ಲಂಡನ್: 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಒಂದು ದಿನ ವಿಳಂಬವಾಗಿ ಆರಂಭವಾಗಲಿದೆ ಎಂದು ಸಂಘಟಕರು ಪ್ರಕಟಿಸಿದ್ದಾರೆ. ಮುಂದೂಡಲ್ಪಟ್ಟ ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮತ್ತು ಯುಎಫ್ಎಫ್ಎ ವನಿತಾ ಫುಟ್‌ಬಾಲ್ ಪಂದ್ಯಾವಳಿಯಿಂದಾಗಿ ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆ ಸಂಭವಿಸಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ ಬರ್ಮಿಂಗ್‌ಹ್ಯಾಮ್ ಗೇಮ್ಸ್ 2022ರ ಜು. 28ರಿಂದ ಆ. 8ರ ತನಕ ನಡೆಯಲಿದೆ ಎಂದು ಸಿಜಿಎಫ್ ಅಧ್ಯಕ್ಷ ಲೂಯಿಸ್ ಮಾರ್ಟಿನ್ ಹೇಳಿದರು.
ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್ 2022ರ ಜು. 15ರಿಂದ 24ರ ತನಕ ಅಮೆರಿಕದ ಒರೆಗಾನ್‌ನಲ್ಲಿ ಹಾಗೂ ಯುಎಫ್ಎಫ್ಎ ವನಿತಾ ಫುಟ್‌ಬಾಲ್ ಟೂರ್ನಿ ಜು. 6ರಿಂದ 31ರ ತನಕ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಈ ಎರಡೂ ಕೂಟಗಳು 2021ರಲ್ಲಿ ನಿಗದಿಯಾಗಿದ್ದವು. ಆದರೆ ಟೋಕಿಯೊ ಒಲಿಂಪಿಕ್ಸ್ ಒಂದು ವರ್ಷ ಮುಂದೂಡಲ್ಪಟ್ಟ ಕಾರಣ ಈ ಕೂಟಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಅನಿವಾರ್ಯವಾಯಿತು.