ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿರುವ ಕಾವೇರಿ ಹೆಸರಿನ ಜೀಬ್ರಾ ಹೆಣ್ಣು ಮರಿಗೆ ಜನ್ಮ ನೀಡಿದೆ. ಈ ಮೂಲಕ ಇತ್ತೀಚೆಗಷ್ಟೇ ಜಿಬ್ರಾವೊಂದು ಮೃತಪಟ್ಟಿದ್ದ ಕಹಿಘಟನೆ ಮರೆಯುವಂತಾಗಿದೆ. ಜೀಬ್ರಾ ಹೆಣ್ಣು ಮರಿಗೆ ಜನ್ಮ ನೀಡಿರುವುದು ಅಧಿಕಾರಿಗಳಲ್ಲಿ ಸಂತಸ ಮೂಡಿಸಿದೆ. ಅಲ್ಲದೆ ಜೀಬ್ರಾ ಮರಿ ಇಲ್ಲಿಗೆ ಬಂದ ಪ್ರವಾಸಿಗರ ಆಕರ್ಷಣೆ ಕೇಂದ್ರವಾಯಿತು.
ವೈದ್ಯಾಧಿಕಾರಿ ಡಾ.ಉಮಾಶಂಕರ್, ವಲಯ ಅರಣ್ಯಾಧಿಕಾರಿ ಚಂದ್ರಗೌಡ ಸ್ಥಳಕ್ಕೆ ಬೇಟಿ ನೀಡಿ ತಾಯಿ ಹಾಗೂ ಮರಿ ಜೀಬ್ರಾವನ್ನು ಕಾಳಜಿಯಿಂದ ಆರೈಕೆ ಮಾಡಲು ಪ್ರಾಣಿ ಪಾಲಕರಿಗೆ ಸೂಚಿಸಿದರು. 8 ವರ್ಷದ ಕಾವೇರಿ ಜೀಬ್ರಾಗೆ ಇದು 2ನೇ ಮರಿಯಾಗಿದೆ. ಈ ಹಿಂದೆ ಗಂಡು ಮರಿಗೆ ಜನ್ಮ ನೀಡಿತ್ತು. ಮುದ್ದಾಗಿ ಕಾಣುವ ಜಿಬ್ರಾ ಮರಿಯನ್ನು ಪ್ರವಾಸಿಗರು ತಮ್ಮ ಮಕ್ಕಳಿಗೆ ತೋರಿಸಿದರು.
ಜಿಬ್ರಾಗಳು ಸೂಕ್ಷ್ಮ ಜೀವಿಗಳಾಗಿದ್ದು, ಹೆಚ್ಚು ಮಳೆ, ಬಿಸಿಲನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಸಮ ಪ್ರಮಾಣದ ವಾತಾವರಣವಿದ್ದರೆ ವಿರಮಿಸುತ್ತವೆ. ಗರ್ಭಿಣಿ ಜೀಬ್ರಾವನ್ನು ವೈದ್ಯಾಧಿಕಾರಿಗಳು ವಿಶೇಷ ಕಾಳಜಿಯಿಂದ ನೋಡಿಕೊಂಡಿದ್ದರು. ಸಮಯಕ್ಕೆ ಸರಿಯಾಗಿ ಪ್ರೋಟೀನ್‌ಯುಕ್ತ ಆಹಾರ ನೀಡಲಾಗುತ್ತಿತ್ತು. ಹೀಗಾಗಿ ತಾಯಿ ಹಾಗೂ ಮರಿ ಜೀಬ್ರಾ ಆರೋಗ್ಯವಾಗಿದ್ದಾರೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.
ಹಿನ್ನೆಲೆ: 2015ರಲ್ಲಿ ಉದ್ಯಾನವನಕ್ಕೆ ವಿಶೇಷ ಅತಿಥಿಗಳಾಗಿ ಇಸ್ರೇಲ್ ದೇಶ ಜೂವಾಲಾಜಿಕಲ್ ಸೆಂಟರ್ ಟೆಲ್ ಅವ್ ರಮಾತ್ ಗನ್ ಸಫಾರಿಯಿಂದ ಎರಡು ಹೆಣ್ಣು , ಎರಡು ಗಂಡು ಜಿಬ್ರಾಗಳನ್ನು ತರಿಸಿಕೊಳ್ಳಲಾಗಿತ್ತು. ಬಳಿಕ 2017ರಲ್ಲಿ ಗರ್ಭ ಧರಿಸಿದ್ದ ಹೆಣ್ಣು ಜಿಬ್ರಾ ಮೃತ ಪಟ್ಟಿತ್ತು. 2018ರಲ್ಲಿ ಕಾವೇರಿ ಗಂಡು ಮರಿಗೆ ಜನ್ಮ ನೀಡಿತ್ತು. ಆದರೆ ಮತ್ತೂಂದು ಗಂಡು ಜಿಬ್ರಾ ಮೃತ ಪಟ್ಟು, ಮತ್ತೂ ಮೂರೇ ಜಿಬ್ರಾಗಳು ಉಳಿದಿದ್ದವು. ಸದ್ಯ ಜನಿಸಿರುವ ಮರಿ ಸಹ ಹೆಣ್ಣಾಗಿದೆ. ಈಗ ಎರಡು ಗಂಡು ಎರಡು ಹೆಣ್ಣು ಜಿಬ್ರಾಗಳಿರುವುದು ಸಂತಸ ತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ಗಂಡು ಜೀಬ್ರಾ ಪ್ರತ್ಯೇಕ: ಮೊದಲಿನಿಂದಲೂ ಮೂರು ಜಿಬ್ರಾಗಳು ಒಟ್ಟಿಗೆ ಇರುತ್ತಿದ್ದವು. ಹೊಸ ಮರಿ ಆಗಮನದ ಬಳಿಕ ಗಂಡು ಜೀಬ್ರಾ, ಒಂದು ವರ್ಷದ ಜೀಬ್ರಾದೊಂದಿಗೆ ಜಗಳ ಆರಂಭಿಸಿತು. ಇದರಿಂದಾಗಿ ಗಂಡು ಜೀಬ್ರಾವನ್ನು ಇವುಗಳಿಂದ ಪ್ರತ್ಯೇಕವಾಗಿ ಇರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.