Advertisement

ಮಕ್ಮಲ್‌ ಕಮಾಲ್‌:ಚಿನ್ನದ ಪ್ರಶಸ್ತಿ ತಂದು ಕೊಟ್ಟ ಪಕ್ಷಿ

03:00 PM Jan 14, 2017 | |

ಸಿದ್ದಾಪುರ ತಾಲೂಕಿನ ಕಾನಸೂರಿನ ನಾಗೇಂದ್ರ ಮುತ್ಮುರ್ಡು ಅವರಿಗೆ ಅಮೇರಿಕ ಫೋಟೋಗ್ರಫಿ ಈ ಬಾರಿಯ ಬಂಗಾರ ಪದಕ ಸಂದಿದೆ. ಈ ಪ್ರಶಸ್ತಿ ತಂದು ಕೊಟ್ಟ ಕಲಾತ್ಮಕ ಚಿತ್ರಕ್ಕೆ ಮಕ್ಮಲ್‌ ಮರಗುಪ್ಪಿ ಹಕ್ಕಿ ಕೊಟ್ಟ ಬಳುವಳಿ, ಜೀವದಾತನಿಗೆ ಕೊಟ್ಟ ಕೊಡುಗೆ ಹೇಗೇಯ್ತು ಗೊತ್ತಾ?

Advertisement

ಕಳೆದ ಏಪ್ರಿಲ್‌ ತಿಂಗಳ ಒಂದು ದಿನ. ಅಡಿಕೆ ತೋಟದಲ್ಲಿ ಆಳು ಕಾಳುಗಳು ಅಡಿಕೆ ಮರದ ಬುಡಕ್ಕೆ ಗೊಬ್ಬರ ಹಾಕುತ್ತಿದ್ದರು. ಒಂದು ಬಿದ್ದ ಒಣ ಮರದ ಕೆಳಗೆ ಗೊಬ್ಬರ ಹಾಕಲು ಹೋದಾಗ ಪಕ್ಷಿಗಳು ಚೀಂವ್‌ ಚೀಂವ್‌ ಎನ್ನುವ ಧ್ವನಿ ಕೇಳಿಸಿತು. ಅದೇನು ಎಂದು ನೋಡಲು ಕೃಷಿಕ ನಾಗೇಂದ್ರ ಮರದ ಸಮೀಪ ಹೋದರು. ಎಳೆಯ ಮೂರು ಮರಿಗಳು ಬಿದ್ದ ಅಡಿಕೆ ಮರದಲ್ಲಿ ಸಿಲುಕಿ ಕಂಗಾಲಾಗಿದ್ದವು. ಅಯ್ಯೋ ಅನಿಸಿತು. ಆ ಕ್ಷಣಕ್ಕೆ ಹೇಗಾದರೂ ಮಾಡಿ ಅವನ್ನು ರಕ್ಷಿಸಬೇಕು ಎಂದು ನಿರ್ಧರಿಸಿದರು. ಸುತ್ತಲಿನ ಅಡಿಕೆ ಹಾಳೆ, ಸೋಗೆ ಹಾಕಿ ಪುಟಾಣಿ ಮರ ಗುಬ್ಬಿಯ ರಕ್ಷಣೆಗೆ ಮುಂದಾದರು. ಪಟ್ಟದಾದ ಗೂಡು ಮಾದರಿಯಲ್ಲಿ ರಕ್ಷಿಸಿದರು. ನಾಯಿ, ಮಂಗ, ಹಾವಿನ ಕಾಟದಿಂದ ಬಚಾವ್‌ ಮಾಡಲು ಬೇಕಾದ ವ್ಯವಸ್ಥೆಯನ್ನೂ ಮಾಡಿದರು. 

ತೋಟದ ಕೆಲಸ ಮುಗಿಸಿ ಮನೆಗೆ ಬರುವಾಗ ಪುನಃ ಸಮೀಪ ಹೋಗಿ ನೋಡಿ ಬಂದರು.  ಅವಕ್ಕೂ ಹಿತವೆನಿಸಿರಬೇಕು. ಮರಿಗಳೂ ಅವುಗಳ ತಾಯಿಯೂ ಆರಾಮಾಗಿದ್ದವು. ಇವರಿಗೂ ತುಸು ನೆಮ್ಮದಿ ಆಯ್ತು. 

