Advertisement
ಉದ್ಯಾನನಗರಿ ಬೆಂಗಳೂರಿನಲ್ಲಿ ಹಲವು ಪ್ರಭೇದದ ದೇಶ-ವಿದೇಶಿ ಹಕ್ಕಿಗಳಿಗೆ ಅನುಕೂಲಕರವಾದ ವಿವಿಧ ಗುಣ ಲಕ್ಷಣ ಹೊಂದಿರುವ ಆವಾಸಸ್ಥಾನಗಳಿವೆ. ಈ ವರ್ಷವೂ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ತಮಗೆ ಅನುಕೂಲಕರವಾದ ವಾಸಸ್ಥಾನಗಳನ್ನು ಅರಸಿ 50ಕ್ಕೂ ಹೆಚ್ಚಿನ ಪ್ರಭೇದದ ಹಲವು ವಿಶೇಷತೆಗಳನ್ನು ಒಳಗೊಂಡ ವಿದೇಶಿ ಹಕ್ಕಿಗಳು ಲಕ್ಷಾಂತರ ಕಿಲೋ ಮೀಟರ್ ದೂರದಿಂದ ನಗರಕ್ಕೆ ವಲಸೆ ಬಂದಿವೆ. ಇದಲ್ಲದೇ, ದೇಶದ ವಿವಿಧ ರಾಜ್ಯಗಳ ವಿರಳವಾದ ನೂರಾರು ಹಕ್ಕಿಗಳನ್ನೂ ಅಲ್ಲಲ್ಲಿ ಗಮನಿಸಬಹುದು.
Related Articles
Advertisement
ವಿದೇಶಿ ಹಕ್ಕಿಗಳು ಎಲ್ಲಿ ಕಾಣ ಸಿಗುತ್ತವೆ? :
ಬೆಂಗಳೂರಿನ ಬನ್ನೇರುಘಟ್ಟ, ನಂದಿಬೆಟ್ಟ, ಜಿಕೆ ವಿಕೆ, ಕನಕಪುರ ರಸ್ತೆಯ ವ್ಯಾಲಿ ಸ್ಕೂಲ್ ಭಾಗ ಗಳಲ್ಲಿ ವಿದೇಶಿ ಪಕ್ಷಿಗಳು ಕಾಣ ಸಿಗುತ್ತವೆ. ಹ್ಯಾರಿ ಯರ್ಸ್‌ನಂತರ ಪಕ್ಷಿಗಳು ಹೊಸಕೋಟೆ, ಹೆಸರುಘಟ್ಟ ಪಕ್ಕದ ಕೆರೆಗಳಲ್ಲಿ ಇವೆ. ಹೆಸರು ಘಟ್ಟ, ಟಿಜೆ ಹಳ್ಳಿ, ನಗರದ ಹೊರವಲಯದಲ್ಲಿ ರುವ ಹೊಸಕೋಟೆ ಕೆರೆ, ಆನೇಕಲ್, ಮೈಸೂರು ರಸ್ತೆಯ ಒಣ ಗುಡ್ಡಗಳು ವಲಸೆ ಹಕ್ಕಿಗಳ ಪ್ರಮುಖ ಆವಾಸಸ್ಥಾನಗಳಾಗಿವೆ.
