Advertisement

ಕೊರೊನಾ ಭಯದ ನಡುವೆ ಹಕ್ಕಿಜ್ವರ ಭೀತಿ

09:31 PM Mar 10, 2020 | Lakshmi GovindaRaj |

ಮೈಸೂರು: ಕೊರೊನಾ ಆತಂಕ ನಡುವೆ ಜಿಲ್ಲೆಗೆ ಹಕ್ಕಿಜ್ವರ ಭೀತಿ ಎದುರಾಗಿದ್ದು ಎಲ್ಲೆಡೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನೆರೆಯ ಕೇರಳದಲ್ಲಿ ಹಕ್ಕಿಜ್ವರ ಹರಡಿರುವ ಬೆನ್ನಲ್ಲೇ ಮೈಸೂರಿಗೂ ಹಕ್ಕಿಜ್ವರದ ಭೀತಿ ಎದುರಾಗಿದ್ದು, ಮೈಸೂರಿನ ವಿದ್ಯಾರಣ್ಯಪುಂನಲ್ಲಿ ಕೊಕ್ಕರೆಗಳ ಸಾಮೂಹಿಕ ಸಾವು ಹಕ್ಕಿಜ್ವರದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

Advertisement

ನಗರದ ವಿದ್ಯಾರಣ್ಯಪುರಂನ 5ನೇ ಮುಖ್ಯ ರಸ್ತೆಯಲ್ಲಿ ಈವರೆಗೂ ಕಳೆದ 1 ವಾರದಿಂದ 12ಕ್ಕೂ ಹೆಚ್ಚು ಕೊಕ್ಕರೆಗಳು ಮೃತಪಟ್ಟಿದ್ದು, ಸಾರ್ವಜನಿಕರಲ್ಲಿ ಮತ್ತಷ್ಟು ಭೀತಿ ಸೃಷ್ಟಿಸಿದೆ. ಜೊತೆಗೆ ವಾರ್ಡ್‌ ನಂ.1ರ ವ್ಯಾಪ್ತಿಯ ಹೆಬ್ಟಾಳ ಕೆರೆ ಸುತ್ತಮುತ್ತ ಪ್ರತಿ ದಿನ ಕೊಕ್ಕರೆಗಳು ಸಾವನ್ನಪ್ಪುತ್ತಿದ್ದು, ಕಳೆದ 20 ದಿನಗಳಿಂದ ಸುಮಾರು 50ಕ್ಕೂ ಹೆಚ್ಚು ಕೊಕ್ಕರೆಗಳು ಮೃತಪಟ್ಟಿವೆ. ಮರಗಳ ಮೇಲೆಯೇ ಕೊಕ್ಕರೆಗಳು ಸತ್ತು ಬೀಳುತ್ತಿದ್ದು, ಪಕ್ಷಿ ಪ್ರಿಯರಲ್ಲಿ ಆತಂಕ ಹೆಚ್ಚಾಗಿಸಿದೆ.

ಮೃಗಾಲಯದಲ್ಲಿ ಕಟ್ಟೆಚ್ಚರ: ಇನ್ನು ಮೈಸೂರಿಗೂ ಹಕ್ಕಿಜ್ವರ ಹರಡುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಚಾಮರಾಜೇಂದ್ರ ಮೃಗಾಲಯದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಮೃಗಾಲಯಕ್ಕೆ ವಲಸೆ ಪಕ್ಷಿಗಳು ಬರದಂತೆ ನೋಡಿಕೊಳ್ಳಲಾಗುತ್ತಿದ್ದು, ಪ್ರತಿದಿನ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ.

ಅಲ್ಲದೇ ನಗರದ ಸುತ್ತಮುತ್ತಲಿರುವ ಕುಕ್ಕರಹಳ್ಳಿ ಕೆರೆ, ಲಿಂಗಾಂಬುದಿ ಕೆರೆ, ಕಾರಂಜಿ ಕೆರೆ, ಹದಿನಾರು ಕೆರೆ ಸೇರಿದಂತೆ ಪ್ರಮುಖ ಕೆರೆಗಳಲ್ಲಿ ಮೈಸೂರು ವನ್ಯಜೀವಿ ವಿಭಾಗದಿಂದ ನಿಗಾ ವಹಿಸಲಾಗಿದೆ. ಬೇರೆ ರಾಜ್ಯಗಳಿಂದ ವಲಸೆ ಬರುವ ಪಕ್ಷಿಗಳ ಮೇಲೆ ಕಣ್ಣಿಡಲಾಗಿದೆ. ಹಕ್ಕಿಜ್ವರದ ಹಿನ್ನೆಲೆಯಲ್ಲಿ 2017ರಲ್ಲಿ ಮೃಗಾಲಯವನ್ನು ಒಂದು ತಿಂಗಳ ಕಾಲ ಬಂದ್‌ ಮಾಡಲಾಗಿತ್ತು. ಇದೀಗ ಮತ್ತೆ ಹಕ್ಕಿಜ್ವರದ ಭೀತಿ ಎದುರಾಗಿರುವುದರಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಈ ಕುರಿತು ಮಾತನಾಡಿದ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್‌.ಸಿ.ಸುರೇಶ್‌, ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಭಾಗದಲ್ಲಿರುವ ಚೆಕ್‌ಪೋಸ್ಟ್‌ ಮೂಲಕ ಯಾವುದೇ ಪ್ರಾಣಿಗಳು ಹಾಗೂ ಮೊಟ್ಟೆಗಳ ಸಾಗಾಟವನ್ನು ನಿಷೇಧಿಸಲಾಗಿದೆ. ಅಲ್ಲದೆ ಪ್ರತಿನಿತ್ಯ ಫೌಲಿಗಳಿಗೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಸಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

