Advertisement

ಉಚಿತ ಅಕ್ಕಿಗೆ ದುಪ್ಪಟ್ಟು ಖರ್ಚು

08:10 AM Apr 30, 2018 | Team Udayavani |

ಸುಳ್ಯ: ಬಯೋಮೆಟ್ರಿಕ್‌ ಇಲ್ಲದ ಪಡಿತರ ಅಂಗಡಿಗಳಲ್ಲಿ ಕೂಪನ್‌ ಕಡ್ಡಾಯ. ಖಾಲಿ ಕೈಯಲ್ಲಿ ಬಂದರೆ ಫ‌ಲಾನುಭವಿಗಳಿಗೆ ಪಡಿತರ ಸಾಮಗ್ರಿ ಸಿಗದು! ಇಂತಹ ನಿಯಮದಿಂದ ಫಲಾನುಭವಿಗಳು ಹೈರಾಣಾಗಿದ್ದಾರೆ. ತಿಂಗಳಿಗೊಮ್ಮೆ ಪಂಚಾಯತ್‌ಗೆ ತೆರಳಿ ಕೂಪನ್‌ ಪಡೆಯಲು ಸರತಿ ಸಾಲಿನಲ್ಲಿ ಕಾಯುವ ಪ್ರಮೇಯ ಇನ್ನೂ ತಪ್ಪಿಲ್ಲ. ಕೂಪನ್‌ ಕಡ್ಡಾಯ ಕ್ರಮದಿಂದ ಉಚಿತ ಅಕ್ಕಿ, ಸಾಮಗ್ರಿ ಪಡೆಯುವ ಫಲಾನುಭವಿಗೆ ದುಪ್ಪಟ್ಟು ಖರ್ಚಿನ ಹೊರೆ ಬೀಳುತ್ತಿದೆ. ಪುತ್ತೂರು ಮತ್ತು ಸುಳ್ಯ ತಾಲೂಕಿನ 30 ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ಜೋಡಣೆ ವ್ಯವಸ್ಥೆ ಆಗಿಲ್ಲ. ಇಂಟರ್‌ನೆಟ್‌ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ ಅನ್ನುತ್ತಾರೆ ಅಧಿಕಾರಿಗಳು.

Advertisement

ಪಾಯಿಂಟ್‌ ಆಫ್‌ ಸೇಲ್‌
ಕುಟುಂಬಗಳಿಗೆ ಸಮರ್ಪಕ ಸೌಲಭ್ಯ ಒದಗಿಸುವ ಸಲುವಾಗಿ ಕೂಪನ್‌ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಬಳಿಕ ಅದನ್ನು ರದ್ದುಗೊಳಿಸಿ, ಪಾಯಿಂಟ್‌ ಆಫ್‌ ಸೇಲ್‌ ಯಂತ್ರ ಬಳಸಿ, ವಿತರಿಸಲು ನಿರ್ಧರಿಸಲಾಗಿತ್ತು. ಇದು ಇಂಟರ್‌ನೆಟ್‌ ವ್ಯವಸ್ಥೆ., ಬಯೋಮೆಟ್ರಿಕ್‌ ಆಧಾರಿತ ಯಂತ್ರ. ಇಲ್ಲಿ ಫಲಾನುಭವಿ ಸಾಮಗ್ರಿ ಪಡೆಯುವ ಮೊದಲು ಬೆರಳಚ್ಚು ದಾಖಲಿಸಬೇಕು. ರೇಷನ್‌ ಕಾರ್ಡ್‌ ಸಂಖ್ಯೆ ದಾಖಲಿಸಿದ ಸಂದರ್ಭ, ಆ ಕುಟುಂಬದ ಪೂರ್ತಿ ವಿವರ ಆನ್‌ಲೈನ್‌ ಮೂಲಕ ಪ್ರಕಟಗೊಳ್ಳುತ್ತದೆ. ಅದರಂತೆ ನಿಗದಿತ ಪ್ರಮಾಣದ ಪಡಿತರ ಸಾಮಗ್ರಿ ಪಡೆಯಲು ಅರ್ಹತೆ ಸಿಗುತ್ತದೆ.

