Advertisement
ಮಂಗಳೂರಿನ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಬಯೋಮೆಟ್ರಿಕ್ ಮತ್ತು ಆಧಾರ್ ಮಾಹಿತಿ ನೀಡಿದ ಕೆಲವು ದಿನಗಳ ಅನಂತರ ಖಾತೆಯಿಂದ ಹಣವನ್ನು ವರ್ಗಾಯಿಸಿಕೊಂಡು ವಂಚಿಸಲಾಗಿದೆ ಎಂದು 15 ಮಂದಿ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಈ ರೀತಿ ವಂಚನೆಗೊಳಗಾದವರಲ್ಲಿ ಓರ್ವ ಪೊಲೀಸ್ ಅಧಿಕಾರಿಯೂ ಸೇರಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಈಗಾಗಲೇ ಪೊಲೀಸರು ಪರಿಶೀಲನೆ ನಡೆಸಿದ್ದು ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಅಲ್ಲದೆ ರಾಜ್ಯದ ಬೇರೆ ಕಡೆಗಳಲ್ಲಿಯೂ ಇದೇ ರೀತಿ ಬಯೋಮೆಟ್ರಿಕ್, ಆಧಾರ್ ಮಾಹಿತಿ ಪಡೆದು ವಂಚಿಸಿರುವ ಘಟನೆಗಳು ವರದಿಯಾಗಿದ್ದವು. ಹಾಗಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸೈಟ್ ಹ್ಯಾಕ್ ಆಗಿರುವ ಬಗ್ಗೆ ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದರು. ಇದೀಗ ಬಿಹಾರದಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸೊಸೈಟಿಯೊಂದರಲ್ಲಿ ಸಾಲ ಪಡೆಯುವ ಸಂದರ್ಭ ಬಯೋಮೆಟ್ರಿಕ್ ಮತ್ತು ಆಧಾರ್ ಮಾಹಿತಿ ನೀಡಿದ ಕೆಲವು ದಿನಗಳ ಅನಂತರ ಖಾತೆಯಿಂದ ಹಣವನ್ನು ವರ್ಗಾಯಿಸಿ ವಂಚಿಸಲಾಗಿದೆ ಎಂದು ಓರ್ವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಆಧಾರ್ ಬಯೋಮೆಟ್ರಿಕ್ ಲಾಕ್/ಅನ್‌ಲಾಕ್ ಹೇಗೆ?
ಸಬ್‌ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ಹಲವಾರು ಕಚೇರಿಗಳಲ್ಲಿ ಬಯೋಮೆಟ್ರಿಕ್, ಆಧಾರ್ ಮಾಹಿತಿ ನೀಡಬೇಕಾಗುತ್ತದೆ. ಆದರೆ ಅನಂತರ ಅದನ್ನು ಲಾಕ್ ಮಾಡದಿದ್ದರೆ ಮಾಹಿತಿ ಕದಿಯುವ ಅಪಾಯವಿರುತ್ತದೆ. ಆ ಮಾಹಿತಿಯ ಮೂಲಕ ಒಟಿಪಿ, ಪಾಸ್‌ವರ್ಡ್ ಇಲ್ಲದೆಯೂ ಖಾತೆಯಿಂದ ಹಣ ಕದಿಯಲು ಸಾಧ್ಯವಿರುತ್ತದೆ. ಹಾಗಾಗಿ ಆಧಾರ್ ಬಯೋಮೆಟ್ರಿಲ್ ಲಾಕ್ ಮಾಡಬೇಕು. ಅಗತ್ಯವಿದ್ದಾಗ ಮಾತ್ರ ಅನ್‌ಲಾಕ್ ಮಾಡಬೇಕು. https://myaadhar.uidai.gov.in ವೆಬ್‌ಸೈಟ್‌ಗೆ ಹೋಗಿ ಒಟಿಪಿ ಮೂಲಕ ಲಾಗಿನ್ ಆದ ಮೇಲೆ ಬಯೋಮೆಟ್ರಿಕ್ ಲಾಕ್/ಅನ್‌ಲಾಕ್ ಮಾಡಬಹುದು. ತಾತ್ಕಾಲಿಕವಾಗಿ ಅನ್‌ಲಾಕ್ ಮಾಡಿದರೆ 10 ನಿಮಿಷದ ಅನಂತರ ಅದರಷ್ಟಕ್ಕೆ ಲಾಕ್ ಆಗುತ್ತದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಯೂ ಟ್ಯೂಬ್ https://youtu.be/Jtq6nTtpu5A?si=w0LQCqDtI0d4sISP ನಿಂದಲೂ ಮಾಹಿತಿ ಪಡೆಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.