ಇಂದು (ಫೆ. 21) ನಟ ಧನಂಜಯ್ ಅಭಿನಯದ, ದುನಿಯಾ ಸೂರಿ ನಿರ್ದೇಶನದ “ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರ ತೆರೆಗೆ ಬರುತ್ತಿದೆ. ಈಗಾಗಲೇ ಫಸ್ಟ್‌ಲುಕ್, ಟೀಸರ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಒಂದಷ್ಟು ನಿರೀಕ್ಷೆ ಮೂಡಿಸಲು ಯಶಸ್ವಿಯಾಗಿರುವ “ಪಾಪ್‌ಕಾರ್ನ್ ಮಂಕಿ ಟೈಗರ್’ ಥಿಯೇಟರ್‌ನಲ್ಲಿ ಸಿನಿಪ್ರಿಯರಿಗೆ ಎಷ್ಟರಮಟ್ಟಿಗೆ ಇಷ್ಟವಾಗುತ್ತದೆ ಅನ್ನೋ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಇದರ ಹಿಂದೆಯೇ ನಟ ಧನಂಜಯ್ ನಾಯಕನಾಗಿ ಅಭಿನಯಿಸುತ್ತಿರುವ ಮತ್ತೂಂದು ಚಿತ್ರ ಸದ್ದಿಲ್ಲದೆ ಸೆಟ್ಟೇರಿದೆ.
ಹೌದು, ಬೆಂಗಳೂರು ಭೂಗತ ಲೋಕದ ಮಾಜಿ ಡಾನ್ ಜಯರಾಜ್ ಬಯೋಪಿಕ್ ಚಿತ್ರ ಕನ್ನಡದಲ್ಲಿ ತಯಾರಾಗುತ್ತಿದ್ದು, ಈ ಚಿತ್ರದಲ್ಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರ ಕನ್ನಡ, ತಮಿಳು, ತೆಲುಗು ಸೇರಿದಂತೆ ಏಕಕಾಲಕ್ಕೆ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, ಚಿತ್ರದ ಟೈಟಲ್, ಇತರ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ.
ಇನ್ನು ಈ ಹಿಂದೆ, “ಆ ದಿನಗಳು’, “ಎದೆಗಾರಿಕೆ’ ಚಿತ್ರಕ್ಕೆ ಕಥೆಯನ್ನು ಬರೆದಿದ್ದ ಅಗ್ನಿ ಶ್ರೀಧರ್, ಈ ಚಿತ್ರಕ್ಕೂ ಕಥೆಯನ್ನು ಬರೆಯುತ್ತಿದ್ದಾರೆ. ಈಗಾಗಲೇ ಕನ್ನಡದ ಕೆಲವು ಚಿತ್ರಗಳಲ್ಲಿ ಭೂಗತ ಪಾತಕಿ ಜಯರಾಜ್ ಬಗ್ಗೆ ಒಂದಷ್ಟು ವಿಷಯಗಳನ್ನು ತೋರಿಸಲಾಗಿದ್ದರೂ, ಈ ಚಿತ್ರದ ಕಥೆ ಸಂಪೂರ್ಣವಾಗಿ ಜಯರಾಜ್ ಮತ್ತು ಆತನ ಜೀವನದ ಸುತ್ತವೇ ನಡೆಯಲಿದೆ. ಇದು ಜಯರಾಜ್‌ನ ಜೀವನ ಕಥೆ ಚಿತ್ರ. ಈಗಾಗಲೇ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರೀಕರಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಚಿತ್ರವನ್ನು ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ ಎಂದು ಮಾಹಿತಿ ನೀಡುತ್ತದೆ ಚಿತ್ರತಂಡ. ಸದ್ಯ “ಜಯರಾಜ್’ ಎಂಬ ಹೆಸರಿನಲ್ಲಿ ವರ್ಕಿಂಗ್ ಟೈಟಲ್ ಇಟ್ಟುಕೊಂಡು ಚಿತ್ರದ ಕೆಲಸಗಳು ಆರಂಭವಾಗಿದ್ದು, ಅಶುಬೇದ್ರ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ನವ ಪ್ರತಿಭೆ ಶೂನ್ಯ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಒಟ್ಟಾರೆ ಇಲ್ಲಿಯವರೆಗೆ ವಿವಿಧ ಪಾತ್ರಗಳ ಮೂಲಕ ಕನ್ನಡ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ನಟ ಧನಂಜಯ್ ಈ ಬಾರಿ ಜಯರಾಜ್ ಬಯೋಪಿಕ್‌ನಲ್ಲಿ ಮತ್ತೂಂದು ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ಮೂಲಕ ಧನಂಜಯ್ ಚಿತ್ರ ಭಾರತದ ಬೇರೆ ಬೇರೆ ಭಾಷೆಗಳಲ್ಲೂ ತೆರೆಗೆ ಬರುತ್ತಿದ್ದು, ಡಾಲಿ ಧನಂಜಯ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಳ್ಳಲು ತಯಾರಾಗುತ್ತಿದ್ದಾರೆ.