಶೀರ್ವದಿಸಿದರು” ಎಂದಿದ್ದಾರೆ.