Advertisement
ಅವರ ಅನೇಕ ಕಾವ್ಯಗಳ ಹಿಂದೆ ಅವರ ಜೀವನದ ದುರಂತ ಕಥೆಗಳೇ ಅಡಗಿದ್ದಾವೆನ್ನವುದನ್ನು ತಿಳಿದವರು ವಿರಳವೆನ್ನಬಹುದು. ಮಗ ಸತ್ತರೆ ಪದ್ಯ, ಮಗಳು ಹುಟ್ಟಿದರೆ ಪದ್ಯ, ಮಡದಿಗೆ ಬರೆದ ಪತ್ರವೂ ಪದ್ಯ ಹೀಗೆ ತನ್ನ ವೈಯಕ್ತಿಕ ಬದುಕಿನ ವಿಷಯಗಳನ್ನೇ ಕವಿತೆಯಾಗಿಸಿ ಬರೆದವರಲ್ಲಿ ಬೇಂದ್ರೆಯೇ ಹೆಚ್ಚು.
Related Articles
Advertisement
‘ನರಬಲಿ’ ಪದ್ಯದ ಅನುವಾದ ಕೇಳುತ್ತಿದ್ದಂತೆ ಬ್ರಿಟೀಷರು ಬೇಂದ್ರೆಯವರನ್ನು ಬಂಧಿಸುತ್ತಾರೆ. ಒಂದು ವರ್ಷ ಜೈಲು ಮತ್ತು ಮುಂದಿನ ಹತ್ತು ವರ್ಷಗಳ ಕಾಲ ಯಾವುದೇ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಅವರಿಗೆ ಮೇಷ್ಟ್ರು ಕೆಲಸ ನೀಡದಂತೆ ನಿರ್ಬಂಧ ವಿಧಿಸುತ್ತಾರೆ. ಕೇವಲ ಹಾಡೊಂದನ್ನು ಬರೆದಿದ್ದಕ್ಕೆ ಈ ಪರಿಯ ಶಿಕ್ಷೆ ವಿಧಿಸಿದರೆಂದರೆ ಆ ಹಾಡಿನ ಸಾಲುಗಳ ಶಕ್ತಿ ಏನಿದ್ದಿರಬಹುದು? ದಯವಿಟ್ಟು ಒಮ್ಮೆ ಓದಿ, ಖಂಡಿತವಾಗಿಯೂ ರೋಮಾಂಚಿತರಾಗುವಿರಿ.
ಬ್ರಿಟೀಷರ ನಿರ್ಬಂಧದ ಅವಧಿ ಮುಗಿದ ನಂತರ ಗದಗದ ಶಾಲೆಯೊಂದರಲ್ಲಿ ಮುಖ್ಯೋಪಾದ್ಯಾಯರ ಕೆಲಸ ಸಿಕ್ಕಿತು. ಆದರೆ ಕೆಲವೇ ತಿಂಗಳಲ್ಲಿ ಆ ಕೆಲಸವನ್ನೂ ಕಳೆದುಕೊಂಡು ಮುಂದೇನು ಎಂದು ತಿಳಿಯದೆ ತನ್ನೂರು ಧಾರವಾಡದ ಸಾಧನಕೇರಿಯ ಕಡೆ ಹೆಜ್ಜೆ ಹಾಕಿದರು. ತನ್ನ ಸ್ವಂತ ಭವಿಷ್ಯಕ್ಕೆ ಕತ್ತಲು ಕವಿದಿದ್ದರೂ ‘’ಮರವು ಮುಗಿಲಿಗೆ ನೀಡಿದೆ, ಗಿಡದ ಹೊದರೊಳು ಹಾಡಿದೆ, ಗಾಳಿ ಎಲ್ಲೂ ಆಡಿದೆ, ದುಗುಡ ಇಲ್ಲಿಂದೋಡಿದೆ.. ಬಾರೋ ಸಾಧನ ಕೇರಿಗೆ ಮರಳಿ ನಿನ್ನೀ ಊರಿಗೆ..” ಎಂದು ರಸದ ಹಾಡನ್ನೇ ನಮಗೆ ನೀಡುತ್ತಾರೆ ಆ ಯುಗದ ಕವಿ.
