ಮುಂಬಯಿ: ಬಿಪಿನ್ ಫುಟ್ಬಾಲ್ ಆಕಾಡೆಮಿಯ 31ನೇ ವಾರ್ಷಿಕ ಅಂತರ್ ಕೇಂದ್ರ ಫುಟ್ಬಾಲ್ ಪಂದ್ಯಾಟವು ಡಿ. 30ರಿಂದ ಡಿ. 31 ರವರೆಗೆ ಎರಡು ದಿನಗಳ ಕಾಲ ಚರ್ಚ್‌ಗೇಟ್‌ನ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆಯಿತು.
ಡಿ. 30ರಂದು ಬೆಳಗ್ಗೆ 8.30ಕ್ಕೆ ಪಂದ್ಯಾಟವನ್ನು ಇಂಡಿಯಾ ಜೂನಿಯರ್ ಫುಟ್ಬಾಲ್ ತಂಡದ ಮಾಜಿ ನಾಯಕ ರತ್ನಾಕರ ಶೆಟ್ಟಿ ಅವರು ಫುಟ್ಬಾಲ್ ಆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಬಿಪಿನ್ ಫುಟ್ಬಾಲ್ ಅಕಾಡೆಮಿಯು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಗೆಡವಲು ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಬಿಪಿನ್ ಅಕಾಡೆಮಿಯ ಫುಟ್ಬಾಲ್ ಒಲವು ಮೆಚ್ಚುವಂಥದ್ದು. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಉತ್ತಮ ಆಟಗಾರರಾಗಿ ಹೊರಹೊಮ್ಮಲು ಕಠಿನ ಪರಿಶ್ರಮ, ಶ್ರದ್ಧೆ ಬೇಕು. ಮಕ್ಕಳಿಗೆ ಈ ವಯಸ್ಸು ಫುಟ್ಬಾಲ್ ಆಟವಾಡಲು ಉತ್ತಮವಾಗಿದ್ದು, ಅದಕ್ಕೆ ಪೂರಕವಾಗಿ ಬಿಪಿನ್ ಅಕಾಡೆಮಿ ಕಾರ್ಯ ನಿರ್ವಹಿಸುತ್ತಿದೆ. ಸದಾ ಕ್ರಿಯಾತ್ಮಕವಾಗಿದ್ದರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ. ಮಕ್ಕಳ ಉಲ್ಲಾಸ, ಉತ್ಸುಕತೆಯನ್ನು ಕಂಡಾಗ ಸಂತೋಷವಾಗುತ್ತಿದೆ ಎಂದು ನುಡಿದು ಶುಭ ಹಾರೈಸಿದರು.
ಬಿಪಿನ್ ಫುಟ್ಬಾಲ್ ಅಕಾಡೆಮಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ತುಳು-ಕನ್ನಡಿಗರು ಹಾಗೂ ಪ್ರಾಯೋಜಕರು, ಫುಟ್ಬಾಲ್ ಅಭಿಮಾನಿಗಳು ಉಪಸ್ಥಿತರಿದ್ದರು. ನಾಕೌಟ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ಚರ್ಚ್‌ಗೇಟ್, ಕೊಲಬಾ, ಬಿಎಂಸಿ ಕ್ಯಾಂಪ್ ಬ್ಯಾಕ್‌ಬೇ, ವಿರಾರ್, ಕಲ್ಯಾಣ್, ಕಾಂದಿವಲಿ, ಉಲ್ಲಾಸ್‌ನಗರ-ಅಂಬರ್‌ನಾಥ್ ಮತ್ತು ಅಂಧೇರಿ ಹೀಗೆ ಒಂದು ತಿಂಗಳ ಕಾಲ ವಿವಿಧೆಡೆಗಳಲ್ಲಿ ನಡೆದ ಉಚಿತ ತರಬೇತಿ ಕೇಂದ್ರಗಳಲ್ಲಿ ತರಬೇತು ಪಡೆದ ವಿದ್ಯಾರ್ಥಿಗಳು ಪ್ರಶಸ್ತಿಗಾಗಿ ಸೆಣಸಾಡಿದರು.
