ಮುಂಬೈ: ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್, ಲಿಟಲ್ ಮಾಸ್ಟರ್ ಸಚಿನ್ ರಮೇಶ್ ತೆಂಡೂಲ್ಕರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕ್ರಿಕೆಟ್ ಲೋಕದ ಸರ್ವಶ್ರೇಷ್ಠ ರಾಯಭಾರಿಯಾಗಿ ಮೆರೆದ ಮುಂಬೈಕರ್ ಸದ್ಯ ವಿಶ್ರಾಂತ ಜೀವನದಲ್ಲಿದ್ದಾರೆ. ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ತೆಂಡೂಲ್ಕರ್ ಮಾಡಿರುವ ಕೆಲವು ದಾಖಲೆಗಳ ಪರಿಚಯ ಇಲ್ಲಿದೆ.
ತನ್ನ 24 ವರ್ಷದ ಕ್ರಿಕೆಟ್ ಬಾಳಿನಲ್ಲಿ ಸಚಿನ್ ಎಂದರೆ ಕ್ರಿಕೆಟ್, ಕ್ರಿಕೆಟ್ ಎಂದರೆ ಸಚಿನ್ ಎನ್ನುವಷ್ಟರ ಮಟ್ಟಿಗೆ ಕ್ರಿಕೆಟ್ ಅನ್ನು ಉಸಿರಾಗಿಸಿ ಆಡಿದವರು. ಒಟ್ಟು 664 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ತೆಂಡೂಲ್ಕರ್ 34357 ರನ್ ಗಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ 51 ಶತಕ ಮತ್ತು ಏಕದಿನದಲ್ಲಿ 49 ಶತಕಗಳು ಸಚಿನ್ ಬ್ಯಾಟಿನಿಂದ ಸಿಡಿಯಲ್ಪಟ್ಟಿವೆ. ಶತಕಗಳ ಶತಕ ಬಾರಿಸಿರುವ ಏಕಮಾತ್ರ ಆಟಗಾರ ಸಚಿನ್ ತೆಂಡೂಲ್ಕರ್.
ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿಸಲು ಸಾಧ್ಯವೇ ಇಲ್ಲವೆನ್ನುವ ಕಾಲದಲ್ಲಿ ಮೊತ್ತ ಮೊದಲ ಬಾರಿಗೆ ಏಕದಿನ ದ್ವಿಶತಕ ಬಾರಿಸಿದ್ದರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್.
76 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವ ಸಚಿನ್, 20 ಸಲ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಉತ್ತಮ ಲೆಗ್ ಸ್ಪಿನ್ ಬೌಲರ್ ಕೂಡಾ ಆಗಿದ್ದ ಅವರು ಒಟ್ಟು 201 ವಿಕೆಟ್ ಕೂಡಾ ಕಬಳಿಸಿದ್ದಾರೆ.
ಭಾರತದ ಅತ್ಯುನ್ನತ ಭಾರತ ರತ್ನ, ಪದ್ಮ ವಿಭೂಷಣ, ಪದ್ಮಶ್ರೀ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.