ತಮಗೆ ಹುಟ್ಟಿದ ಒಂಭತ್ತು ಜನ ಮಕ್ಕಳಲ್ಲಿ ಆರು ಮಕ್ಕಳು ವಿಧಿಯ ಕ್ರೂರ ಲೀಲೆಗೆ ಬಲಿಯಾಗುತ್ತಾರೆ. ‘’ದಕ್ಕಿದ ಸಂತಾನವು ಮೂರೇ ಪಾಂಡುರಂಗ ವಾಮನ ಮಂಗಳ, ಆರು ಸಂತಾನಗಳ ಅರ್ಪಣ ತರ್ಪಣವು ಸಾಂಸಾರಿಕ ಯಜ್ಞದ ದೈವ ಇದನ್ನು ಶಿವಕರುಣೆ ಎಂದು ಸ್ವೀಕರಿಸಿ..’’ ಎಂದು ಅರ್ಪಣ ತರ್ಪಣ ಕಾವ್ಯದಲ್ಲಿ ಬರೆಯುತ್ತಾರೆ.
ಮೊದಲ ಮಗ ಕ್ಷೇಮೇಂದ್ರ ತೀರಿಕೊಂಡಾಗ “ಕೊಳಲಾಗಬಹುದಿತ್ತು ಕಳಿಲಿದ್ದಾಗಲೆ ಕಡಿದ ಕಾಳ, ದೇವ ಮಗುವೆಂದು ತಿಳಿದಿದ್ದೆ ಅದಾಯಿತು ನೀರ್ಗುಳ್ಳೆ” ಎಂದು ಬರೆದ ಬೇಂದ್ರೆ, ಎರಡನೇ ಮಗು ರಾಮ ತೀರಿಕೊಂಡಾಗ “ ಒಬ್ಬ ತಾಯಿ ನಿದ್ದೆ ಹೋದಳು, ನಿದ್ದೆ ತಿಳಿದೆದ್ದು ನೋಡುತ್ತಾಳೆ ಗಿಳಿಯು ಪಂಜರದೊಳಿಲ್ಲ” ಎನ್ನುತ್ತಾ ಪುರಂದರದಾಸರ ಪದಗಳನ್ನು ಇಲ್ಲಿ ಬೆಸೆಯುತ್ತಾರೆ.
1934ರ ಹೊತ್ತಿಗೆ ಹುಟ್ಟಿದವಳು ಮಗಳು ಲಲಿತಾ. ಲಲಿತಾಳಿಗೂ ತೀರಾ ಅನಾರೋಗ್ಯ ಎಂಬ ಟೆಲಿಗ್ರಾಂ ತಲುಪುವಾಗ ಬೇಂದ್ರೆ ಪುಣೆಯಲ್ಲಿದ್ದರು. ಮಗಳನ್ನು ಕಾಣಲೆಂದು ಬರುವಾಗ ವಿಚಿತ್ರ ಕಲ್ಪನೆಯೊಂದು ಇವರಿಗೆ ಹೊಳೆಯಿತು. ತಾನು ಮನೆ ತಲುಪುವಾಗ ಲಲಿತಾ ತೀರಿಕೊಂಡಿದ್ದರೆ ಆ ಹೊತ್ತು ತನ್ನ ಮನೆಯ ವಾತಾವರಣ ಹೇಗಿರಬಹುದು? ಕಲ್ಪಿಸಿಕೊಂಡರು, ಕವಿತೆ ಬರೆದರು. ಮನೆಗೆ ಬಂದು ನೋಡಿದರೆ. ತನ್ನ ಕಲ್ಪನೆ ನಿಜವಾಗಿತ್ತು. ಮಗು ತೀರಿಕೊಂಡಿತ್ತು. ಪುಟ್ಟ ಮಗುವಿನ ಶವವನ್ನು ಮಡಿಲಲ್ಲಿ ಮಲಗಿಸಿಕೊಂಡು ಪತ್ನಿಯ ರೋಧನ. ಆವತ್ತು ಅವರು ಕಲ್ಪಿಸಿಕೊಂಡು ಬರೆದ ಆ ಹಾಡು ಮುಂದೆ ಪ್ರಖ್ಯಾತವಾಯಿತು. ಆದರೆ ಆ ಹಾಡು ಹುಟ್ಟಿದ ಸನ್ನಿವೇಶವನ್ನು ಪತ್ನಿ ಬದುಕಿರುವವರೆಗೆ ಹೇಳಲು ಧರ‍್ಯ ಬರಲಿಲ್ಲ ಬೇಂದ್ರೆಯವರಿಗೆ. ಪತ್ನಿ ತೀರಿಕೊಂಡ ನಂತರ ಅಂದರೆ ಹಾಡು ಬರೆದು ಮೂವತ್ತೆರಡು ವರ್ಷಗಳ ನಂತರ ಮಗ ವಾಮನನ ಬಳಿ ಆ ಸತ್ಯವನ್ನು ಹೇಳುತ್ತಾರೆ ಬೇಂದ್ರೆ. ಆ ಭವಿಷ್ಯ ದರ್ಪಣ ಹಾಡು “ ನೀ ಹೀಂಗ ನೋಡಬ್ಯಾಡ ನನ್ನ”.
