Advertisement

ಬಯೋಮೆಟ್ರಿಕ್‌ ಪಡಿತರ: ಗ್ರಾಹಕರು ಕಂಗಾಲು

11:30 PM Jan 24, 2020 | Sriram |

ಕಾಪು: ಪಡಿತರ ವ್ಯವಸ್ಥೆಯಲ್ಲಿನ ಸುಧಾರಣೆ, ಪಡಿತರ ದುರುಪಯೋಗವನ್ನು ತಡೆಗಟ್ಟುವ ಉದ್ದೇಶದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಾರಿಗೆ ತಂದಿರುವ ಬಯೋ ಮೆಟ್ರಿಕ್‌ ಆಧರಿತ ಪಡಿತರ ವಿತರಣೆ ವ್ಯವಸ್ಥೆ ಗ್ರಾಹಕರಿಗೆ ಸಿಹಿಯಾಗುವ ಬದಲು ಕಹಿಯಾಗಿದೆ.

Advertisement

ಸರ್ವರ್‌ ದೋಷ
ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗಾಗಿ ಅಳವಡಿಸಿರುವ ಬಯೋಮೆಟ್ರಿಕ್‌ ವ್ಯವಸ್ಥೆಯ ಸರ್ವರ್‌ನಲ್ಲಿ ದೋಷಗಳು ಕಂಡು ಬಂದಿರುವುದರಿಂದ ಪಡಿತರ ಪಡೆಯಲು ಪಡಿತರ ಅಂಗಡಿಗಳ ಮುಂದೆ ಬೆಳಗ್ಗಿನಿಂದಲೇ ಸಾಲುಗಟ್ಟಿ ನಿಲ್ಲುವಂತಾಗಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶಗಳ ಜನರು, ಪಡಿತರ ಪೂರೈಕೆದಾರರು ಸಮಸ್ಯೆಗೆ ಸಿಲುಕುವಂತಾಗಿದೆ.

ಗ್ರಾಹಕರು ಬೆಳಗ್ಗೆಯಿಂದಕೊನೇ ಕ್ಷಣದವರೆಗೂ ಪಡಿತರಕ್ಕಾಗಿ ಕಾದು ನಿಂತು ವಾಪಸ್ಸಾಗುವುದು ಸಾಮಾನ್ಯವಾಗಿದೆ. ಪಡಿತರಕ್ಕಾಗಿ ವಯೋವೃದ್ಧರು, ಮಹಿಳೆಯರು, ಮಕ್ಕಳು ಸಾಲಿನಲ್ಲಿ ನಿಂತು ಬರಿಕೈಯಲ್ಲಿ ಮರಳುತ್ತಿದ್ದಾರೆ. ಪಡಿತರಕ್ಕಾಗಿ ಹಲವರು ರಜೆ ಹಾಕಿ ಕ್ಯೂ ನಿಲ್ಲುತ್ತಿದ್ದು, ಆದರೂ ಲಭ್ಯವಾಗುತ್ತಿಲ್ಲ.

ಎಲ್ಲೆಲ್ಲಿ ಸಮಸ್ಯೆ?
ಕಾಪು ವ್ಯವಸಾಯ ಸೇವಾ ಸಹಕಾರಿ ಸಂಘದ ವ್ಯಾಪ್ತಿಯ ಕಾಪು, ಉಳಿಯಾರಗೋಳಿ, ಮಲ್ಲಾರು, ಮೂಳೂರು, ಚಂದ್ರನಗರ, ಬಂಟಕಲ್ಲು ನ್ಯಾಯ ಬೆಲೆ ಅಂಗಡಿಗಳಲ್ಲಿ ಸಮಸ್ಯೆಯಿದೆ. ಕೆಲವೆಡೆ ಬೆಳಗ್ಗೆ ಮತ್ತು ಕೆಲವೆಡೆ ಮಧ್ಯಾಹ್ನ ಪಡಿತರ ವಿತರಣೆ ಮಾಡಲಾಗುತ್ತಿದ್ದು, ಸರ್ವರ್‌ ದೋಷದಿಂದ ಈ ಬಾರಿ ಸಮರ್ಪಕವಾಗಿ ಪಡಿತರ ವಿತರಣೆಯಾಗಿಲ್ಲ. ಸಂಘದ ವ್ಯಾಪ್ತಿಯಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಪಡಿತರ ಚೀಟಿದಾರರಿದ್ದು, ಈವರೆಗೆ ಕೇವಲ ಶೇ. 30ರಷ್ಟು ವಿತರಣೆಯಾಗಿದೆ.