ಮನೆಗೆ ಮರಳಿ ಬಂದವರಿಗೂ ತೋಟದಲ್ಲಿನ  ಮರಗುಬ್ಬಿಯದ್ದೇ  ನೆನಪು. ಗುಬ್ಬಿಯ ಮೇಲೆ ಇರುವ ನೀಲಿ ಬಣ್ಣ ಬಣ್ಣದ ಕುಚ್ಚು ಕುಚ್ಚು ಖುಷಿ ಕೊಟ್ಟಿದ್ದು ನೆನಪಾಯ್ತು. ಮತ್ತೆ ಮತ್ತೆ ನೋಡಬೇಕು ಎನ್ನಿಸಿತು. ಪಕ್ಷಿಯ ಜಾತಕಕ್ಕಾಗಿ ಮಾಹಿತಿ ಹುಡುಕಿದರು. ಪಕ್ಷಿ$  ಫೋಟೊಗ್ರಫಿಯಲ್ಲಿ ಸಾಧನೆ ಮಾಡಿದ ಅನಂತ ತಟ್ಟಿಸರ ಅವರಲ್ಲೂ ಕೇಳಿದರು. ವೆಲ್‌ವೆಟ್‌ ಫ್ರಂಟೆಡ್‌ ನೆಟ್‌ ಹ್ಯಾಚ್‌ ಎಂದೂ ಆಂಗ್ಲದಲ್ಲಿ, ಕನ್ನಡದಲ್ಲಿ ಮಕ್ಮಲ್‌ ನೆತ್ತಿಯ ಮರಗುಬ್ಬಿ ಎನ್ನುತ್ತಾರೆ ಅನ್ನೋದು ತಿಳಿಯಿತು.  ಮರು ದಿನ ಮುಂಜಾನೆ ಆಗುತ್ತಿದ್ದಂತೆ ಮನೆಯ ಮುಂದಿನ ತೋಟಕ್ಕೆ ಓಡಿದರು.  ಅಲ್ಲಿ ಮರಗುಬ್ಬಿ ಏನು ಮಾಡುತ್ತಿದೆ ಎಂದು ಕಣ್ಣರಳಿಸಿ ನೋಡಿದರು. ತಾಯಿ ಈ ಮರಿಗಳಿಗೆ ಗುಟುಕು ತಂದು ತಿನ್ನಿಸುತ್ತಿತ್ತು. ಖುಷಿ ಆಯಿತು. ಮರಿಗಳನ್ನು ಉಳಿಸಿದ “ಧನ್ಯತೆ’ ಮೂಡಿತು.

ಎರಡು ದಿನಗಳು ಉರುಳಿದವು. ಮೂರನೇ ದಿನ ನಾವ್ಯಾಕೆ ಇದರ ಫೋಟೋಗ್ರಫಿ ಮಾಡಬಾರದು ಎನ್ನಿಸಿತು. ಗೂಡಿನಿಂದ ಹತ್ತಡಿ ದೂರದಲ್ಲಿ ಒಂದಷ್ಟು ಅಡಿಕೆ ಸೋಗೆ ಹಾಕಿ ಮರೆ ಮಾಡಿ ಪಕ್ಷಿಗಳ ಜೀವನ ವಿಧಾನಕ್ಕೆ ಧಕ್ಕೆ ಆಗದಂತೆ ಫೋಟೋ ತೆಗೆಯಲು ಒಂದು ಗೂಡು ಮಾಡಿದರು. ಆವಾಗಲೇ ಮೂರು ಮರಿಗಳೂ ಹಾರಲು ಸಜಾjದಂತೆ ಕಂಡು ಬಂದಿದ್ದವು. ಅಲ್ಲೇ ಆಚೀಚೆ ಜಿಗಿಯುತ್ತ ಆಡುತ್ತಿದ್ದವು. ತಾಯಿ ಗುಬ್ಬಿ ಕೂಡ ಅವುಗಳಿಗೆ ಹಾರಲು, ರೆಕ್ಕೆ ಬಡಿಯಲು ಟ್ರೈನಿಂಗ್‌ ಕ್ಯಾಂಪ್‌ ನಡೆಸುತ್ತಿತ್ತು.

