Advertisement

ವಾಯವ್ಯ ಸಾರಿಗೆಯಲ್ಲಿ ಬಯೋಮೆಟ್ರಿಕ್‌ ಪಂಕ್ಚರ್‌!

12:29 PM Oct 06, 2017 | Team Udayavani |

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಶಿಸ್ತು ಮೂಡಿಸಲು ಬಯೋಟ್ರಿಕ್‌ ಅಳವಡಿಸಬೇಕೆಂಬ ಯೋಜನೆಗೆ ಇನ್ನೂ ಗ್ರಹಣ ಬಿಟ್ಟಿಲ್ಲ. ಎರಡು ವರ್ಷಗಳ ಹಿಂದೆ ಯೋಜನೆ ಸಿದ್ಧವಾಗಿದ್ದರೂ ಕೆಲವು ಹಿರಿಯ ಅಧಿಕಾರಿಗಳ ಸ್ವಹಿತಾಸಕ್ತಿಯಿಂದ ಯೋಜನೆ ನನೆಗುದಿಗೆ ಬಿದ್ದಿದೆ. 

Advertisement

ಸಿಬ್ಬಂದಿಯಲ್ಲಿ ಸಮಯಪ್ರಜ್ಞೆ ಹಾಗೂ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ಖಾಸಗಿ ಹಾಗೂ ಸರಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್‌ ಕಡ್ಡಾಯವಾಗಿದೆ. ಇತ್ತೀಚೆಗೆ ಸರಕಾರಿ ಶಾಲೆಗಳಲ್ಲೂ ಕೂಡ ಬಯೋಮೆಟ್ರಿಕ್‌ ಅಳವಡಿಸುವ ಕಾರ್ಯವನ್ನು ಶಿಕ್ಷಣ ಇಲಾಖೆ ಕೂಡ ಕೈಗೆತ್ತಿಕೊಂಡಿದೆ.

ವಿಪರ್ಯಾಸ ಅಂದರೆ ಸರ್ಕಾರದ ದೊಡ್ಡ ಅಂಗ ಸಂಸ್ಥೆಯಾಗಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಇನ್ನೂ ಬಯೋಮೆಟ್ರಿಕ್‌ ಅಳವಡಿಕೆಯಾಗಿಲ್ಲ. ಘಟಕ, ವಿಭಾಗೀಯ ಕಚೇರಿ, ಪ್ರಾದೇಶಿಕ ಕಾರ್ಯಾಗಾರ, ವಿಭಾಗೀಯ ಕಾರ್ಯಾಗಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಆಡಳಿತ ಸಿಬ್ಬಂದಿಗೆ ಆಧಾರ್‌ ಕಾರ್ಡ್‌ ಸಂಖ್ಯೆ ಆಧಾರಿತ ಬಯೋಮೆಟ್ರಿಕ್‌ ವ್ಯವಸ್ಥೆ ಅಳವಡಿಸಬೇಕೆಂಬ ಯೋಜನೆ ಸಿದ್ಧವಾಗಿದ್ದರೂ ಕೆಲವರ ಹಿತಾಸಕ್ತಿಯಿಂದ ಅನುಷ್ಠಾನಗೊಳ್ಳುತ್ತಿಲ್ಲ. 

ಕೆಲವು ಸಿಬ್ಬಂದಿ ಕಚೇರಿಗೆ ಸಮಯಕ್ಕೆ ಸರಿಯಾಗಿ ಬಾರದಿರುವುದು, ಸಮಯಕ್ಕಿಂತ ಮುಂಚೆ ಕಚೇರಿಯಿಂದ ತೆರಳುವುದು ಅಲ್ಲದೇ ಸ್ವಂತ ಕೆಲಸಗಳಿಗೆ ಓಡಾಡುವುದು ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಕಚೇರಿ ಸೇರಿದಂತೆ ಘಟಕಗಳಿಗೂ ಬಯೋಮೆಟ್ರಿಕ್‌ ಅಳವಡಿಸುವ ಯೋಜನೆ ಸಿದ್ಧಪಡಿಸಲಾಗಿತ್ತು.

