Advertisement

ಭೀಮಾ ತೀರದ ರಕ್ತ ಚರಿತ್ರೆ: ನ್ಯಾಯಾಲಯ ಎದುರೇ ಮತ್ತೆ ಗುಂಡಿನ ಸದ್ದು

07:47 AM Aug 09, 2017 | |

ವಿಜಯಪುರ: ರಾಜ್ಯವನ್ನೇ ಬೆಚ್ಚಿಬೀಳಿಸಿದ ಅಪರಾಧ ಪ್ರಕರಣ ಎಂದೇ ಪರಿಗಣಿಸಲಾದ ಭೀಮಾ ತೀರದ ರಕ್ತಚರಿತ್ರೆ ಮತ್ತೆ ನೆನಪಾಗುವ ಘಟನೆ ವಿಜಯಪುರದ ಕೋರ್ಟ್‌ ಆವರಣದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಹಾಡಹಗಲೇ ಗುಂಡಿನ ದಾಳಿ ನಡೆದು ನೆತ್ತರು ಹರಿದಿದ್ದು, ವಿಜಯಪುರದಲ್ಲಿ ಅಕ್ಷರಶಃ ಆತಂಕದ ವಾತಾವರಣ ನಿರ್ಮಾಣವಾಗಿದೆ.

Advertisement

ನಾಲ್ಕು ವರ್ಷಗಳ ಹಿಂದಿನ ಚಂದಪ್ಪ ಹರಿಜನ ತಮ್ಮ ಬಸಪ್ಪನ ಹತ್ಯೆ ಪ್ರಕರಣದ ವಿಚಾರಣೆಗೆ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದ್ದ ಭಾಗಪ್ಪ ಹರಿಜನ ಮೇಲೆ ಆಗಂತುಕನೊಬ್ಬ 5 ಸುತ್ತು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡಿ ರುವ ಭಾಗಪ್ಪನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಭಾಗಪ್ಪ ಯಶಸ್ವಿ ಚತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

2013ರಲ್ಲಿ ಭೀಮಾ ತೀರದ ರಕ್ತಚರಿತ್ರೆಯ ಪ್ರಮುಖನಾಗಿದ್ದ ಚಂದಪ್ಪ ಹರಿಜನ ಸಹೋದರ ಬಸಪ್ಪ ಹರಿಜನ ಹತ್ಯೆ ಪ್ರಕರಣ ಸಂಬಂಧ 2ನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸೋಮವಾರದಿಂದ ಸಾಕ್ಷಿಗಳ ವಿಚಾರಣೆ ಆರಂಭಗೊಂಡಿದೆ. ಪ್ರಕರಣದಲ್ಲಿ ಒಂದನೇ ಆರೋಪಿಯಾಗಿರುವ ಭಾಗಪ್ಪ ಮಂಗಳವಾರ ವಿಚಾರಣೆಗೆ ಕೋರ್ಟ್‌ಗೆ ಆಗಮಿಸಿದ್ದಾಗ ಗುಂಡಿನ ದಾಳಿ ನಡೆದಿದೆ.

ಕೃತಕ ಉಸಿರಾಟದಲ್ಲಿ ಭಾಗಪ್ಪ: ಗಂಭೀರ ಸ್ಥಿತಿಯಲ್ಲಿದ್ದ ಭಾಗಪ್ಪನನ್ನು ಕೋರ್ಟ್‌ ಆವರಣದಲ್ಲಿದ್ದ ಜನರು ಪೊಲೀಸರ ನೆರವಿನಿಂದ ಬಿಎಲ್‌ಡಿಇ ವೈದ್ಯಕೀಯ ಕಾಲೇಜಿನ ಬಿ.ಎಂ. ಪಾಟೀಲ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದರು.  ಪ್ರಜ್ಞೆ ತಪ್ಪಿದ್ದ ಭಾಗಪ್ಪಗೆ ತೀವ್ರನಿಗಾ ಘಟಕದಲ್ಲಿ ಕೃತಕ ಉಸಿರಾಟದ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಕಿಬ್ಬೊಟ್ಟೆಗೆ ಹೊಕ್ಕು, ಕರುಳಿಗೆ ಹಾನಿ ಮಾಡಿರುವ 3 ಗುಂಡುಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ.