Advertisement

ಮರು ದಿನ ಮುಂಜಾನೆ ಮನೆಯಲ್ಲಿ ಗಡಿಬಿಡಿ. ಆರಕ್ಕೇ ತಿಂಡಿ ತಿಂದು ತೋಟಕ್ಕೆ ಹೊರಡಲು ಸಜಾjದರು. ತಪಸ್ಸಿಗೆ ಹೊರಟವರಂತೆ ನಿಕಾನ್‌ ಡಿ7000 ಕೆಮರಾ ಜೊತೆ 70 ಟು 300 ಟೆಲಿ ಲೆನ್ಸ್‌ ಕೂಡ ಬಗಲಿಗೆ ಏರಿಸಿಕೊಂಡರು. ತೋಟದಲ್ಲಿ ನಿರ್ಮಾಣ ಮಾಡಿದ ಇವರ ಗೂಡಿನಲ್ಲಿ ಸುಮ್ಮನೆ ಕುಳಿತರು. ಕೆಮರಾದ ಲೆನ್‌‌Õ ಮಾತ್ರ ಪಕ್ಷಿ$ ಹುಡುಕುತ್ತಿತ್ತು. ಆದರೆ, ಮೂರು ಮರಿಗಳಲ್ಲಿ ಎರಡು ಮಾತ್ರ ಇದ್ದವು. ಇನ್ನೊಂದು ಎಲ್ಲೋಯಿತು ಅಂತ ಹುಡುಕಿದರೂ ಕಾಣಲಿಲ್ಲ. 

ಅಡಿಕೆ ಮರದ ಮೇಲಿನಿಂದ ತಾಯಿ ಮರಗುಪ್ಪಿ ಯಾವುದೋ ಕೀಟ ಹಿಡಿದು ಉಲ್ಟಾ ಇಳಿಯುತ್ತಿತ್ತು. ಈ ಪಕ್ಷಿಯ ಜೀವನ ಶೈಲಿಯೇ ಹಾಗಂತೆ. ಇಳಿದು ಇಳಿದು ಬಂದು ಮರಿಗಳ ಬಳಿ ಗುಟುಕು ನೀಡುತ್ತಿತ್ತು. ಈಗ ಒಂದು ಮರಿಗೆ ಕೊಟ್ಟರೆ ಇನ್ನೈದು ನಿಮಿಷ ಇನ್ನೆಲ್ಲೋ ಹೋಗಿ ಮತ್ತೂಂದು ಗುಟುಕು ತಂದು ಕೊಡುತ್ತಿತ್ತು. ಮರಿಗಳು ಅಲ್ಲೇ ಆಟ ಆಡುತ್ತ ಇರುವಾಗ ಇವರ ಕೆಮರಾದ ಶಟರ್‌ಗಳು ಸದ್ದಿಲ್ಲದೇ ಕೆಲಸ ಮಾಡುತ್ತಿದ್ದವು. 

ತಾಯಿ ಗುಬ್ಬಿ ಮರಿಗಳಿಗೆ ಜೀವನ ಪಾಠವನ್ನೂ ಆರಂಭಿಸಿತ್ತು. ಗುಟುಕು ಕೊಡುವ ಜೊತೆಗೆ ಹಾರಾಟ ಮಾಡುವದನ್ನೂ ಕಲಿಸುತ್ತಿತ್ತು. ಒಂದು ಮರಿ ಹೀಗೇ ಹಾರಿ ಹೋಯಿತೇ? 

ಎಷ್ಟೋ ಸಲ ಕೆಮರಾ ಹಿಡಿದಿದ್ದರೂ ಅವು ಗುಟಕು ಕೊಡುವಾಗ, ಅಲ್ಲೇ ಸಮೀಪದ ಮರಗಳಿಗೆ ಹಾರಾಟ ಮಾಡುವುದನ್ನು ಕಲಿಸುವಾಗ ಕೆಮರಾ ಕ್ಲಿಕ್‌ ಮಾಡುವುದೂ ಮರೆಸಿದ್ದಿದೆ. ಮಧ್ಯಾಹ್ನ 2 ಗಂಟೆಯ ತನಕ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ಫೋಟೊ ಕ್ಲಿಕ್‌ ಮಾಡಿದರು. ಸಂಜೆ ಮತ್ತೆ ಅದೇ ಸ್ಥಳಕ್ಕೆ ಹೋದರೆ ಆ ಮರಗುಪ್ಪಿಯ ಮರಿಗಳು ಹಾರಾಟ ಆರಂಭಿಸಿದ್ದವು. ಇವರತ್ತ ನೋಡಿ ಹಾರಿ ಹೋದಂತೆ ಭಾಸವಾಯಿತು. ಹಕ್ಕಿಸ ಸಂಸಾರವನ್ನು ಸಾವಿನ ದವಡೆಯಿಂದ ಬದುಕುಳಿಸಿದ ನೆಮ್ಮದಿ ಇವರಲ್ಲಿ ಧನ್ಯತೆ ಮೂಡಿಸಿತು. 