ಇದಕ್ಕೆ ತಗಲಬಹುದಾದ ವೆಚ್ಚ, ಸಾಮಾಗ್ರಿಗಳ ಖರೀದಿ, ಇದಕ್ಕೆ ಪೂರಕವಾಗಿ ಬೇಕಾದ ಇಂಟರ್‌ನೆಟ್‌ ಸೇರಿದಂತೆ ಎಲ್ಲ ವ್ಯವಸ್ಥೆಗಳ ಯೋಜನೆ ಸಿದ್ಧಪಡಿಸಲಾಗಿತ್ತು. ಪ್ರಾಯೋಗಿಕವಾಗಿ ಕೇಂದ್ರ ಕಚೇರಿಯ ಎಲ್ಲ ಶಾಖೆಗಳಿಗೂ ಇದನ್ನು ಕಡ್ಡಾಯಗೊಳಿಸಿ ಆಧಾರ್‌ ನಂಬರ್‌ ಆಧಾರಿತ ಬಯೋಮೆಟ್ರಿಕ್‌ ವ್ಯವಸ್ಥೆ ಕೇಂದ್ರ ಕಚೇರಿಯಲ್ಲಿ ಜಾರಿಗೆ ತರಲಾಗಿದೆ.

Advertisement

ಹಿತಾಸಕ್ತಿಗೆ ಬಲಿ!: ಕೇಂದ್ರ ಕಚೇರಿಯಲ್ಲಿ ಪ್ರಾಯೋಗಿಕವಾಗಿ ಅಳವಡಿಸಿದ ನಂತರ ಸಾಧಕ-ಬಾಧಕಗಳನ್ನು ನೋಡಿಕೊಂಡು ವಿಭಾಗೀಯ ಕಚೇರಿ, ನಂತರ ಘಟಕಗಳಲ್ಲಿ ಬಯೋಮೆಟ್ರಿಕ್‌ ಅಳವಡಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ಈ ಯೋಜನೆಗೆ ಕೆಲವು ಹಿರಿಯ ಅಧಿಕಾರಿಗಳು ಅಪಸ್ವರ ಎತ್ತಿದ ಹಿನ್ನೆಲೆಯಲ್ಲಿ ಯೋಜನೆ ನನೆಗುದಿಗೆ ಬಿದ್ದಿದೆ.

ಕಚೇರಿ ಕೆಲಸವೊಂದನ್ನು ಬಿಟ್ಟು ಇತರೆ ಕೆಲಸದಲ್ಲೇ ಹೆಚ್ಚು ತೊಡಗಿರುವ ಸಿಬ್ಬಂದಿ ಇದನ್ನು ಜಾರಿಗೊಳಿಸದಂತೆ ತಡೆಯುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ. ಕೇಂದ್ರ ಕಚೇರಿಯಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಕೇವಲ ನೆಪ ಮಾತ್ರಕ್ಕೆ ಎಂಬಂತಾಗಿದ್ದು, ಹಾಜರಾತಿಗೆ ಮಾತ್ರ ಕಾಟಾಚಾರಕ್ಕೆ ಈ ವ್ಯವಸ್ಥೆ ಚಾಲ್ತಿಯಲ್ಲಿದೆ. ಇದನ್ನು ವೇತನಕ್ಕೆ ಅಳವಡಿಸಿದರೆ ಮಾತ್ರ ಈ ವ್ಯವಸ್ಥೆ ಬಗ್ಗೆ ಅಧಿಕಾರಿಗಳಲ್ಲಿ ಹಾಗೂ ಸಿಬ್ಬಂದಿಯಲ್ಲಿ ಗಂಭೀರತೆ ಕಾಣಬಹುದಾಗಿದೆ ಎನ್ನುವುದು ಸಂಸ್ಥೆಯ ಹಿರಿಯ ಅಧಿಕಾರಿಗಳ ಅಭಿಪ್ರಾಯ. 

ತಾಂತ್ರಿಕ ಸಮಸ್ಯೆ ನೆಪ: ಕೆಲವು ಅಧಿಕಾರಿಗಳು ಘಟಕಗಳ ಉಸ್ತುವಾರಿ ಕಾರ್ಯವನ್ನು ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಸಂಚಾರ ಶಾಖೆ ಕೆಲವು ಸಿಬ್ಬಂದಿಗೆ ಫೀಲ್ಡ್‌ವರ್ಕ್‌ಗಳಿವೆ. ಇಂತಹ ತಾಂತ್ರಿಕ ತೊಂದರೆಗಳನ್ನು ಮುಂದಿಕೊಟ್ಟುಕೊಂಡು ಯೋಜನೆ ಅನುಷ್ಠಾನವಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಕರ್ತವ್ಯದ ಮೇಲೆ ಯಾವುದೇ ಘಟಕ ಅಥವಾ ವಿಭಾಗೀಯ ಕಚೇರಿಗಳಿಗೆ ಭೇಟಿ ನೀಡಿದರೂ ಅಲ್ಲಿಂದಲೇ ಅವರು ಬಯೋಮೆಟ್ರಿಕ್‌ ಮೂಲಕ ಹಾಜರಿ ಹಾಕಬಹುದಾಗಿದೆ. 

* ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next