ವಿದೇಶಿ ಹಕ್ಕಿಗಳ ವಲಸೆ ಪಯಣವೇ ರೋಮಾಂಚನ:
ವಿದೇಶಗಳಿಂದ ಬೆಂಗಳೂರಿಗೆ ಆಗಮಿಸುವ ಹತ್ತಾರು ಜಾತಿಗಳ ಹಕ್ಕಿಗಳಿಗೆ ಅದರದೇ ಆಗ ವಲಸೆ ಮಾರ್ಗಗಳಿರುತ್ತವೆ. ಋತುಮಾನಗಳಿಗೆ ಅನುಗುಣವಾಗಿ ಅವುಗಳು ತಮ್ಮ ವಾಸ ಸ್ಥಳ ಬದಲಾಯಿಸುತ್ತವೆ. ಸೂರ್ಯ, ಚಂದ್ರ, ನಕ್ಷತ್ರಗಳು ಹಾಗೂ ಭೂಮಿಯ ಗುರುತ್ವಾಕರ್ಷಣಾ ಶಕ್ತಿಗಳನ್ನೆಲ್ಲಾ ಗ್ರಹಿಸಿ ಸಾಗುತ್ತವೆ. ಇವೆಲ್ಲವೂ ಪ್ರಕೃತಿಯ ವೈಶಿಷ್ಟéಗಳಾಗಿವೆ. ಕೆಲವು ಹಕ್ಕಿಗಳು ಎಲ್ಲೂ ವಿಶ್ರಾಂತಿ ಪಡೆಯದೇ ವಿದೇಶಗಳಿಂದ ಒಂದೆರಡು ದಿನಗಳಲ್ಲೇ ಬೆಂಗಳೂರಿಗೆ ತಲುಪಿದರೆ, ಇನ್ನು ಕೆಲ ಜಾತಿಯ ಪಕ್ಷಿಗಳು ತಿಂಗಳುಗಟ್ಟಲೆ ಪ್ರಯಾಣ ಮಾಡುತ್ತವೆ. ಉದಾಹರಣೆಗೆ ಬಾರ್ ಹೆಡೆಡ್ ಗೂಸ್ ಲಡಾಖ್‌ನಿಂದ ಒಂದೇ ಬಾರಿಗೆ ಹಾರಿ ಬರುತ್ತವೆ. ಹ್ಯಾರಿಯರ್ಸ್‌ನಂತಹವುಗಳು ಯೂರೋಪಿನಿಂದ ಬರಲು 1 ತಿಂಗಳು ಬೇಕಾಗುತ್ತವೆ. ಬಹುತೇಕ ಹಕ್ಕಿಗಳು ಪ್ರಯಾಣದ ಮಧ್ಯೆ ಆಹಾರಕ್ಕಾಗಿ ಭೂ ಮಾರ್ಗದ ಮೇಲೆ ಹಾರಿಕೊಂಡು ಬರುತ್ತವೆ. ಸಮುದ್ರದ ಮಧ್ಯೆ ಹಾರಾಟ ಮಾಡಿ ಬರುವುದು ವಿರಳ ಎನ್ನುತ್ತಾರೆ ಪಕ್ಷಿ ವೀಕ್ಷಕ ಕ್ಲೆಮೆಂಟ್ ಫ್ರಾನ್ಸಿಸ್.
30 ಸಾವಿರ ಅಡಿ ಎತ್ತರಕ್ಕೆ ಹಾರುವ ಹೆಡೆಡ್ ಗೂಸ್:
ಲಡಾಖ್, ಚೀನಾ, ಟಿಬೇಟ್, ಸೈಬೀರಿಯಾದಿಂದ ಸಾವಿರಾರು ಸಂಖ್ಯೆಯಲ್ಲಿ ಬಾರ್ ಹೆಡೆಡ್ ಗೂಸ್ ಸಿಲಿಕಾನ್ ಸಿಟಿಗಳಲ್ಲಿರುವ ಕೆರೆಗಳಲ್ಲಿ ಕಾಣ ಸಿಗುತ್ತಿವೆ. ಇವುಗಳು ಫೆಬ್ರುವರಿ ವರೆಗೆ ಇಲ್ಲೇ ಇದ್ದು ನಂತರ ತಮ್ಮ ಊರಿಗೆ ಮರಳುತ್ತವೆ. ಇದು 30 ಸಾವಿರ ಅಡಿಗೂ ಎತ್ತರದಲ್ಲಿ ಹಾರಾಡಬಲ್ಲ ಸಾಮರ್ಥ್ಯ ಹೊಂದಿದ್ದು, ಎತ್ತರದಲ್ಲಿ ವಿಮಾನ ಸಂಚರಿಸುವ ವೇಳೆ ಪೈಲಟ್‌ಗಳಿಗೆ ಕಾಣ ಸಿಗುತ್ತವೆ. ಇವುಗಳು ಬಾತುಕೋಳಿಗಿಂತ ದೊಡ್ಡ ಗಾತ್ರದಲ್ಲಿದ್ದು, ಮಾಗಡಿ, ವರ್ತೂರು ಕೆರೆಗಳಲ್ಲಿ ಕಾಣ ಸಿಗುತ್ತವೆ. ಇದು ಸಸ್ಯಹಾರಿಯಾಗಿದ್ದು, ಭತ್ತ, ಹುಲ್ಲಿನಂತವುಗಳೇ ಇದರ ಆಹಾರ.