‘ನಾಕುತಂತಿ’ ಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಜನಸಾಮಾನ್ಯರಿಗೂ ಆ ಕಾವ್ಯ ಅರ್ಥವಾಗುವಂತೆ ವಿವರಿಸಲು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರಂತಹ ಪ್ರಾಜ್ಞರೇ ಬರಬೇಕಾಯಿತು. ‘ನಾಕುತಂತಿ’ ಬೀಜಾಕ್ಷರ ರೂಪದ ಶ್ರುತಿ ಕಾವ್ಯ. ನಾನು, ನೀನು, ಆನು, ತಾನು ಇವು ಮಾನವನ ಗುರುತಿಸುವಿಕೆಯ ನಾಲ್ಕು ಹಂತಗಳು. ಇಲ್ಲಿ ‘ನು’ ಅಂದರೆ ನೋವು ಅಥವಾ ಮನುಷ್ಯನ ಸಂವೇದನೆ. ನೋವಿಲ್ಲದೆ ಯಾವುದೇ ಅನುಭವವಿಲ್ಲ. ಆ ‘ನು’ವನ್ನು ನೂಲಬೇಕು. ಹತ್ತಿಯ ಗರ್ಭದಿಂದ ನೂಲು ಹೊರಬರುವಂತೆ ನೋವನ್ನು ನೂತಾಗ ಹೊರಬರುವ ನಾಲ್ಕು ರೂಪಗಳೇ ನಾಲ್ಕು ತಂತಿಗಳು.. ‘ನಾನು’ ಹೀಗಿಯೇ ಇದ್ದೇನೆ ಎಂದು ಕೊಂಡಿರುವ ಭ್ರಮೆ, ನನ್ನನ್ನು ಅಥವಾ ನನ್ನ ವ್ಯಕ್ತಿತ್ವವನ್ನು ಇನ್ನೊಬ್ಬರು ಹೇಗೆ ತಿಳಿದುಕೊಂಡಿದ್ದಾರೆ ಅನ್ನುವ ಕಲ್ಪನೆ ‘ನೀನು’. ನಾನು, ನೀನು ಎಂಬ ನನ್ನ ಹಾಗೂ ಪರರ ಭ್ರಮೆಗಳೆರಡು ಅಳಿದ ಮೇಲೆ ಮೂಡುವ ನೈಜ್ಯವಾಗಿರುವ ನನ್ನ ರೂಪ ‘ಆನು’. ಈ ನನ್ನ ‘ಆನು’ವನ್ನು ರಕ್ಷಿಸಬಲ್ಲ ಪರಾತ್ಪರ ಶಕ್ತಿ ‘ತಾನು’…. ಇಷ್ಟೊಂದು ಅಗಾಧ ವಿಚಾರಗಳನ್ನು ಕೇವಲ ನಾಲ್ಕು ಶಬ್ಧಗಳಲ್ಲಿ ಕಟ್ಟಿಕೊಡುವ ಸಾಮರ್ಥ್ಯ ಅದು ಆ ವರಕವಿಗೆ ಮಾತ್ರ ಸಾಧ್ಯ.
ಕೇಂದ್ರ ಸಾಹಿತ್ಯ ಅಕಾಡೆಮಿ, ಪ್ರತಿಷ್ಠಿತ ಪದ್ಮಶ್ರೀ, ಜ್ಞಾನಪೀಠ ಮುಂತಾದ ಪ್ರಶಸ್ತಿಗಳಿಂದ ಬೇಂದ್ರೆಯವರ ವರ್ಚಸ್ಸು ಹೆಚಾಯಿತು ಅನ್ನುವುದಕ್ಕಿಂತ ಬೇಂದ್ರೆಯವರಿಂದಾಗಿ ಆ ಪ್ರಶಸ್ತಿಗಳ ಮಾನ ವೃದ್ಧಿಸಿತು ಎಂದರೆ ಅದು ಖಂಡಿತವಾಗಿಯೂ ಅತಿಶಯೋಕ್ತಿಯಲ್ಲ. ಆ ವರಕವಿ ಅಂಬಿಕಾತನಯದತ್ತನ 126 ನೇ ಜನ್ಮದಿನವಿಂದು.
ಲೇಖಕರು: ಪ್ರಕಾಶ್ ಮಲ್ಪೆ