ದುಬಾೖ: ಹಿಂದೂ ತಂದೆ ಹಾಗೂ ಮುಸ್ಲಿಂ ತಾಯಿಗೆ ಜನಿಸಿದ ಮಗುವಿಗೆ ದುಬಾೖ ಸರಕಾರ ಇದೇ ಮೊದಲ ಬಾರಿಗೆ ಜನನ ಪ್ರಮಾಣಪತ್ರ ನೀಡಿದೆ. ವಲಸಿಗರ ವಿವಾಹ ನಿಯಮದ ಪ್ರಕಾರ ಮುಸ್ಲಿಂ ಮಹಿಳೆಯು ಅನ್ಯಧರ್ಮದ ಪುರುಷನನ್ನು ವಿವಾಹವಾಗುವಂತಿಲ್ಲ. ಆದರೆ ಇತರ ಧರ್ಮದ ಮಹಿಳೆಯರು ಮುಸ್ಲಿಂ ಪುರುಷರನ್ನು ವಿವಾಹವಾಗಬಹುದಾಗಿದೆ!
ಕೇರಳದ ಕಿರಣ್ ಬಾಬು ಹಾಗೂ ಸನಮ್ ಸಬೂ ಸಿದ್ದಿಕಿ 2016ರಲ್ಲಿ ವಿವಾಹವಾಗಿದ್ದರು. 2018ರ ಜುಲೈನಲ್ಲಿ ಇವರಿಗೆ ಹೆಣ್ಣು ಮಗು ಜನಿಸಿತಾದರೂ, ದುಬಾೖನಲ್ಲಿನ ನೀತಿಯಿಂ ದಾಗಿ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದರು.
ನಾನು ಅಬುಧಾಬಿ ವೀಸಾ ಹೊಂದಿದ್ದೇನೆ. ಮಗು ಜನಿಸಿದ ನಂತರ ನಾನು ಹಿಂದೂ ಎಂಬ ಕಾರಣಕ್ಕೆ ಮಗುವಿಗೆ ಜನನ ಪ್ರಮಾಣಪತ್ರ ನೀಡಲಿಲ್ಲ. ಕೋರ್ಟ್ ನಲ್ಲೂ ನಮಗೆ ಜಯ ಸಿಗಲಿಲ್ಲ. ನನ್ನ ದೂರನ್ನು ಕೋರ್ಟ್ ತಿರಸ್ಕರಿಸಿತು ಎಂದು ಕಿರಣ್ ಹೇಳಿದ್ದಾರೆ. ಆದರೆ 2019ನೇ ವರ್ಷವನ್ನು ದುಬಾೖ “ಸಹಿಷ್ಣುತೆಯ ವರ್ಷ’ ಎಂದು ಘೋಷಿಸಿದೆ. ಈ ಅವಧಿಯಲ್ಲಿ ವಿಭಿನ್ನ ಸಂಸ್ಕೃತಿಯೊಂದಿಗೆ ಹೊಂದಿರುವ ಅಂತರವನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ದುಬಾೖ ರಾಜಮನೆತನ ನಿರ್ಧರಿಸಿದೆ.
ರಾಜ ಮನೆತನದ ಈ ನಿರ್ಧಾರ ನನಗೆ ನಿರೀಕ್ಷೆಯನ್ನು ಹುಟ್ಟಿಸಿತು. ಇದಕ್ಕೆ ಭಾರತದ ರಾಯಭಾರ ಕಚೇರಿಯೂ ನನಗೆ ನೆರವು ನೀಡಿತು. ಮಗು ಜನಿಸಿದ ಬಗ್ಗೆ ದಾಖಲೆಯೇ ಇಲ್ಲದ್ದರಿಂದ ವಲಸೆ ಕ್ಲಿಯರೆನ್ಸ್ ಕೂಡ ನೀಡುತ್ತಿರಲಿಲ್ಲ. ನ್ಯಾಯಾಂಗ ವಿಭಾಗವು ನನ್ನ ಪ್ರಕರಣವನ್ನು ವಿಶೇಷ ಎಂದು ಪರಿಗಣಿಸಿತು. ಈ ಬಾರಿ ಪ್ರಕರಣವನ್ನು ಕೋರ್ಟ್ ಕೂಡ ಸಮ್ಮತಿಸಿತು. ಪವಿತ್ರ ವಿಶು ಹಬ್ಬಕ್ಕೂ ಮೊದಲ ದಿನ ಅಂದರೆ ಏಪ್ರಿಲ್ 14 ರಂದು ಪುತ್ರಿ ಅನಮ್ತಾ ಅಸೆಲಿನ್ ಕಿರಣ್‌ಗೆ ಕೋರ್ಟ್ ಜನನ ಪ್ರಮಾಣ ಪತ್ರ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ಕಿರಣ್.
ಇದೇ ಮೊದಲ ಬಾರಿಗೆ ನೀತಿಯನ್ನು ಬದಲಿಸಿ ಜನನ ಪ್ರಮಾಣ ಪತ್ರ
ನೀಡಲಾಗಿದೆ. ಅಷ್ಟೇ ಅಲ್ಲ, ಇದು ದುಬಾೖ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದೂ ಆಗಿರಲಿದ್ದು, ಇನ್ನಷ್ಟು ವಿವಿಧ ಧರ್ಮೀಯ ದಂಪತಿಗಳು ಈ ಬಗ್ಗೆ ಕೋರ್ಟ್ ಮೊರೆ ಹೋಗಲು ನೆರವಾಗಲಿದೆ.