Advertisement

ಗೊಂದಲದ ಗೂಡಾದ ನಗರಸಭೆಯ ಸಾಮಾನ್ಯ ಸಭೆ : ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ

01:56 PM Jan 05, 2022 | Team Udayavani |

ಗಂಗಾವತಿ : ಗಂಗಾವತಿ ನಗರದಲ್ಲಿ ಇತ್ತೀಚೆಗೆ ಸೇನಾ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರ ವೃತ್ತ ನಿರ್ಮಾಣ ಮತ್ತು ಉದ್ಘಾಟನೆ ಸಂಬಂಧಪಟ್ಟಂತೆ ನಗರಸಭೆಯ ತುರ್ತು ಸಾಮಾನ್ಯ ಸಭೆ ಬುಧವಾರ ಜರುಗಿತು. ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷದ ಸದಸ್ಯರು ಪರಸ್ಪರ ಮಾತನಾಡುವುದರಲ್ಲಿ ಕಾಲಕಳೆದರು ವೃತ್ತ ತೆರವು ಅಥವಾ ಖಾಯಂ ಆಗಿ ಉಳಿಸುವ ಕುರಿತು ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ .

Advertisement

ಆಡಳಿತ ಪಕ್ಷದ ಶಾಮೀದ್ ಮನಿಯಾರ್ ಸೋಮನಾಥ ಭಂಡಾರಿ ಖಾಸಿಂಸಾಬ್ ಗದ್ವಾಲ್ ಸೇರಿದಂತೆ ಹಲವು ಸದಸ್ಯರು ಮಾತನಾಡಿ ಬಿಪಿನ್ ರಾವತ್ ವೃತ್ತವನ್ನು ಪ್ರಾಪರ್ ಶಾಲೆಯ ಮುಂದುಗಡೆ ಅಥವಾ ಶೀವೆ ಟಾಕೀಸ್ ಮುಂದುಗಡೆ ನಿರ್ಮಾಣ ಮಾಡೋಣ ಇದರಿಂದ ನಗರದ ಜನರು ವಿಶಾಲವಾದ ಜಾಗದಲ್ಲಿ ಬಿಪಿನ್ ರಾವತ್ ಅವರ ಕಂಚಿನ ಪುತ್ಥಳಿ ನೋಡುವ ಭಾಗ್ಯ ದೊರಕುವಂತಾಗುತ್ತದೆ. ಅಥವಾ ಸಿಬಿಎಸ್ ವೃತ್ತದಲ್ಲಿ ಆಳೆತ್ತರದ ಕಂಚಿನ ಪುತ್ಥಳಿಯನ್ನು ನಿರ್ಮಾಣ ಮಾಡಿ ರಸ್ತೆ ಬದಿ ಇರಿಸೋಣ ಇದರಿಂದ ಜನರು ಬಿಪಿನ್ ರಾವತ್ ಅವರಿಗೆ ಗೌರವ ಸಲ್ಲಿಸುತ್ತಾರೆ. ಅದು ಬಿಟ್ಟು ಸಣ್ಣ ಜಾಗದಲ್ಲಿ ಈಗಾಗಲೇ ಇಸ್ಲಾಂಪೂರ ವೃತ್ತ ಎಂದು ನಗರ ಸಭೆಯಲ್ಲಿ ಅನುಮೋದನೆ ಮಾಡಿದ ಜಾಗದಲ್ಲಿ ಬಿಪಿನ್ ರಾವತ್ ವೃತ್ತ ನಿರ್ಮಾಣ ಬೇಡ ಎಂದರು. ಇದಕ್ಕೆ ಬಿಜೆಪಿ ಸದಸ್ಯರಾದ ಪರಶುರಾಮ್ ಮಡ್ಡೇರ್ ಅಜಯ್ ಬಿಚ್ಚಾಲಿ, ನವೀನ್ ಪಾಟೀಲ್, ರಮೇಶ ಚೌಡ್ಕಿ, ವಾಸುದೇವ ನವಲಿ, ಉಮೇಶ್ ಸಿಂಗನಾಳ ಸೇರಿದಂತೆ ಬಿಜೆಪಿಯ ಬಹುತೇಕ ಸದಸ್ಯರು ಈಗ ನಿರ್ಮಾಣ ಮಾಡಿರುವ ಸ್ಥಳದಲ್ಲಿಯೇ ಬಿಪಿನ್ ರಾವತ್ ಹೆಸರು ಮತ್ತು ಪುತ್ಥಳಿ ನಿರ್ಮಾಣ ಮಾಡೋಣ ಬೇರೆ ಕಡೆ ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಮಧ್ಯೆ ಕಾಂಗ್ರೆಸ್ ಬಿಜೆಪಿ ಸದಸ್ಯರ ಮಧ್ಯೆ ಪರಸ್ಪರ ವಾಗ್ವಾದ ಜರುಗಿದವು ಸಭೆಯನ್ನು ನಿಯಂತ್ರಿಸಲಾಗದೆ ಅಧ್ಯಕ್ಷೆ ಮಾಲಾಶ್ರೀ ಹಾಗೂ ಪೌರಾಯುಕ್ತ ಅರವಿಂದ ಜಮಖಂಡಿ ಸದಸ್ಯರ ಅಭಿಪ್ರಾಯ ಪಡೆದು ಜಿಲ್ಲಾಧಿಕಾರಿಗಳಿಗೆ ಇಲ್ಲಿಯ ಸಭೆಯ ನಿಲುವುಗಳನ್ನು ಕಳುಹಿಸಲು ನಿರ್ಧಾರ ಕೈಗೊಂಡು ಸಭೆಯನ್ನ ಮುಕ್ತಾಯಗೊಳಿಸಿದರು.

