Advertisement

ನಿಡಶೇಸಿ ಕೆರೆಯಲ್ಲಿ ಬಾನಾಡಿಗಳ ಕಲರವ

02:19 PM Oct 15, 2019 | Suhan S |

ಕುಷ್ಟಗಿ: ತಾಲೂಕಿನ ನಿಡಶೇಸಿ ಕೆರೆ ಭರ್ತಿಯಾಗಿದ್ದು, ಬಾನಾಡಿಗಳ ಆಶ್ರಯ ತಾಣವಾಗುತ್ತಿದೆ. ಕೆರೆಯಲ್ಲಿ ಈಗ ಬಾನಾಡಿಗಳ ಚಿಲಿಪಿಲಿ ಕೇಳಿ ಬರುತ್ತಿದ್ದು, ಪಕ್ಷಿ ಪ್ರಿಯರನ್ನು ಸಂತಸಗೊಳಿಸಿದೆ. ಪಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ಕೆರೆಯಂಗಳದಲ್ಲಿ ಪಕ್ಷಿಗಳಿಗಾಗಿಯೇ ನಿರ್ಮಿಸಿದ ನಡುಗಡ್ಡೆಗಳಲ್ಲಿ ಅವು ಆಶ್ರಯ ಪಡೆದಿವೆ.

Advertisement

ಪಕ್ಷಿಗಳ ಸಂತಾನಾಭಿವೃದ್ಧಿಗೆ ಪ್ರಸಕ್ತ ಸ್ಥಳವೆನಿಸಿದ ಈ ಕೆರೆಗೆ ಚುಕ್ಕೆ ಬಾತು, ಬಣ್ಣದ ಕೊಕ್ಕರೆ, ಬೆಳ್ಳಕ್ಕಿ, ಬಿಳಿ, ಕರಿ ಬಣ್ಣದ ಕೆಂಬರಲ್ಲು ಬೂದುಬಕ, ಹುಲ್ಲಂಕಿ, ಗುಳ ಮುಳಕ, ಮೆಟ್ಟಗಾಲು ಹಕ್ಕಿ, ಟಿಟ್ಟಿಬಾ ಮೊದಲಾದ ಪಕ್ಷಿಗಳು ಕಂಡು ಬಂದಿವೆ. ಕೆರೆ ಸುತ್ತಲೂ ಗಿಡಗಳಿಲ್ಲದೇ ಇರುವುದರಿಂದ ಪಕ್ಷಿಗಳು ಬಹುತೇಕ ಸಮಯವನ್ನು ಕೆರೆ ನಡುಗಡ್ಡೆಗಳಲ್ಲಿ ಕಳೆಯುತ್ತಿವೆ. ಕೆಲ ಪಕ್ಷಿಗಳು ತೋಟ  ಪಟ್ಟಿಗಳಲ್ಲಿರುವ ಗಿಡಗಳನ್ನೇ ಆಶ್ರಯಿಸುತ್ತಿವೆ.

ಕಂಗೊಳಿಸುತ್ತಿದೆ ಕೆರೆ: ನಿಡಶೇಸಿ ಕೆರೆ 320 ಎಕರೆ ವಿಸ್ತೀರ್ಣ ಹೊಂದಿದ್ದು, ಈ ಬಾರಿ ಸುರಿದ ಮಳೆಗೆ 250 ಎಕರೆ ಪ್ರದೇಶದಲ್ಲಿ ನೀರು ಆವರಿಸಿದೆ. ಸಾರ್ವಜನಿಕರ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಂಡ ಈ ಕೆರೆ ಸುತ್ತಮುತ್ತ ತೋಟಪಟ್ಟಿಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ಅಂತರ್ಜಲವೂ ವೃದ್ಧಿಸಿದೆ. ಎರಡು ವರ್ಷಗಳಿಂದ ಬತ್ತಿದ್ದ ಕೆರೆಯತ್ತ ಪ್ರಾಣಿ-ಪಕ್ಷಿಗಳು ಮುಖ ಮಾಡಿರಲಿಲ್ಲ. ಹೀಗಾಗಿ ಅಲ್ಲಲ್ಲಿ ನೀರಿನ ಅರವಟ್ಟಿಗೆ ಇಡಲಾಗಿತ್ತು. ಆದರೀಗ ಕೆರೆ ಭರ್ತಿಯಾಗಿ ಸಂತಸ ಇಮ್ಮಡಿಗೊಳಿಸಿದೆ.

ಸತತ ಬರದಿಂದ ನಿಡಶೇಸಿ ಕೆರೆ ಬತ್ತಿದ್ದರಿಂದ ದೇಶ, ವಿದೇಶದ ಹಕ್ಕಿಗಳು ಬರಲಿಲ್ಲ. ಇದೀಗ ಕೆರೆಗೆ ಭರಪೂರ ನೀರು ಬಂದಿದ್ದು, ಸದ್ಯ ದೇಶಿ ಹಕ್ಕಿಗಳನ್ನು ಮಾತ್ರ ಕಾಣಬಹುದಾಗಿದೆ. ನವೆಂಬರ್‌, ಡಿಸೆಂಬರ್‌ ವೇಳೆ ಚಳಿ ಹೆಚ್ಚಾಗುವ ಹಿನ್ನೆಲೆಯಲ್ಲಿ ವಿದೇಶಿ ಹಕ್ಕಿಗಳ ಆಗಮನ ನಿರೀಕ್ಷೆ ಇದೆ. ಕೆರೆ ಅಭಿವೃದ್ಧಿ ಸಂದರ್ಭದಲ್ಲಿ ಕೆರೆ ದಡದಲ್ಲಿದ್ದ ಗಿಡಗಳನ್ನು ತೆರವುಗೊಳಿಸಲಾಗಿದ್ದು, ಸದ್ಯ ಪಕ್ಷಿಗಳು ಕೂರಲು ಗಿಡಗಳ ವ್ಯವಸ್ಥೆ ಇಲ್ಲ. ಅರಣ್ಯ ಇಲಾಖೆ ಈ ಪ್ರದೇಶದಲ್ಲಿ ಬೇಗ ಬೆಳೆಯುವ ಗಿಡ, ಪೊದೆ ಸಸ್ಯಗಳನ್ನು ನೆಡುವುದರಿಂದ ಪಕ್ಷಿಗಳ ವಿಶ್ರಾಂತಿ-ಗೂಡು ಕಟ್ಟಲು ಸಹಕಾರಿಯಾಗಲಿದೆ. ಅಮರೇಗೌಡ ಪಾಟೀಲ ಜಾಲಿಹಾಳ, ಪಕ್ಷಿತಜ್ಞ

 

Advertisement

-ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next