Advertisement
ಇತ್ತೀಚೆಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅ ಧಿಕಾರಿಗಳ ಸಭೆ ನಡೆಸಿ ಖರೀದಿ ಕೇಂದ್ರ ತೆರೆಯುವ ಸಂಬಂಧ ಟಾಸ್ಕ್ಫೋರ್ಸ್ ಸಮಿತಿ ರಚನೆ ಮಾಡಿದ್ದರು. ಅದರಂತೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಯನ್ನು ಖರೀದಿ ಏಜೆನ್ಸಿಯಾಗಿ ನೇಮಿಸಲಾಗಿದ್ದು, ಆಯಾ ತಾಲೂಕುಗಳ ತಹಶೀಲ್ದಾರ್‌ಗಳಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ, ಈ ಬಾರಿ ಬಯೋಮೆಟ್ರಿಕ್ ಮೂಲಕ ಭತ್ತ, ರಾಗಿ ಖರೀದಿಗೆ ರೈತರಿಂದ ನೋಂದಣಿ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಆದರೆ, ಇನ್ನೂ ನೋಂದಣಿಗೆ ಬಯೋಮೆಟ್ರಿಕ್ ಯಂತ್ರಗಳು ಬಾರದಿರುವುದರಿಂದ ನೋಂದಣಿ ಹಾಗೂ ಖರೀದಿ ಆರಂಭವೇ ಆಗಿಲ್ಲ.
Related Articles
Advertisement
ದರ ನಿಗದಿ: ಭತ್ತ ಹಾಗೂ ರಾಗಿಗೆ ಈಗಾಗಲೇ ದರ ನಿಗದಿಪಡಿಸಲಾಗಿದೆ. ಸಾಮಾನ್ಯ ಭತ್ತ ಕ್ವಿಂಟಾಲ್‌ಗೆ 2,183 ರೂ., ಗ್ರೇಡ್ ಎ ಭತ್ತಕ್ಕೆ 2203 ರೂ. ನಿಗದಿಪಡಿಸಲಾಗಿದೆ. ರಾಗಿಗೆ ಕ್ವಿಂಟಾಲ್‌ಗೆ 3,846 ರೂ. ದರ ನಿಗದಿಪಡಿಸಲಾಗಿದೆ.
ದಲ್ಲಾಳಿಗಳಿಂದ ಭತ್ತ ಖರೀದಿ: ಕೃತಕ ಅಭಾವ ಸೃಷ್ಟಿ ಸಾಧ್ಯತೆ: ಈಗಾಗಲೇ ಭತ್ತ ಕಟಾವು ವೇಗವಾಗಿ ನಡೆಯುತ್ತಿದೆ. ಆದರೆ, ದಲ್ಲಾಳಿಗಳು ನೇರವಾಗಿ ರೈತರಿಂದ ಖರೀದಿಸುತ್ತಿದ್ದಾರೆ. ಸರ್ಕಾರದ ಬೆಂಬಲ ಬೆಲೆಗಿಂತ ಹೆಚ್ಚು ದರ ನೀಡಿ ಗದ್ದೆಗಳಲ್ಲಿಯೇ ಒಕ್ಕಣೆಯಾಗುತ್ತಿದ್ದಂತೆ ಖರೀದಿ ಮಾಡುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಅಕ್ಕಿಗೆ ಕೃತಕ ಅಭಾವ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿದೆ. ಸರ್ಕಾರವು ನಿಗದಿತ ಅವಧಿಯಲ್ಲಿ ಖರೀದಿ ಕೇಂದ್ರ ತೆರೆಯದೇ ನಿರ್ಲಕ್ಷ್ಯ ವಹಿಸಿರುವುದರಿಂದ ದಲ್ಲಾಳಿಗಳು ಭತ್ತ ಖರೀದಿಗೆ ಮುಗಿಬಿದ್ದಿದ್ದಾರೆ. ಅಲ್ಲದೇ, ಸರ್ಕಾರದ ಬೆಂಬಲ ಬೆಲೆಗಿಂತ ಹೆಚ್ಚು ದರ ನೀಡಿ ಭತ್ತ ಖರೀದಿಸುತ್ತಿದ್ದಾರೆ. ಸರ್ಕಾರ ಸಾಮಾನ್ಯ ಭತ್ತಕ್ಕೆ 2,183 ರೂ. ನಿಗದಿ ಮಾಡಿದ್ದರೆ, ದಲ್ಲಾಳಿಗಳು 2,200 ರಿಂದ 2300 ರೂ. ನೀಡುತ್ತಿದ್ದಾರೆ. ಗ್ರೇಡ್ ಎ ಭತ್ತಕ್ಕೆ ಸರ್ಕಾರ 2,203 ರೂ. ನೀಡುತ್ತಿದ್ದರೆ ದಲ್ಲಾಳಿಗಳು 2,800ರಿಂದ 3 ಸಾವಿರ ರೂ.ವರೆಗೂ ನೀಡುತ್ತಿದ್ದಾರೆ. ಇದರಿಂದ ಈ ಬಾರಿ ನಿರೀಕ್ಷೆಗಿಂತ ಕಡಿಮೆ ರೈತರಿಂದ ನೋಂದಣಿ ಆಗುವ ಸಾಧ್ಯತೆ ಇದೆ.
ಮೂಲ ಸೌಕರ್ಯ ತಹಶೀಲ್ದಾರ್‌ಗಳ ಹೊಣೆ : ಭತ್ತ, ರಾಗಿ ನೋಂದಣಿ ಹಾಗೂ ಖರೀದಿ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಲು ತಹಶೀಲ್ದಾರ್‌ಗಳಿಗೆ ಜವಾಬ್ದಾರಿ ನೀಡಲಾಗಿದೆ. ಆಯಾ ವ್ಯಾಪ್ತಿಯ ತಹಶೀಲ್ದಾರ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ಶಾಖಾ ವ್ಯವಸ್ಥಾಪಕರು ಸಮನ್ವಯತೆಯಿಂದ ರೈತರಿಗೆ ಪ್ರಚಾರ, ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನೋಂದಣಿ ಹಾಗೂ ಖರೀದಿ ಕೇಂದ್ರಗಳ ಗುರುತಿಸಿ ಸಿದ್ಧತೆ ನಡೆಸಲಾಗಿದೆ. ಬಯೋಮೆಟ್ರಿಕ್ ಮೂಲಕ ರೈತರ ನೋಂದಣಿ ನಡೆಯಲಿದೆ. ಇನ್ನೂ ಬಯೋಮೆಟ್ರಿಕ್ ಪರಿಕರಗಳು ಬಂದಿಲ್ಲ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯಿಂದ ಬಂದ ನಂತರ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ● ಕೃಷ್ಣಕುಮಾರ್, ಜಂಟಿ ನಿರ್ದೇಶಕರು,, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಮಂಡ್ಯ
– ಎಚ್.ಶಿವರಾಜು