ಪಪ್ಪುಸದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಗುಂಡನ್ನೂ ಹೊರತೆಗೆದರೆ ಪ್ರಾಣಾಪಾಯ ಸಾಧ್ಯತೆ ಇರುವುದರಿಂದ ದೇಹದಲ್ಲೇ ಅದನ್ನು ಸುರಕ್ಷಿತವಾಗಿ ಬಿಡುವ ಕುರಿತು ವೈದ್ಯರು ಮೊದಲು ಯೋಚಿಸಿದ್ದರು. ಆದರೆ ಚಿಕಿತ್ಸೆಯಿಂದ ಅಪಾಯವಿಲ್ಲ ಎನ್ನುವುದನ್ನು ಖಾತ್ರಿ ಪಡಿಸಿಕೊಂಡ ಬಳಿಕ ಪಪ್ಪುಸದಲ್ಲಿನ ಗುಂಡನ್ನೂ ಹೊರ ತೆಗೆಯಲಾಗಿದೆ. ಸದ್ಯ ಭಾಗಪ್ಪ ವೈದ್ಯಕೀಯ ಚಿಕಿತ್ಸೆಗೆ ಸೂಕ್ತ ಸ್ಪಂದನೆ ನೀಡುತ್ತಿರುವ ಕಾರಣ ಆತನ ಆರೋಗ್ಯ ಸ್ಥಿರವಾಗುವ ವಿಶ್ವಾಸದಲ್ಲಿ ವೈದ್ಯರಿದ್ದಾರೆ. ಘಟನೆ ಸುದ್ದಿ ತಿಳಿಯುತ್ತಲೇ ಕೋರ್ಟ್‌ ಆವರಣಕ್ಕೆ ಆಗಮಿಸಿದ ಎಸ್ಪಿ ಕುಲದೀಪ ಜೈನ್‌ ಘಟನಾ ಸ್ಥಳದ ಪರಿಶೀಲನೆ ನಡೆಸಿದರು. ಪರಾರಿಯಾಗಿರುವ ಆರೋಪಿ ಪತ್ತೆಗೆ ಗೋಲಗುಮ್ಮಟ ಸಿಪಿಐ ಸುನೀಲ ಕಾಂಬಳೆ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಘಟನೆ ಕುರಿತು ಜಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪಲ್ಸರ್‌ ಬೈಕ್‌ನಲ್ಲಿ ಬಂದ ದಾಳಿಕೋರರು
ಬೆಳಗ್ಗೆ 10:50ರಿಂದ 11ರ ವೇಳೆ ಕೋರ್ಟ್‌ ಆವರಣಕ್ಕೆ ಪಲ್ಸರ್‌ ಬೈಕ್‌ನಲ್ಲಿ ಬಂದು ಪಾರ್ಕಿಂಗ್‌ ಸ್ಥಳದಲ್ಲಿ ಕಾದಿದ್ದ ಆಗಂತುಕ, ಭಾಗಪ್ಪ ಬರುತ್ತಿದ್ದಂತೆಯೇ ಆತನನ್ನು ನೆಲಕ್ಕೆ ಕೆಡವಿ, ತೀರಾ ಹತ್ತಿರದಿಂದ 5 ಸುತ್ತು ಗುಂಡು ಹಾರಿಸಿದ್ದಾನೆ. ಬಳಿಕ ಕೋರ್ಟ್‌ ಕಾಂಪೌಂಡ್‌ ಗೋಡೆ ಹಾರಿ ಪರಾರಿಯಾಗಿದ್ದಾನೆ. ಐದು ಗುಂಡುಗಳಲ್ಲಿ ಒಂದು ಹೊಟ್ಟೆ ಸೀಳಿಕೊಂಡು ಬೆನ್ನಿನ ಮೂಲಕ ಹೊರ ಹೋಗಿದ್ದರೆ, ಮೂರು ಕಿಬ್ಬೊಟ್ಟೆಯಲ್ಲಿ ಸಿಲುಕಿಕೊಂಡಿತ್ತು. ಅದನ್ನೆಲ್ಲ ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆದ ವೈದ್ಯರ ತಂಡ, ಸಂಜೆ ವೇಳೆ ಇನ್ನೊಂದು ಶಸ್ತ್ರ ಚಿಕಿತ್ಸೆ ನಡೆಸಿ ಶ್ವಾಸಕೋಶದಲ್ಲಿ ಸಿಕ್ಕಿಕೊಂಡಿದ್ದ ಗುಂಡನ್ನೂ ಹೊರ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಚೇತರಿ ಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವಿಚಾರಣೆಗೆ ಆಗಮಿಸಿದ್ದ ವೇಳೆ ಭಾಗಪ್ಪನ ಮೇಲೆ ಗುಂಡಿನ ದಾಳಿ ನಡೆದಿದೆ. ಗುಂಡು ಹಾರಿಸಿದ ವ್ಯಕ್ತಿ ಪರಾರಿಯಾಗಿದ್ದು, ಆತ ಯಾರು ಎಂಬ ಕುರಿತು ನಿಖರವಾದ ಮಾಹಿತಿ ಇಲ್ಲ. ತನಿಖೆ ನಡೆಯುತ್ತಿದ್ದು, ಕೂಡಲೇ ಆರೋಪಿಯನ್ನು ಬಂಧಿಸುತ್ತೇವೆ. 
ಕುಲದೀಪ ಜೈನ್‌, ಎಸ್ಪಿ, ವಿಜಯಪುರ

ಭಾಗಪ್ಪ ಹರಿಜನ ದೇಹದಲ್ಲಿ ಸೇರಿಕೊಂಡಿದ್ದ 4 ಗುಂಡುಗಳಲ್ಲಿ 3 ಗುಂಡು ಹೊರ ತೆಗೆದಿದ್ದು, ತೀವ್ರ ನಿಗಾ ಘಟಕದಲ್ಲಿ ಕೃತಕ ಉಸಿರಾಟದ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಭಾಗಪ್ಪ ಚೇತರಿಸಿಕೊಳ್ಳುತ್ತಿದ್ದಾರೆ.
ಡಾ| ವಿಜಯಕುಮಾರ, ಅಧೀಕ್ಷಕರು, ಬಿಎಲ್‌ಡಿಇ ಬಿ.ಎಂ.ಪಾಟೀಲ ವೈದ್ಯಕೀಯ ಆಸ್ಪತ್ರೆ, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next