Advertisement

2 ತಿಂಗಳಲ್ಲಿ ಜೀವವೈವಿಧ್ಯ ಸಂರಕ್ಷಣಾ ವರದಿ

01:13 AM Feb 21, 2020 | mahesh |

ಕುಂದಾಪುರ: ಜೀವವೈವಿಧ್ಯ ಸಂರಕ್ಷಣೆ, ಅಭಿವೃದ್ಧಿ ಕುರಿತು ಪಂಚಾಯತ್‌ ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದ್ದು 2 ತಿಂಗಳ ಒಳಗೆ ಸಮಗ್ರ ವರದಿ ಹಾಗೂ ಜೀವವೈವಿಧ್ಯ ಸಂರಕ್ಷಣೆಗೆ ಶಿಫಾರಸನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು. ಅವರು ಗುರುವಾರ ಇಲ್ಲಿನ ಉಪ ಅರಣ್ಯ ಉಪಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Advertisement

ಚುರುಕು ಮುಟ್ಟಿಸುವ ಯತ್ನ
ಹಸಿರು ಪೀಠದ ಸೂಚನೆಯಂತೆ ವರದಿ ನೀಡುವ ಗಡುವು ಸಮೀಪಿಸಿದೆ. ರಾಜ್ಯದ 6,101 ಪಂಚಾಯತ್‌ಗಳ ಪೈಕಿ 2 ಸಾವಿರ ಪಂಚಾಯತ್‌ಗಳಲ್ಲಿ ಜೀವವೈವಿಧ್ಯ ದಾಖಲಾತಿಯಾಗಿದೆ. 3 ಸಾವಿರ ಪಂಚಾಯತ್‌ಗಳಲ್ಲಿ ಪ್ರಗತಿ ಹಂತದಲ್ಲಿದೆ. ಇನ್ನೂ 1 ಸಾವಿರ ಪಂಚಾ ಯತ್‌ಗಳಲ್ಲಿ ಶೈಶವಾವಸ್ಥೆಯಲ್ಲಿದೆ. ಆದ್ದರಿಂದ ಚುರುಕು ಮುಟ್ಟಿಸುವ ಕೆಲಸ ನಡೆಯುತ್ತಿದೆ. ಕಾಯ್ದೆ ಜಾರಿಯಾಗಿ ಇಷ್ಟು ವರ್ಷಗಳೇ ಆಗಿದ್ದರೂ ಪ್ರಗತಿ ಕಂಡಿಲ್ಲ ಎಂದರು.

ಹಸಿರು ಕವಚ ಯೋಜನೆಗೆ ಮನವಿ
ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಕಾರದಲ್ಲಿ ಜೀವವೈವಿಧ್ಯ ಮಂಡಳಿ, ಪರಿಸರ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಹಭಾಗಿತ್ವ‌ದಲ್ಲಿ ಕರಾವಳಿ ರಕ್ಷಣಾ ವಲಯ (ಸಿಆರ್‌ಝಡ್‌) ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಿದೆ. ಮಲೆನಾಡ ಭಾಗದಲ್ಲಿ ಹರಿಯುವ 22 ಪ್ರಮುಖ ಹಾಗೂ 180 ಉಪ ನದಿಗಳ ಮೂಲ ಸಂರಕ್ಷಣೆಯ ಯೋಜನೆ ಘೋಷಣೆ, ಅರಣ್ಯ, ಪರಿಸರ ಇಲಾಖೆ ಸಂಶೋಧನಾ ಸಂಸ್ಥೆ ಮೂಲಕ ಹಸಿರು ಬಜೆಟ್‌ ಮಂಡನೆ ಘೋಷಣೆಗೆ, ನಿಲ್ಲಿಸಲಾದ ಕರಾವಳಿ ಹಸಿರು ಕವಚ ಯೋಜನೆ ಪುನರಾರಂಭಕ್ಕೆ ಸರಕಾರಕ್ಕೆ ಮನವಿ ಮಾಡಲಾಗಿದೆ. ಬಜೆಟ್‌ನಲ್ಲಿ ಈ ಕುತೂಹಲಕ್ಕೆ ತೆರೆ ಬೀಳಲಿದೆ ಎಂದರು.

ಕುಂದಾಪುರ ಅರಣ್ಯ ಉಪ ಸಂರಕ್ಷಣಾಧಿಕಾರಿ ಡಾ| ಆಶಿಶ್‌ ರೆಡ್ಡಿ, ಔಷಧ ಮೂಲಿಕಾ ಮಂಡಳಿ ಸದಸ್ಯ ಡಾ| ಕೇಶವ ಹೆಗಡೆ ಕೊರ್ಸೆ, ವಲಯಾರಣ್ಯಾಧಿಕಾರಿಗಳಾದ ಕ್ಲಿಫರ್ಡ್‌ ಲೋಬೊ, ಚಿದಾನಂದ, ಗೋಪಾಲಕೃಷ್ಣ ಉಪಸ್ಥಿತರಿದ್ದರು.

“ಮತ್ಸ್ಯಧಾಮ’ ಯೋಜನೆ
ನದಿ ಹಾಗೂ ಕೆರೆ ಮೀನುಗಳ ಸಂರಕ್ಷಣೆಗಾಗಿ “ಮತ್ಸ್ಯಧಾಮ’ ಯೋಜನೆ ಮಾಡಲಿದ್ದು ಹೆಬ್ರಿಯ ಸೀತಾನದಿಯಲ್ಲಿ ಜಾರಿಯಾಗಲಿದೆ. ಗ್ರಾಮ ಪಂಚಾಯತ್‌ಗಳಂತೆಯೇ ಎಲ್ಲ ನಗರಾಭಿವೃದ್ಧಿ ಸಂಸ್ಥೆಗಳಲ್ಲಿಯೂ ಸಮಿತಿ ರಚನೆಯಾಗಬೆಕಿದ್ದು ಜೀವವೈವಿಧ್ಯ ಕಾನೂನು ಉಲ್ಲಂಘನೆ ಮಾಡುವವರಿಗೆ ಜೈಲು ಶಿಕ್ಷೆ ವಿಧಿಸುವ ಕಾನೂನು ಇದೆ. ಇದಕ್ಕೆ ಜಿಲ್ಲಾ ಮಟ್ಟದಲ್ಲಿ ಅರಣ್ಯ ಉಪ ಸಂರಕ್ಷಣಾಧಿಕಾರಿ ವಿಶೇಷಾಧಿಕಾರಿ ಆಗಿದ್ದಾರೆ ಎಂದು ಆಶೀಸರ ಹೇಳಿದರು. ಕೊಲ್ಲೂರಿನ ಸೌಪರ್ಣಿಕಾ ನದಿಯ ಮಲಿನತೆಯ ಹಾಗೂ ಮತ್ಸ್ಯ ಸಂತತಿ ನಾಶಕ್ಕೆ ಕಾರಣವನ್ನು ಅಧ್ಯಯನ ಮಾಡಿ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾನೂನು ಚೌಕಟ್ಟಿನ ಒಳಗೆ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next