ಬೆರಳಚ್ಚು ಇಲ್ಲದಿದ್ದರೆ ಕೂಪನ್‌
ಪಡಿತರ ಸೌಲಭ್ಯ ವಿತರಣೆಗೆ ಸಂಬಂಧಿಸಿ ಬಯೋಮೆಟ್ರಿಕ್‌ ವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಕೂಪನ್‌ ಮೂಲಕ ಸಾಮಗ್ರಿ ವಿತರಿಸುತ್ತಾರೆ. ಯಂತ್ರ ಸ್ಥಾಪನೆಗೆ ಇಂಟರ್‌ನೆಟ್‌ ಸೌಲಭ್ಯ ಅಗತ್ಯ. ಇಂಟರ್‌ನೆಟ್‌, ಕಂಪ್ಯೂಟರ್‌ ಸೌಲಭ್ಯ ಇಲ್ಲದ ಪಡಿತರ ಅಂಗಡಿಯಲ್ಲಿ ಪಾಯಿಂಟ್‌ ಆಫ್‌ ಸೇಲ್‌ ಯಂತ್ರ ಅಳವಡಿಸುವಂತಿಲ್ಲ. ಫಲಾನುಭವಿಗಳು ಗ್ರಾ.ಪಂ. ನಿಂದ ಕೂಪನ್‌ ಪಡೆದುಕೊಂಡರೆ ಮಾತ್ರ ಪಡಿತರ ಸಾಮಗ್ರಿ ದೊರೆಯುತ್ತದೆ. ಈ ನಿಯಮವೇ ಫಲಾನುಭವಿಗೆ ಹೊರೆ ಎನಿಸಿದೆ. ಪಂ.ಗೆ ತೆರಳಿ, ಅಲ್ಲಿ ಕೂಪನ್‌ಗೆ ಕಾಯಬೇಕು. ಫಲಾನುಭವಿ ಕೂಪನ್‌ಗೆ ಬಂದಾಗ ಇಂಟರ್‌ನೆಟ್‌ ಕೈಕೊಟ್ಟರೆ ಮರುದಿನ ಬರಬೇಕು. ಕೂಪನ್‌ ಬಗ್ಗೆ ಮಾಹಿತಿ ಇಲ್ಲದ ಫಲಾನುಭವಿಗೆ ನೇರವಾಗಿ ಪಡಿತರ ಅಂಗಡಿಗೆ ಹೋದರೆ ಬರಿಗೈಯಲ್ಲಿ ಮರಳಬೇಕಾಗುತ್ತದೆ.

