Advertisement
ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿದ್ದ ಬಿನ್ನಿಪೇಟೆ ವಾರ್ಡ್ ಉಪಚುನಾವಣೆ ಮತದಾನದ ವೇಳೆ ಮೂರು ಪಕ್ಷಗಳ ಕಾರ್ಯಕರ್ತರ ನಡುವೆ ಕಿತ್ತಾಟ, ಆರೋಪ-ಪ್ರತ್ಯಾರೋಪ, ಪ್ರತಿಭಟನೆಗಳು ನಡೆದಿದ್ದು, ಅಂತಿಮವಾಗಿ ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ತಂದೆ ಬಿಟಿಎಸ್ ನಾಗರಾಜ್ ವಿರುದ್ಧ ದೂರು ದಾಖಲಾಗಿದೆ.
Related Articles
Advertisement
ಮತದಾನದ ವೇಳೆಯೂ ಗಲಾಟೆ: ಕಾರ್ಯಕರ್ತರ ನಡುವಿನ ಮಾರಾಮಾರಿಯಿಂದ ವಾರ್ಡ್‌ನಾದ್ಯಂತ 200ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನೇಮಿಸಲಾಗಿತ್ತು. ಅದರ ನಡುವೆಯೂ ಹಣ ಹಂಚುತ್ತಿದ್ದ ಎಂದು ಆರೋಪಿಸಿ ಬೈಕ್‌ನಲ್ಲಿ ಹೋಗುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತ ಸುಧಾಕರ್ ಎಂಬಾತನ ಮೇಲೆ ಬಿಟಿಎಸ್ ನಾಗರಾಜ್ ಹಾಗೂ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರೊಂದಿಗೂ ಜೆಡಿಎಸ್ ಕಾರ್ಯಕರ್ತರು ವಾಗ್ವಾದ ನಡೆಸಿ ತಳ್ಳಾಡಿದ ಘಟನೆ ನಡೆದಿದೆ.
ಕಾಂಗ್ರೆಸ್‌ನಿಂದ ಪ್ರತಿಭಟನೆ: ನಾಗರಾಜ್ ವಿರುದ್ಧ ದೂರು ದಾಖಲಾದ ನಂತರವೂ ಬಂಧಿಸಿಲ್ಲವೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕೆ.ಪಿ.ಅಗ್ರಹಾರದಲ್ಲಿ ಪ್ರತಿಭಟನೆ ನಡೆಸಿದರು. ಮತದಾನದ ವೇಳೆಯೂ ಹಲ್ಲೆ ನಡೆಸಿದ್ದು, ಯಾಕೆ ಕ್ರಮಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪ್ರತಿಭಟನೆ ನಡೆಸುವಂತಿಲ್ಲ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದಿದ್ದಾರೆ.
ದಿನೇಶ್ ಗುಂಡೂರಾವ್ ಭೇಟಿ: ಗಲಾಟೆಯಿಂದ ಹಲ್ಲೆಗೊಳಗಾದ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಮನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೋಮವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಬಿಟಿಎಸ್ ನಾಗರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ಮುಖಂಡರಾಗಿದ್ದ ನಾಗರಾಜ್ ವಿಧಾನಸಭಾ ಚುನಾವಣೆಗೆ ವಾರವಿದ್ದಾಗ ನಮಗೆ ಮೋಸ ಮಾಡಿ ಜೆಡಿಎಸ್ ಸೇರಿದ್ದಾರೆ. ಅಂತಹವರಿಗೆ ಹೇಗೆ ಟಿಕೆಟ್ ನೀಡಲು ಸಾಧ್ಯ. ಇದೀಗ ಗೂಂಡಾವರ್ತನೆ ಮೂಲಕ ತಮ್ಮ ಮಗಳನ್ನು ಗೆಲ್ಲಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ದೂರಿದರು.
ಭಯದ ವಾತಾವರಣ, ತಗ್ಗಿದ ಮತ ಪ್ರಮಾಣ: ಭಾನುವಾರ ರಾತ್ರಿ ಹಾಗೂ ಮತದಾನ ದಿನ ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ಹಲ್ಲೆಯಿಂದಾಗಿ ವಾರ್ಡ್‌ನಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಪರಿಣಾಮ ವಾರ್ಡ್‌ನಲ್ಲಿ ಒಟ್ಟು 34,582 ಮತದಾರರಿದ್ದರೂ, ಬೆಳಗ್ಗೆ 9ರ ವೇಳೆ ಶೇ.2ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆವರೆಗೆ ಶೇ. 26 ಮತದಾನವಾಗಿದ್ದರೆ, ಅಂತಿಮವಾಗಿ ಸಂಜೆ 5 ಗಂಟೆಗೆ ಶೇ. 43.54ರಷ್ಟು ಮತದಾನವಾಗಿದೆ. ಬುಧವಾರ (ಜೂ.20) ಬೆಳಗ್ಗೆ 8 ರಿಂದ ಗೃಹ ವಿಜ್ಞಾನ ಕಾಲೇಜಿನಲ್ಲಿ ಮತ ಏಣಿಕೆ ಕಾರ್ಯ ನಡೆಯಲಿದೆ.