Advertisement

ಜನನ, ಮರಣ ಪ್ರಮಾಣ ಪತ್ರ: ಡಿಜಿಟಲ್‌ ಸಹಿ ಕಡ್ಡಾಯ: ಎಂ ಜೆ. ರೂಪಾ

01:47 AM Sep 19, 2020 | mahesh |

ಮಂಗಳೂರು: ಜಿಲ್ಲೆಯಲ್ಲಿ ಜನನ, ಮರಣ ಪ್ರಮಾಣ ಪತ್ರಗಳು ಕಡ್ಡಾಯವಾಗಿ ಡಿಜಿಟಲ್‌ ಸಹಿಯ ಮುಖಾಂತರ ವಿತರಣೆಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ ಜೆ. ರೂಪಾ ಹೇಳಿದರು.

Advertisement

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜನನ, ಮರಣ ನೋಂದಣಿ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಲೆಕ್ಕಿಗರು, ಪ್ರಾ. ಸ. ಆರೋಗ್ಯ ಕೇಂದ್ರ, ತಾ. ಜಿಲ್ಲಾ ಆಸ್ಪತ್ರೆಗಳಲ್ಲಿ ಸರಕಾರಿ ವೈದ್ಯಾಧಿಕಾರಿ, ಮಹಾ ನಗರಪಾಲಿಕೆಯಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿ ಹಾಗೂ ನಗರಸಭೆ, ಪುರಸಭೆ, ಪ. ಪಂ. ಮತ್ತು ಅಧಿಸೂಚಿತ ಪ್ರದೇಶಗಳಲ್ಲಿ ಆರೋಗ್ಯ ನಿರೀಕ್ಷಕರು ನೋಂದಣಾಧಿಕಾರಿಗಳಾಗಿದ್ದು, ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಸರಕಾರಿ ಆಸ್ಪತ್ರೆಗಳಲ್ಲಿ ಸರಕಾರಿ ವೈದ್ಯರು ಉಪ ನೋಂದಣಾಧಿಕಾರಿಗಳಾಗಿದ್ದು ಅವರು ಡಿಜಿಟಲ್‌ “ಕೀ’ಯನ್ನು ಅಳವಡಿಸಿ ಕೊಳ್ಳಬೇಕು. ಕಡ್ಡಾಯ ವಾಗಿ ಡಿಜಿಟಲ್‌ ಸಹಿಯ ಮುಖಾಂತರ ಜನನ ಮರಣ ಪ್ರಮಾಣ ಪತ್ರ ಗಳನ್ನು ನೀಡಬೇಕು ಎಂದು ಸೂಚಿಸಿದರು. ಸರಕಾರದ ಆದೇಶದ ಪ್ರಕಾರ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳನ್ನು ಜನನ ಮರಣ ಪ್ರಮಾಣ ಪತ್ರಗಳ ವಿತರಣಾಧಿಕಾರಿಗಳಾಗಿ ನೇಮಿಸಲಾಗಿದೆ ಎಂದು ಹೇಳಿದರು.

ಅಂಕಿ ಅಂಶದ ಪ್ರಕಾರ ಈಗಾಗಲೇ ಜಿಲ್ಲೆಯ ನಗರ ಮತ್ತು ಪಟ್ಟಣಗಳಲ್ಲಿ ಜನನ ಮರಣ ಪ್ರಮಾಣ ಪತ್ರ ತಡವಾಗಿ ನೋಂದಣಿಯಾಗಿರುವುದು ಬೆಳಕಿಗೆ ಬಂದಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ತಾಲೂಕಿನ ತಹಶೀಲ್ದಾರ್‌ಗಳು ಸಂಬಂಧಪಟ್ಟ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸಬೇಕು ಎಂದು ಹೇಳಿದರು. ಉಪವಿಭಾಗಾಧಿಕಾರಿ ಮದನ್‌ ಮೋಹನ್‌, ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್‌, ಅಧಿಕಾರಿಗಳು ಉಪಸ್ಥಿತರಿದ್ದರು.

18,824 ಜನನ ಪ್ರಮಾಣ ಪತ್ರ ನೋಂದಣಿ
ಜಿಲ್ಲೆಯ ಎಲ್ಲ ನೋಂದಣಿ ಘಟಕವು ನಿಯಾಮಾನುಸಾರ ನೋಂದಣಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಹಾಗೂ ಶೇ. 100ರಷ್ಟು ಘಟನೆಗಳು ದಾಖಲಾತಿಯಾಗಿರುವ ಬಗ್ಗೆ ಕಂದಾಯ, ನಗರಾಭಿವೃದ್ಧಿ ಹಾಗೂ ಸಾಂಖೀಕ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. 2020ನೇ ಸಾಲಿನ ಜನವರಿಯಿಂದ ಆಗಸ್ಟ್‌ವರೆಗಿನ ಅಂಕಿ ಅಂಶದ ಪ್ರಕಾರ ಜಿಲ್ಲೆಯ ನಗರ ಹಾಗೂ ಗ್ರಾಮಾಂತರಗಳಲ್ಲಿ 18,824 ಜನನ ಪ್ರಮಾಣ ಪತ್ರ ನೋಂದಣಿಯಾಗಿದ್ದು, 10,139 ಮರಣ ಪ್ರಮಾಣ ಪತ್ರ ನೋಂದಣಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next