ಈ ಮಧ್ಯೆ ಸಭೆಗೆ ಪೋಲಿಸರನ್ನ ಆಹ್ವಾನಿಸಿದ್ದ ಕುರಿತು ಆಡಳಿತ ಪಕ್ಷದ ಶಾಮೀದ್ ಮನಿಯಾರ್ ಮತ್ತು ಸೋಮನಾಥ ಭಂಡಾರಿ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು ಇಲ್ಯಾರೂ ಅಪರಾಧಿಗಳಿಲ್ಲ ಪರಸ್ಪರ ಚರ್ಚೆ ಮೂಲಕ ವಿಷಯವನ್ನು ಸರ್ಕಾರಕ್ಕೆ ಕಳುಹಿಸುವ ಸಲುವಾಗಿ ಈ ಸಭೆಯನ್ನು ಕರೆಯಲಾಗಿದೆ ಪೋಲಿಸರನ್ನು ಕರೆಸುವ ಮೂಲಕ ಸಭೆಗೆ ಅಗೌರವ ತೋರಿಸಲಾಗಿದೆ. ಪೋಲಿಸರನ್ನು ಕರೆಯುವುದು ಸರಿಯಲ್ಲ ಸದಸ್ಯರ ಹಕ್ಕುಗಳಿಗೆ ಚ್ಯುತಿಯಾಗುತ್ತದೆ ಪೊಲೀಸರ ಮಧ್ಯಪ್ರವೇಶ ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂದರು.

Advertisement

ಇದಕ್ಕೆ ಪ್ರತಿಕ್ರೀಯಿಸಿದ ಪೌರಾಯುಕ್ತ ಅರವಿಂದ ಜಮಖಂಡಿ ಸಭೆಯ ವರದಿಯನ್ನು ಮಾಡಲು ಪೊಲೀಸರು ಆಗಮಿಸಿದ್ದಾರೆ ಸದಸ್ಯರ ಚರ್ಚೆ ಸಭೆ ಅಭಿಪ್ರಾಯಕ್ಕೆ ಯಾವುದೇ ಅಡ್ಡಿಯಿಲ್ಲ ಪೊಲೀಸರು ತಮ್ಮ ಕರ್ತವ್ಯ ಮಾಡುತ್ತಾರೆ ಸದಸ್ಯರು ಯಾವುದೇ ಕಾರಣಕ್ಕೂ ಪೊಲೀಸರ ಬಗ್ಗೆ ಅನುಮಾನ ವ್ಯಕ್ತಪಡಿಸಬಾರದು ಎಂದರು. ನಂತರ ಸಭೆ ಯಾವುದೇ ನಿರ್ಣಯಕ್ಕೆ ಬರದೆ ಗೊಂದಲದಲ್ಲಿಯೇ ಮುಕ್ತಾಯವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next