Advertisement

ಜನನ-ಮರಣ ನೋಂದಣಿ ಅತ್ಯವಶ್ಯ

11:37 AM Feb 10, 2019 | |

ಯಾದಗಿರಿ: ಸರ್ಕಾರಿ ಸೌಲಭ್ಯಗಳು ಪಡೆಯಲು ಜನನ-ಮರಣ ನೋಂದಣಿ ಮಾಡಿಸುವುದು ಅತ್ಯವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಹೇಳಿದರು. ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶುಕ್ರವಾರ ಆರ್ಥಿಕ ಮತ್ತು ಸಾಂಖ್ಯೀಕ ನಿರ್ದೇಶನಾಲಯ ಆಶ್ರಯದಲ್ಲಿ ಜನನ-ಮರಣ ನೋಂದಣಿ ನಿಯಮಗಳು ಮತ್ತು ಇ-ಜನ್ಮ ತಂತ್ರಾಂಶ ನಿರ್ವಹಣೆ ಕುರಿತ ಆಯೋಜಿಸಿದ್ದ ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ ಹಾಗೂ ವಿವಿಧ ಸಂದರ್ಭಗಳಲ್ಲಿ ಜನನ ಪ್ರಮಾಣ ಪತ್ರ ಬೇಕಾಗುತ್ತದೆ. ಪ್ರಸ್ತುತ ರೈತರ ಸಾಲ ಮನ್ನಾ ಪ್ರಕ್ರಿಯೆ ನಡೆಯುತ್ತಿದ್ದು, ಸಾಲ ಹೊಂದಿದ ರೈತರು ಮರಣ ಹೊಂದಿದಲ್ಲಿ ಸಾಲ ಮನ್ನಾಕ್ಕಾಗಿ ಅವರ ಮರಣ ಪ್ರಮಾಣ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಜನನ ಮತ್ತು ಮರಣ ಪ್ರಮಾಣ ಪತ್ರಗಳ ಉಪಯೋಗಗಳನ್ನು ಅರಿತು ಜನನ ಮತ್ತು ಮರಣ ಸಂಭವಿಸಿದ 21 ದಿನಗಳೊಳಗಾಗಿ ನೋಂದಣಿ ಮಾಡಿಸಬೇಕು ಎಂದು ಸಲಹೆ ನೀಡಿದರು.

ಮರಣ ಹೊಂದಿದವರ ಹೆಸರಿನಲ್ಲಿ ಪಿಂಚಣಿ, ಮಾಸಾಶನ ಹೋಗುತ್ತಿದೆ ಎಂಬ ದೂರು ಬರುತ್ತವೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ನಗರಸಭೆ, ಪುರಸಭೆ ಅಧಿಕಾರಿಗಳು ಜನರಿಗೆ ತಿಳಿವಳಿಕೆ ನೀಡಿ, ಮರಣ ನೋಂದಣಿ ಮಾಡಿಸಲು ಹೇಳಬೇಕು. ಇಲ್ಲವಾದಲ್ಲಿ ಪ್ರಕರಣಗಳ ತನಿಖೆ ನಡೆದಾಗ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಆನ್‌ಲೈನ್‌ ನೋಂದಣಿ ಇರುವುದರಿಂದ ತಾಂತ್ರಿಕ ತರಬೇತಿ ಪಡೆಯುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಆಯೋಜಿಸಿರುವ ತರಬೇತಿಯ ಸದುಪಯೋಗ ಪಡೆದು ಅನುಷ್ಠಾನಕ್ಕೆ ತರಬೇಕು ಎಂದು ಅವರು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಹಬೀಬ್‌ ಉಸ್ಮಾನ್‌ ಪಟೇಲ್‌ ಮಾತನಾಡಿದರು. ಆರ್ಥಿಕ ಮತ್ತು ಸಾಂಖ್ಯೀಕ ನಿರ್ದೇಶನಾಲಯದ ಇ-ಜನ್ಮ ಸಂಯೋಜನಾಧಿಕಾರಿ ಮಧುಕುಮಾರ ಅವರು ಜನನ-ಮರಣ ನೋಂದಣಿ ನಿಯಮಗಳು ಮತ್ತು ಇ-ಜನ್ಮ ತಂತ್ರಾಂಶ ನಿರ್ವಹಣೆ ಕುರಿತು ತರಬೇತಿ ನೀಡಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಇಂಜಿನಿಯರ್‌ ಬಂಡೆಪ್ಪ ಆಕಳ ಉಪಸ್ಥಿತರಿದ್ದರು. ತರಬೇತಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ನಗರಸಭೆ, ಪುರಸಭೆ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ನಾಡಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.

ಶಿವಕುಮಾರ ಹೈಯಾಳ ಪ್ರಾರ್ಥಿಸಿದರು. ಡಿಟಿಐ ಉಪ ಪ್ರಾಚಾರ್ಯ ಗುರು ಪಾಟೀಲ ಸ್ವಾಗತಿಸಿದರು. ಗ್ರಾಮ ಲೆಕ್ಕಾಧಿಕಾರಿ ಚನ್ನಬಸ್ಸು ನಿರೂಪಿಸಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ವಂದಿಸಿದರು.

Advertisement

21 ದಿನದೊಳಗೆ ನೋಂದಣಿ ಮಾಡಿಸಿ
ಜನನ ಅಥವಾ ಮರಣ ಘಟನೆ ಸಂಭವಿಸಿದ 21 ದಿನಗಳ ಒಳಗಾಗಿ ನೋಂದಣಿ ಮಾಡಿದಲ್ಲಿ ಯಾವುದೇ ಶುಲ್ಕ ಇರುವುದಿಲ್ಲ. 21 ದಿನಗಳ ನಂತರ 30 ದಿನಗಳ ಒಳಗಾಗಿ 2 ರೂ. ತಡ ಶುಲ್ಕದೊಂದಿಗೆ ನೋಂದಣಿ ಮಾಡಿಸಬಹುದು. 30 ದಿನಗಳ ನಂತರ 1 ವರ್ಷದೊಳಗಾಗಿ ಅಧಿಸೂಚಿತ ಪ್ರಾಧಿಕಾರದ ಲಿಖೀತ ಅನುಮತಿಯಿಂದ ಮತ್ತು ಒಬ್ಬ ಪ್ರಮಾಣೀಕರಣ ಅಧಿಕಾರಿ (ನೋಟರಿ ಪಬ್ಲಿಕ್‌) ಅಥವಾ ಈ ಕುರಿತು ರಾಜ್ಯ ಸರ್ಕಾರದಿಂದ ಅಧಿಕೃತನಾದ ಇತರೆ ಯಾವುದೇ ಒಬ್ಬ ಅಧಿಕಾರಿ ಮುಂದೆ ಮಾಡಿದ ಅಫಿಡವಿಟ್ ಹಾಜರುಪಡಿಸಿದ ಬಳಿಕ 5 ರೂ. ಗಳ ತಡ ಶುಲ್ಕವನ್ನು ಪಾವತಿಸಿ ನೋಂದಾಯಿಸಬಹುದು.
•ಸುನೀಲ ಬಿಸ್ವಾಸ್‌, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next