ಕಿನ್ನಿಗೋಳಿ: ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ ತನ್ನ ಮಗು ಹೃದಯ್ ಹಾಗೂ ಪತ್ನಿ ಪ್ರಿಯಾಂಕಾ ಅವರನ್ನು ಕೊಂದು ಬೆಳ್ಳಾಯರಿನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದು ನಾಲ್ಕೈದು ದಿನ ಕಳೆಯಿತು.
ಪೊಲೀಸರ ತನಿಖೆ ಮುಂದುವರಿದಿದ್ದು, ಬೇರೆ ಬೇರೆ ಮಾಹಿತಿಗಳು ಸಿಗುತ್ತಲಿವೆ. ಈ ನಡುವೆ ಕಾರ್ತಿಕ್ ತಾನು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸುರತ್ಕಲ್‌ನ ಸಹಕಾರ ಬ್ಯಾಂಕ್‌ನಲ್ಲಿ ನಡೆಸಿದ ಅವ್ಯವಹಾರದ ಕುರಿತು ದೂರು ದಾಖಲಾಗಿದೆ. ವಂಚನೆಗೆ ಒಳಗಾದ ಪಕ್ಷಿಕೆರೆಯ ಮಹಮ್ಮದ್ ಅವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದಾರೆ.
ಚಿನ್ನಾಭರಣ ಅಡವಿಟ್ಟು 3 ಲಕ್ಷ ರೂ. ಸಾಲ ಪಡೆದಿದ್ದೆ. ಆದರೀಗ ಆ ಚಿನ್ನಾಭರಣ ಬ್ಯಾಂಕ್‌ನಲ್ಲಿಲ್ಲ. ಅಡವಿಟ್ಟ ಮೂರು ತಿಂಗಳ ಒಳಗೇ ಆ ಚಿನ್ನಾಭರಣವನ್ನು ಬಿಡಿಸಿಕೊಂಡಿದ್ದ ಕಾರ್ತಿಕ್ ತನಗೆ ಮೋಸ ಮಾಡಿದ್ದಾಗಿ ಮಹಮ್ಮದ್ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಾರ್ತಿಕ್ ಜತೆಗಿನ ಸಂಬಂಧ, ಕಾರ್ತಿಕ್ ತನಗೆ ಯಾವ ರೀತಿ ಮೋಸ ಮಾಡಿದ್ದಾನೆ ಎಂದೂ ದೂರಿನಲ್ಲಿ ವಿವರಿಸಿದ್ದಾರೆ. ಕಾರ್ತಿಕ್ ಕೆಲಸ ಮಾಡುತ್ತಿದ್ದ ಬ್ಯಾಂಕ್ ಅಧಿಕಾರಿಗಳಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಹೆಚ್ಚಿನ ವಿಚಾರಣೆಯ ಅಗತ್ಯ ಕಂಡುಬಂದರೆ ಸಹಕರಿಸುವಂತೆಯೂ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಮೂಲ್ಕಿ ಪೂಲೀಸರು ಕಾರ್ತಿಕ್ ಮನೆಯವರು ಮತ್ತು ಪ್ರಿಯಾಂಕಾ ಮನೆಯವರ ಜತೆ ಸ್ಥಳ ಮಹಜರು ನಡೆಸಿದ್ದಾರೆ. ಕಾರ್ತಿಕ್‌ಗೆ ಸಂಬಂಧಿಸಿದ ಇನ್ನೊಂದು ಪ್ರಕರಣದ ಬಗ್ಗೆಯೂ ಚರ್ಚೆಗೆ ಬಂದಿದ್ದು, ಒಂದೆರಡು ದಿನಗಳಲ್ಲಿ ಮತ್ತೊಬ್ಬರು ದೂರು ನೀಡುವ ಸಾಧ್ಯತೆ ಬಗ್ಗೆ ಮೂಲಗಳು ತಿಳಿಸಿವೆ.