ತಾಲೂಕಿನಾದ್ಯಂತ ಸಮಸ್ಯೆ
ತಾಲೂಕಿನಲ್ಲಿ ಕಾಪು, ಶಿರ್ವ, ಇನ್ನಂಜೆ, ಬೆಳಪು, ಕಟಪಾಡಿ, ಪಡುಬಿದ್ರಿ ಹೀಗೆ 6 ಸಹಕಾರ ಸಂಘಗಳಿದ್ದು, ಇವುಗಳ ಮೂಲಕ 30ಕ್ಕೂ ಹೆಚ್ಚು ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಪೂರೈಕೆ ಮಾಡಲಾಗುತ್ತಿದೆ. ಎಲ್ಲೆಡೆ ಇದೇ ರೀತಿಯ ತೊಂದರೆ ಇದೆ.

Advertisement

ಇಲಾಖೆಗೆ ಪತ್ರ
ಪಡಿತರ ವಿತರಣೆಯ ಬಯೋ ಮೆಟ್ರಿಕ್‌ ವ್ಯವಸ್ಥೆಯಲ್ಲಿ ಆಗಾಗ ಸಮಸ್ಯೆ ಎದುರಾಗುತ್ತಿದೆ. ಉತ್ತಮ ಸರ್ವರ್‌ ಅಳವಡಿಸುವಂತೆ ಸಂಬಂಧಪಟ್ಟವರಲ್ಲಿ ನಾವು ಹಲವು ಬಾರಿ ಮನವಿ ಮಾಡಿದ್ದೇವೆ.
-ಪಡಿತರ ವಿತರಣೆ ಸಿಬಂದಿ

ಇಲಾಖೆಗೆ ಪತ್ರ
ಸರ್ವರ್‌ನಲ್ಲಿ ದೋಷವಿರುವುದರಿಂದ ಸಕಾಲದಲ್ಲಿ ಪಡಿತರ ವಿತರಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಸಮಸ್ಯೆ ಸರಿಪಡಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಪತ್ರ ಬರೆಯಲಾಗಿದೆ.
-ಕಾಪು ದಿವಾಕರ ಶೆಟ್ಟಿ, ಅಧ್ಯಕ್ಷರು, ಕಾಪು ಸಿ.ಎ. ಬ್ಯಾಂಕ್‌

ನಿರಾಶೆಯಾಗಿದೆ
ನಾವು ಕಳೆದ ಮೂರು ದಿನಗಳಿಂದ ಪಡಿತರಕ್ಕಾಗಿ ಅಂಗಡಿಗೆ ಬಂದು ವಾಪಾಸ್ಸು ಹೋಗುತ್ತಿದ್ದೇವೆ. ಪಡಿತರಕ್ಕಿಂತಲೂ ನಮಗೆ ರಿಕ್ಷಾ ಬಾಡಿಗೆ ದುಬಾರಿಯಾಗುತ್ತಿದೆ. ಇಲ್ಲಿ ಕೂಲಿ ಕೆಲಸಕ್ಕೆ ಹೋಗುವವರು ಅಧಿಕವಾಗಿದ್ದು, ಅವರೂ ಪ್ರತೀ ದಿನ ಮಧ್ಯಾಹ್ನದವರೆಗೆ ಕ್ಯೂ ನಿಂತು ವಾಪಾಸು ಹೋಗುವಂತಾಗಿದೆ.
-ಅಬ್ದುಲ್‌ ಬಶೀರ್‌, ಮಲ್ಲಾರು

  -ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next