ಹೊಸದಿಲ್ಲಿ: ಪೊಲೀಸರ ನಿರ್ಬಂಧದ ನಡುವೆಯೂ ನೂತನ ಸಂಸತ್ ಆವರಣದತ್ತ ನುಗ್ಗಲು ಯತ್ನಿಸಿದ ಪ್ರತಿಭಟನಾನಿರತ ಕುಸ್ತಿಪಟುಗಳನ್ನು ರವಿವಾರ ಬಂಧಿಸಿದ್ದೂ ಆಯ್ತು, ತಡರಾತ್ರಿ ಹೊತ್ತಿಗೆ ಬಿಡುಗಡೆ ಮಾಡಿದ್ದೂ ಆಯ್ತು. ಪೊಲೀಸರು ವಿನೇಶ್ ಫೊಗಾಟ್, ಸಂಗೀತಾ ಫೊಗಾಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿನ್ನು ಜಂತರ್ ಮಂತರ್‌ಗೆ ಬರುವಂತಿಲ್ಲ. ಹಾಗಾಗಿ ಅವರ ಪ್ರತಿಭಟನೆಯ ಸ್ವರೂಪ ಮುಂದೆ ಹೇಗಿರುತ್ತದೆ ಎನ್ನುವುದು ಖಚಿತವಾಗಿಲ್ಲ. ಅದನ್ನು ಸದ್ಯದಲ್ಲೇ ತಿಳಿಸುತ್ತೇವೆಂದು ಕುಸ್ತಿಪಟುಗಳು ಹೇಳಿದ್ದಾರೆ.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಭಾರತೀಯ ಕುಸ್ತಿಸಂಸ್ಥೆ ಅಧ್ಯಕ್ಷ ಬ್ರಿಜ್‌ಭೂಷಣ ಶರಣ್ ಸಿಂಗ್ ಅವರನ್ನು ಬಂಧಿಸಿ, ವಿಚಾರಣೆ ನಡೆಸಬೇಕೆನ್ನುವುದು ಕುಸ್ತಿಪಟುಗಳ ಆಗ್ರಹ. ಬಹಳ ಒತ್ತಾಯದ ನಂತರ ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದರೂ ಅದು ಹೊರನೋಟಕ್ಕೇನೂ ಗೊತ್ತಾಗುತ್ತಿಲ್ಲ.
ಸದ್ಯ ರವಿವಾರದ ಸಂಘರ್ಷದ ಬೆನ್ನಲ್ಲೇ ಕುಸ್ತಿಪಟುಗಳಿಗೆ ದೇಶಾದ್ಯಂತ ಇತರ ಕ್ರೀಡಾಪಟುಗಳಿಂದ ಬೆಂಬಲ ಲಭಿಸಿದೆ. ಬೀಜಿಂಗ್ ಒಲಿಂಪಿಕ್ಸ್ ಚಿನ್ನ ವಿಜೇತ ಶೂಟರ್ ಅಭಿನವ್ ಬಿಂದ್ರಾ, ಪೊಲೀಸರ ಕ್ರಮದ ವಿರುದ್ಧ ಕಿಡಿಕಾರಿದ್ದಾರೆ. ಕಳೆದ ರಾತ್ರಿ ನನಗೆ ನಿದ್ರೆ ಬಂದಿಲ್ಲ, ಕುಸ್ತಿಪಟುಗಳನ್ನು ಎಳೆದೊಯ್ಯುತ್ತಿರುವ ಚಿತ್ರಗಳನ್ನು ನೋಡಿದ ನಂತರ ಆಘಾತಕ್ಕೊಳಗಾಗಿದ್ದೇನೆ. ನಮ್ಮನ್ನು ನಾವು ಕಾಪಾಡಿಕೊಳ್ಳುವುದಕ್ಕೆ ಸ್ವತಂತ್ರ ವ್ಯವಸ್ಥೆಯೊಂದನ್ನು ಮಾಡಿಕೊಳ್ಳಬೇಕು ಎಂದು ಬಿಂದ್ರಾ ಹೇಳಿದ್ದಾರೆ.
ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ, ನಮ್ಮ ಕುಸ್ತಿಪಟುಗಳ ಸಾಧನೆಗಳನ್ನೇನೂ ಗಣಿಸದೆ ಎಳೆದೊಯ್ಯುವಂತಹ ಪರಿಸ್ಥಿತಿ ಏಕೆ ಉದ್ಭವಿಸಿತು? ಯಾರನ್ನೂ ಹೀಗೆ ನಡೆಸಿಕೊಳ್ಳುವುದು ಸರಿಯಲ್ಲ. ಈ ಇಡೀ ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಿಸಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.