Advertisement

ಬೆಳಗಾಗುವುದರೊಳಗೆ ಕೋಳಿಗಳು ಸಾವು: ಕೋಳಿಗಳಿಗೂ ಹಕ್ಕಿಜ್ವರದ ಭೀತಿ ಎದುರಾಗಿದ್ದು ನಗರದ ಮೇಟಗಳ್ಳಿಯ ಮಂಚಮ್ಮ ದೇಗುಲದ ಬಳಿಯ ನಿವಾಸಿ ರಾಮಣ್ಣ ಎಂಬುವವರಿಗೆ ಸೇರಿದ 12 ಕೋಳಿಗಳು ಒಂದೇ ರಾತ್ರಿಯಲ್ಲಿ ಸತ್ತುಹೋಗಿವೆ. ಸೋಮವಾರ ಸಂಜೆ ಎಲ್ಲಾ ಕೋಳಿಗಳನ್ನು ಗೂಡಿನಲ್ಲಿ ಕೂಡಿ ಹಾಕಲಾಗಿತ್ತು.

ಆದರೆ, ಮಂಗಳವಾರ ಬೆಳಗಿನ ಜಾವ ಕೋಳಿಗಳು ಎಂದಿನಂತೆ ಕೂಗದೇ ಇರುವುದರಿಂದ ಅನುಮಾನಗೊಂಡು ಹೋಗಿ ನೋಡಿದಾಗ ಎಲ್ಲಾ ಕೋಳಿಗಳು ಸಾವನ್ನಪ್ಪಿರುವ ಸಂಗತಿ ಬೆಳಕಿಗೆ ಬಂದಿದೆ. ಮುಂದಿನ ವಾರ ನಡೆಯುವ ಗ್ರಾಮ ದೇವತೆಯ ಹಬ್ಬಕ್ಕೆಂದು ರಾಮಣ್ಣ ಕುಟುಂಬ ಸದಸ್ಯರು ಕೋಳಿಗಳನ್ನು ಸಾಕಿದ್ದರು.

ವಿದ್ಯಾರಣ್ಯಪುರಂನಲ್ಲಿ ಕೊಕ್ಕೆರೆಗಳು ಸಾಮೂಹಿಕವಾಗಿ ಸಾವನ್ನಿಪ್ಪಿದ್ದು, ಈಗಾಗಲೇ ಹಕ್ಕಿಜ್ವರದಿಂದ ಸತ್ತಿವೆ ಎಂದು ಹೇಳಲು ಸಾಧ್ಯವಿಲ್ಲ. ಕೊಕ್ಕೆರೆಗಳ ಮಾದರಿಯನ್ನು ಐಎಹೆಚ್‌ಬಿಗೆ ಕಳುಸಲಾಗಿದೆ. ವರದಿ ಬಂದ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ.
-ಡಾ.ಕೆ.ಸಿ. ಪ್ರಶಾಂತ್‌ಕುಮಾರ್‌, ಅರಣ್ಯ ಉಪಸಂರಕ್ಷಣಾಧಿಕಾರಿ

ಹಕ್ಕಿಜ್ವರ ವಲಸೆ ಪಕ್ಷಿಗಳಿಂದ ಬರುವುದರಿಂದ ಮೃಗಾಲಯದ ಪಕ್ಷಿಗಳಿಗೆ ಹಕ್ಕಿಜ್ವರ ಹರಡುವ ಸಾಧ್ಯತೆ ಕಡಿಮೆ. ಅಲ್ಲದೆ ಮೃಗಾಲಯದಲ್ಲಿ ಪಕ್ಷಿ ಆವರಣ, ಕೊಳವನ್ನು ಗ್ರಿಲ್‌ ಮೂಲಕ ಮುಚ್ಚಿರುವುದರಿಂದ ವಲಸೆ ಪಕ್ಷಿಗಳು ಮೃಗಾಲಯಕ್ಕೆ ಬರುವುದಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
-ಅಜಿತ್‌ ಎಂ. ಕುಲಕರ್ಣಿ, ಮೃಗಾಲಯ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next