ಅಂದು ಕ್ಲಿಕ್ಕಿಸಿದ್ದು ಸುಮಾರು 50-60 ಫೋಟೋಗಳು. ಆದರೆ, ಅವುಗಳಲ್ಲಿ ಹತ್ತಾರು ಚಿತ್ರಗಳು ಸೊಗಸಾಗಿದ್ದವು. ಅವಲ್ಲಿ ಒಂದನ್ನು ಆಯ್ದು ಕಜಕಿಸ್ತಾನದ ಸ್ಪರ್ಧೆಗೆ ಕಳಿಸಿದರು.  ಆ ಚಿತ್ರಕ್ಕೆ ಚಿನ್ನದ ಗರಿ ಬಂದಿತ್ತು. ಮರಿ ಉಳಿಸಿದ್ದಕ್ಕೆ ಚಿನ್ನವನ್ನೇ ಕೊಟ್ಟಿತ್ತು ಮಕ್ಮಲ್‌ ಮರಗುಪ್ಪಿ. ನಾಗೇಂದ್ರ ಮುತು¾ìರ್ಡು ಅವರು ಅರಸಿ ಬಂದಿದ್ದೂ ಅದೇ! ಊಹಿಸಲಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ. ಶತಮಾನದ ಇತಿಹಾಸ ಇರುವ  ಅಮೇರಿಕನ್‌ ಫೋಟೋಗ್ರಫಿ ಅಸೋಸಿಯೇಶನ್‌ ಪ್ರಾಯೋಜಕತ್ವದ ಪ್ರಶಸ್ತಿ!! 

ನಾಗೇಂದ್ರ ಮನೆಯ ಸುತ್ತಲಿನ ಪರಿಸರ, ಹೊಳೆ, ಅಡಿಕೆ ತೋಟವೇ ಕೆಮರಾದ ಆಹಾರಗಳೂ ಆಗಿವೆ.  ಹಿಮಾಲಯದ ತಪ್ಪಲುಗಳಲ್ಲಿ ದಾಖಲಿಸಿದ ಚಿತ್ರಗಳು ಅನೇಕ ಪ್ರದರ್ಶನ, ಪ್ರಶಸ್ತಿ ಬಾಚಿ ಕೊಟ್ಟಿವೆ. ಖ್ಯಾತ ಫೋಟೋಗ್ರಾಫ‌ರ್‌ ಕೆ.ಎಸ್‌.ರಾಜಾರಮ್‌ ಹಾಗೂ ಎಂ.ಎಸ್‌.ಹೆಬ್ಟಾರರ ಸಲಹೆಗಳು ಛಾಯಾಗ್ರಹಣ ಬದುಕಿಗೆ ದೊಡ್ಡ ತಿರುವೇ ನೀಡಿದ್ದವು. ಈಗಾಗಲೇ ಆರಕ್ಕೂ ಅಧಿಕ ಅಂತರಾಷ್ಟ್ರೀಯ, 30ಕ್ಕೂ ಅಧಿಕ ರಾಷ್ಟ್ರೀಯ ಪ್ರಶಸ್ತಿಗಳು ಮುತು¾ರ್ಡು ಹುಡುಕಿಕೊಂಡು ಬಂದಿವೆ. 

ಮೊನ್ನೆ ಬಂದ ಪ್ರಶಸ್ತಿ ಬಗ್ಗೆ  ಹೋಯ್‌, ಮಕ್ಮಲ್‌ ಮರಗುಪ್ಪಿಯೇ ನಿನ್ನ ಸಂಸಾರದ ಚಿತ್ರಕ್ಕೆ ಪ್ರಶಸ್ತಿ ಬಂದಿದೆ ಎಂದು ಕೂಗಿ ಹೇಳ್ಳೋಣ ಎಂದು ಅದೇ ಅಡಿಕೆ ತೋಟ ಹುಡುಕಿದರೂ ಪಕ್ಷಿ ಕಾಣಲಿಲ್ಲ.  ಕೂಗಿ ಕೂಗಿ ಹೇಳಿದರೂ ಕೇಳಿತೋ ಇಲ್ಲವೋ?

ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next