ಹಿಮಾಲಯ ಟು ಬೆಂಗಳೂರು:
ಹಿಮಾಲಯದ ಭಾಗಗಳಲ್ಲಿ ಅತ್ಯಧಿಕ ಚಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಬ್ಲೂ ಕ್ಯಾಪಡ್ ರಾಕ್‌ಥ್ರಶ್, ಟಿಕಿಲ್ ಫ್ಲೈ ಕ್ಯಾಚರ್, ಅಲ್ಟ್ರಾ ಮರೆನ್ ಪ್ಲೈ ಕ್ಯಾಚರ್, ರೆಡ್ ಪೋರ್ಟೆಡ್ ಪ್ಲೆ„ ಕ್ಯಾಚರ್ ಎಂಬ ಭಿನ್ನ ರೀತಿಯ ಹಕ್ಕಿಗಳು ಬೆಂಗಳೂರಿಗೆ ವಲಸೆ ಬಂದಿದ್ದು, ಇವುಗಳು 2025ರ ಮಾರ್ಚ್‌ನಲ್ಲಿ ಇಲ್ಲಿಂದ ಮರಳಲಿವೆ. ಇವುಗಳು ಸಣ್ಣ ಗಾತ್ರದ ಹಕ್ಕಿಗಳಾಗಿದ್ದು, ಕಬ್ಬನ್ ಪಾರ್ಕ್, ನಂದಿಬೆಟ್ಟ, ಐಐಎಸ್‌ಸಿ, ಬನ್ನೇರುಘಟ್ಟ, ಲಾಲ್‌ಬಾಗ್‌ಗಳಲ್ಲಿ ಸಾಮಾನ್ಯವಾಗಿ ಕಾಣ ಸಿಗುತ್ತವೆ. ಇದು ಒಂದು ಅಥವಾ ಹತ್ತಾರು ಸಂಖ್ಯೆಯಲ್ಲಿ ಬರುತ್ತವೆ.
ಯೂರೋಪ್ ಸೇರಿ ವಿವಿಧೆಡೆ ಚಳಿ ಹೆಚ್ಚಾಗಿರುತ್ತವೆ. ಹೀಗಾಗಿ ಅಲ್ಲಿನ ಪಕ್ಷಿಗಳು ಬೆಂಗಳೂರಿನತ್ತ ವಲಸೆ ಬಂದು ಹೋಗುತ್ತವೆ. ಬೆಂಗಳೂರಿನಲ್ಲಿ ಡಿಸೆಂಬರ್, ಜನವರಿಯಲ್ಲಿ ಹೆಚ್ಚಾಗಿ ವಿದೇಶಿ ಪಕ್ಷಿಗಳು ಕಾಣ ಸಿಗುತ್ತವೆ. -ಕ್ಲೆಮೆಂಟ್ ಫ್ರಾನ್ಸಿಸ್, ವನ್ಯಜೀವಿ ಫೋಟೊಗ್ರಾಫರ್
ಕೆರೆಯ ಸಹಜತೆ ಇಂದು ಉಳಿದಿಲ್ಲ. ಹೀಗಾಗಿ ಬೆಂಗಳೂರಿಗೆ ಹಿಂದೆ ಬರುತ್ತಿದ್ದ ಪ್ರಮಾಣದಲ್ಲಿ ವಿದೇಶಿ ಹಕ್ಕಿಗಳು ಬರುತ್ತಿಲ್ಲ. ಕೆರೆಗೆ ಜೀವಕಳೆ ಇರಬೇಕು. ಮನುಷ್ಯನಿಗೋಸ್ಕರ ಕೆರೆ ಇಟ್ಟುಕೊಳ್ಳುವುದಲ್ಲ. ಹಕ್ಕಿಗಳಿಗೆ ತೊಂದರೆಯಾದರೆ ಅವುಗಳು ಅಂತಹ ಕಡೆ ಬರುವುದಿಲ್ಲ.-ಸತೀಶ್ ಪೂಜಾರಿ, ಹವ್ಯಾಸಿ ಪಕ್ಷಿ ವೀಕ್ಷಕ
– ಅವಿನಾಶ ಮೂಡಂಬಿಕಾನ