ಮೈಸೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಪೆಟ್ರೋಲಿಯಂ ಬಳಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಜೈವಿಕ ಇಂಧನ ಉತ್ಪಾದನೆ ಮತ್ತು ಬಳಕೆಗೆ ಮುಂದಾಗಬೇಕಿದೆ ಎಂದು ಇಂಡಿಯಾ ಆಯಿಲ್ ಕಾರ್ಪೊರೇಷನ್‌ನ ಮೈಸೂರು ಭಾಗದ ಮುಖ್ಯ ವ್ಯವಸ್ಥಾಪಕ ಸಂಜಯ್‌ಕುಮಾರ್ ಭಾರತಿ ಹೇಳಿದರು.
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಿಂದ ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಭಾರತ ಪೆಟ್ರೋಲಿಯಂ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಪರಿಣಾಮ ಶೇ.82 ಪೆಟ್ರೋಲಿಯಂನ್ನು ಆಮದು ಮಾಡಿಕೊಳ್ಳುತ್ತಿದ್ದು, ಶೇ.18 ಪೆಟ್ರೋಲಿಯಂ ಉತ್ಪಾದಿಸಲಾಗುತ್ತಿದೆ ಎಂದರು.
ಇದರಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಹಿನ್ನೆಲೆ ಇದನ್ನು ತಗ್ಗಿಸುವ ಸಲುವಾಗಿ ಜೈವಿಕ ಇಂಧನ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತಿದೆ. ಆ ಮೂಲಕ ಇಂಧನ ಆಮದು ಪ್ರಮಾಣ ಇಳಿಕೆ ಮಾಡಬಹುದಾಗಿದ್ದು, ಜೈವಿಕ ಇಂಧನದಂತೆಯೇ ಇಥೆನಾಲ್ ಇಂಧನ ಪರಿಸರ ಸ್ನೇಹಿಯಾಗಿದ್ದು, ಮುಂದಿನ ದಿನಗಳಲ್ಲಿ ಇದರ ಉತ್ಪಾದನೆಯೂ ಹೆಚ್ಚಾಗಲಿದೆ ಎಂದು ತಿಳಿಸಿದರು.
ಅಲ್ಲದೆ ತ್ಯಾಜ್ಯಗಳನ್ನು ಬಳಸಿ ಜೈವಿಕ ಇಂಧನ ಉತ್ಪಾದಿಸಬಹುದಾಗಿದ್ದು, ಇದರ ಬಳಕೆಯಿಂದ ಪರಿಸರ ಮಾಲಿನ್ಯವನ್ನು ಸಹ ತಗ್ಗಿಸಬಹುದಾಗಿದೆ. ಜತೆಗೆ ಪೆಟ್ರೋಲ್‌ಗೆ ಇಥೆನಾಲ್ ಅನಿಲವನ್ನು ಮಿಶ್ರಣ ಮಾಡುವುದರಿಂದ ಮಾಲಿನ್ಯ ಮತ್ತು ಬಳಿಕೆ ಪ್ರಮಾಣ ತಗ್ಗಿಸುತ್ತದೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಪೆಟ್ರೋಲ್‌ಗೆ ಶೇ.10 ಇಥೆನಾಲ್ ಮಿಶ್ರಣ ಮಾಡಲಾಗುತ್ತಿದ್ದು, ಕರ್ನಾಟಕದಲ್ಲಿ ಶೇ.5 ಮಿಶ್ರಣ ನಡೆಯುತ್ತದೆ.
ಇದರ ಪರಿಣಾಮ ಮುಂದಿನ ಐದು ವರ್ಷದಲ್ಲಿ ದೇಶದಲ್ಲಿ ಇಥೆನಾಲ್ ಉತ್ಪಾದನೆ ಹೆಚ್ಚಾಗಲಿದೆ ಎಂದು ಹೇಳಿದರು. ಇಂಡಿಯನ್ ಆಯಿಲ್ ಕಾರ್ಪೋರೇಷನ್‌ನ ವಿಭಾಗೀಯ ವ್ಯವಸ್ಥಾಪಕ ಆರ್. ರಾಧಾಕೃಷ್ಣನ್, ಐಒಸಿ ವ್ಯಸ್ಥಾಪಕ ನಬೀನ್ ಶಾ ಕುಮಾರ್, ಎನ್‌ವೈಸಿಎಸ್‌ನ ರಾಜ್ಯದ ಉಸ್ತುವಾರಿ ಕೆ.ರಮೇಶ್, ಜಿಲ್ಲಾ ಸಂಯೋಜಕ ಕೆ.ಸುಪ್ರಿತ್, ಸುನೀಲ್ ಕುಮಾರ್ ಇನ್ನಿತರರು ಹಾಜರಿದ್ದರು.