ಉದ್ಘಾಟನ ಪಂದ್ಯದಲ್ಲಿ ನಿಖೀಲ್ ಸದಾಪ್ಲಾ ಅವರ ಉತ್ತಮ ಪ್ರದರ್ಶನದಿಂದ ಬಿಪಿನ್ ಕಲ್ಯಾಣ್ ಕ್ಯಾಂಪ್ ತಂಡವು ಅಂಧೇರಿ ಕ್ಯಾಂಪ್ ತಂಡವನ್ನು 4-1 ಅಂತರದಿಂದ ಸೋಲಿಸಿತು. ಪರಾಜಿತ ತಂಡದ ಅರವಿಂದ ರೆಡ್ಡಿ ಅವರು ಏಕೈಕ ಗೋಲು ಹೊಡೆದರೆ, ವಿಜೇತ ತಂಡದ ಪರ ನಿಖೀಲ್ ಸದ್ಪಾಲಾ , ಯಶ್ ಕನೋಜಿಯಾ 1 ಗೋಲು ಬಾರಿಸಿದರು. ಇನ್ನೊಂದು ಪಂದ್ಯದಲ್ಲಿ ಬಿಪಿನ್ ಬಿಎಂಸಿ ಕ್ಯಾಂಪ್ ತಂಡವು ಬಲಿಷ್ಠ ವಿರಾರ್ ಕ್ಯಾಂಪ್ ತಂಡವನ್ನು ಸೋಲಿಸಿತು. ವಿಜೇತ ತಂಡದ ಪರವಾಗಿ ಕುಮಾರ್ ರಾಥೋಡ್ ಏಕೈಕ ಗೋಲು ಬಾರಿಸಿದರು.
ಬಿಪಿನ್ ಕೊಲಬಾ ಕ್ಯಾಂಪ್ ತಂಡವು ಬಿಪಿನ್ ಚರ್ಚ್‌ಗೇಟ್ ತಂಡದ ಪಂದ್ಯವು 1-1 ಅಂತರದಿಂದ ಡ್ರಾಗೊಂಡಿತು. ಕೊಲಾಬಾ ತಂಡದ ಪರವಾಗಿ ಅಮಿತ್ ಸೆಮಾÌಲ್ ಮತ್ತು ಚರ್ಚ್‌ಗೇಟ್ ತಂಡದ ಹಫೀಜ್ ಕೌರ್ ಗೋಲು ಹೊಡೆದರು. ಬಿಪಿನ್ ಬಿಎಂಸಿ ಕ್ಯಾಂಪ್ ಮತ್ತು ಬಿಪಿನ್ ಉಲ್ಲಾಸ್ ನಗರ ಅಂಬರ್‌ನಾಥ್ ಕ್ಯಾಂಪ್ ತಂಡಗಳ ಪಂದ್ಯವು 1-1 ಅಂತರದಿಂದ ಡ್ರಾಗೊಂಡಿತು.
ಬಿಪಿನ್ ಕಾಂದಿವಲಿ ಕ್ಯಾಂಪ್ ತಂಡ ಮತ್ತು ಬಿಪಿನ್ ಉಲ್ಲಾಸ್‌ನಗರ -ಅಂಬರ್‌ನಾಥ್ ತಂಡದ ಪಂದ್ಯವು ಯಾವುದೇ ಗೋಲುಗಳಿಲ್ಲದೆ ಡ್ರಾಗೊಂಡಿತು. ಬಿಪಿನ್ ಚರ್ಚ್‌ಗೇಟ್ ಕ್ಯಾಂಪ್ ತಂಡವು ಅಂಧೇರಿ ಕ್ಯಾಂಪ್ ತಂಡದ ವಿರುದ್ಧ 6-0 ಅಂತರದಿಂದ ಭರ್ಜರಿಯಾಗಿ ಜಯ ಗಳಿಸಿತು. ವಿಜೇತ ತಂಡದ ಪರವಾಗಿ ರೋಹಿತ್ ಪವಾರ್-2 ಹಾಗೂ ಅಥರ್ವ ಶಿಂಧೆ , ಸ್ಪರ್ಶ್ ಪಡ್ಡಿಗರ್ ಮತ್ತು ಕರುಣ್ ಪ್ರಜಾಪತಿ, ತನ್ಮಯ್ ಶಿವಾಲೆ ತಲಾ ಒಂದೊಂದು ಗೋಲು ಹೊಡೆದರು. ಬಿಪಿನ್ ಬಿಎಂಸಿ ಕ್ಯಾಂಪ್ ತಂಡವು ಬಿಪಿನ್ ವಿರಾರ್ ತಂಡವನ್ನು 1-0 ಅಂತರದಿಂದ ಸೋಲಿಸಿದೆ. ವಿಜೇತ ತಂಡದ ಪರವಾಗಿ ಕುಮಾರ್ ರಾಥೋಡ್ ಗೆಲುವಿನ ಗೋಲು ಹೊಡೆದರು.