ಖರ್ಚು ಅಧಿಕ
ಪಡಿತರ ಅಂಗಡಿಯಲ್ಲಿ ಉಚಿತ ಸಾಮಗ್ರಿ ಸಿಗುವುದಾದರೂ ಫಲಾನುಭವಿಗಳು ಗ್ರಾ.ಪಂ.ಗೆ ತೆರಳಲು ವ್ಯಯಿಸುವ ಖರ್ಚು ಹೋಲಿಸಿದರೆ, ಉಚಿತಕ್ಕೆ ಕೈ ಒಡ್ಡುವುದಕ್ಕಿಂತಲೂ ಅಂಗಡಿಗಳಲ್ಲಿ ದುಡ್ಡು ಕೊಟ್ಟು ಖರೀದಿಸುವುದೇ ಒಳಿತು ಎನ್ನಿ ಸೀತು. ಸಂಚಾರ ವ್ಯವಸ್ಥೆ ಸರಿ ಇಲ್ಲದ ಕಡೆಗಳಲ್ಲಿ ಬಾಡಿಗೆ ವಾಹನ ಬಳಸಿ ಪಂಚಾಯತ್‌ಗೆ ಹೋಗಬೇಕು. ಅಲ್ಲಿ ಇಂಟರ್‌ ನೆಟ್‌ ಕೈ ಕೊಟ್ಟರೆ ಮತ್ತೂಂದು ದಿನ ಹೋಗಬೇಕು. ಪಡಿತರ ವ್ಯವಸ್ಥೆಯಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಗಳು ಬಡತನ ರೇಖೆಗಿಂತ ಕೆಳಗಿದ್ದು, ಕೂಲಿ ಮಾಡಿ ಜೀವನ ನಿರ್ವಹಿಸುತ್ತಿವೆ. ಹೀಗಾಗಿ ಈ ಕೂಪನ್‌ ಅಲೆದಾಟ ಅವರಿಗೆ ಹೊರೆಯಾಗಿ ಪರಿಣಮಿಸಿದೆ. ಜಿಲ್ಲಾಧಿಕಾರಿ ಆದೇಶದ ಅನುಸಾರ ಈ ವ್ಯವಸ್ಥೆ ಜಾರಿಗೊಳಿಸಿದ್ದು, ಸದ್ಯಕ್ಕೆ ಯಾವುದೇ ಬದಲಾವಣೆಯ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಲ್ಲೆಲ್ಲಿ ಇಲ್ಲ?
ಪುತ್ತೂರು ತಾ|ನ 76 ಪಡಿತರ ಅಂಗಡಿಗಳ ಪೈಕಿ 11ರಲ್ಲಿ ಮತ್ತು ಸುಳ್ಯ ತಾ| ನಲ್ಲಿ 58ರಲ್ಲಿ 19 ಕಡೆ ಬಯೋಮೆಟ್ರಿಕ್‌ ವ್ಯವಸ್ಥೆ ಇಲ್ಲ. ಪುತ್ತೂರು ತಾ|ನ ಶಾಂತಿಗೋಡು, ನೇರೋಳ್ತಡ್ಕ, ಇಚ್ಲಂಪಾಡಿ, ಕೊಂಬಾರು, ಬೊಳುನಡ್ಕ, ಪಾಲ್ತಾಡಿ, ದೋಳ್ಪಾಡಿ, ಕೈಕಾರ, ಐತ್ತೂರು, ಕೈಕಾರ, ಸುಳ್ಯಪದವು ಹಾಗೂ ಸುಳ್ಯ ತಾ|ನ ಮುಕ್ಕೂರು, ದುಗಲಡ್ಕ, ಮಿತ್ತಡ್ಕ, ಬಡ್ಡಡ್ಕ, ಚೊಕ್ಕಾಡಿ, ಬೊಳ್ಳಾಜೆ, ಅರಂಬೂರು, ಕೋಲ್ಚಾರು, ಗೂನಡ್ಕ, ಐನೆಕಿದು, ಶಾಂತಿನಗರ, ಬಳ್ಳಕ್ಕ, ತಳೂರು, ನಡುಗಲ್ಲು, ತೊಡಿಕಾನದಲ್ಲಿ  ಕೂಪನ್‌ ವ್ಯವಸ್ಥೆಯಿದೆ. ಎಣ್ಮೂರು, ಶಾಂತಿಗೋಡಿನ ಫಲಾನುಭವಿಗಳಿಗೆ ಅಲೆಕ್ಕಾಡಿಯಲ್ಲಿ , ತೊಡಿಕಾನದವರಿಗೆ ಅರಂತೋಡಿನಲ್ಲಿ, ಕೊಡಿಯಾಲದ ಫಲಾನುಭವಿಗಳಿಗೆ ಕೊಡಿಯಾಲ ಗ್ರಾ.ಪಂ.ನಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಕಲ್ಪಿಸಲಾಗಿದೆ. 

Advertisement

ಮ್ಯಾನುವೆಲ್‌ನಲ್ಲೇ ನೀಡಿ
ಈ ಹಿಂದೆ ಕೂಪನ್‌ ವ್ಯವಸ್ಥೆಯ ಬಗ್ಗೆ ವಿರೋಧ ವ್ಯಕ್ತವಾದಾಗ, ಬಯೋಮೆಟ್ರಿಕ್‌ ಇಲ್ಲದ ಕಡೆಗಳಲ್ಲಿ ಮ್ಯಾನುವೆಲ್‌ ನಡಿ ಸಾಮಗ್ರಿ ವಿತರಿಸುವಂತೆ ಸೂಚಿಸಿದ್ದರೂ, ಅದು ಪಾಲನೆಗೆ ಬಂದಿಲ್ಲ. ಕೂಪನ್‌ ವ್ಯವಸ್ಥೆ ಬದಲಾಗಿ, ಬಯೋಮೆಟ್ರಿಕ್‌ ಅಳವಡಿಕೆ ತನಕ ಮ್ಯಾನುವೆಲ್‌ನಲ್ಲಿ ಸಾಮಗ್ರಿ ನೀಡಬೇಕು. ಇಲ್ಲದಿದ್ದರೆ ನಮಗೆ ಹೊರೆ ಆಗುತ್ತದೆ.
– ಸುಶೀಲಾ, ಫಲಾನುಭವಿ, ಸುಳ್ಯ

— ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next