Advertisement

ಬಹುಕೋಟಿ ವಂಚನೆ: ಮನ್ಸೂರ್‌ ಆಸ್ತಿ ವಶ

02:03 PM Jul 31, 2019 | Team Udayavani |

ಕೋಲಾರ: ಐಎಂಎ ವಂಚನೆ ಪ್ರಕರಣ ಸಂಬಂಧ ಆರೋಪಿ ಮನ್ಸೂರ್‌ ಆಲಿಖಾನ್‌ರಿಗೆ ಸೇರಿದ್ದ ಅಕ್ರಮ ಆಸ್ತಿಗಳನ್ನು ಮುಟ್ಟು ಗೋಲು ಹಾಕಿ ಕೊಳ್ಳುವ ಭಾಗವಾಗಿ ಕೋಲಾರ ಜಿಲ್ಲೆಯ ಆಸ್ತಿ ಗಳನ್ನು ಜಿಲ್ಲಾಧಿಕಾರಿ ಜೆ.ಮಂಜು ನಾಥ್‌ ನೇತೃತ್ವದ ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿದೆ.

Advertisement

ವಂಚನೆ ಪ್ರಕರಣ ಸಂಬಂಧ ನವದೆಹಲಿಯಲ್ಲಿ ಮನ್ಸೂರ್‌ ಆಲಿಖಾನ್‌ರನ್ನು ತಮ್ಮ ವಶಕ್ಕೆ ಪಡೆದು ಕೊಂಡಿರುವ ಎಸ್‌ಐಟಿ ಅಧಿಕಾರಿಗಳು, ಅವರಿಗೆ ಸಂಬಂಧಿಸಿದ ಸ್ವಂತ ಹೆಸರಿನ ಹಾಗೂ ಬೇನಾಮಿ ಆಸ್ತಿಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಹೀಗೆ ತನಿಖೆ ಸಂದರ್ಭದಲ್ಲಿ ಮನ್ಸೂರ್‌ ಆಲಿ ಖಾನ್‌ ತಮಗೆ ಕೋಲಾರ ಜಿಲ್ಲೆಯಲ್ಲಿಯೂ ಆಸ್ತಿ ಇರುವುದಾಗಿ ಬಾಯಿ ಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಕಾರ್ಯೋನ್ಮುಖರಾಗಿ ಬೆಂಗಳೂರಿನ ಕಂದಾಯ ಅಧಿಕಾರಿಗಳ ಮೂಲಕ ಡೀಸಿ ಜೆ.ಮಂಜುನಾಥ್‌ಗೆ ಮಾಹಿತಿ ನೀಡಿದ್ದರು.

ನಾಮಫ‌ಲಕ: ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಡೀಸಿ ಜೆ.ಮಂಜುನಾಥ್‌, ಉಪ ವಿಭಾಗಾಧಿ ಕಾರಿ ಸೋಮಶೇಖರ್‌ ಇತರರ ತಂಡವು ಮಾಲೂರು ತಾಲೂಕಿನ ಪುರ ಹಾಗೂ ಬೈರತನ ಹಳ್ಳಿಯಲ್ಲಿರುವ ಆಸ್ತಿಗಳನ್ನು ತಮ್ಮ ವಶಕ್ಕೆ ಪಡೆದು ಕೊಂಡು ಅತಿಕ್ರಮಣ ಪ್ರವೇಶ ನಿಷೇಧ ಎಂಬ ನಾಮಫ‌ಲಕವನ್ನು ಆಸ್ತಿಗಳಿಗೆ ಅಳವಡಿಸಿದ್ದಾರೆ.

ಆಸ್ತಿ ವಶಕ್ಕೆ: ಮನ್ಸೂರ್‌ ಆಲಿಖಾನ್‌ ಬೆಂಗಳೂರು ಸುತ್ತಮುತ್ತ ಹಾಗೂ ಮಾಲೂರು ತಾಲೂಕಿನ ಹಲವೆಡೆ ಆಸ್ತಿ ಹೊಂದಿರುವ ಕುರಿತು ಎಸ್‌ಐಟಿ ಅಧಿಕಾರಿಗಳಿಗೆ ತನಿಖೆ ಸಂದರ್ಭದಲ್ಲಿ ಮಾಹಿತಿ ನೀಡಿದ್ದು, ಈ ಮಾಹಿತಿ ಅನ್ವಯ ಅಧಿಕಾರಿಗಳು ಆಸ್ತಿ ವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಸುತ್ತಿ ದ್ದಾರೆ.

Advertisement

ಕತ್ತಲಲ್ಲಿ ಓಡಾಟ: ಮನ್ಸೂರ್‌ ಆಲಿಖಾನ್‌ ಬಹು ಕೋಟಿ ರೂ. ವಂಚಿಸಿ ನಾಪತ್ತೆಯಾಗಿ ದೂರು ಬಂದ ಸಂದರ್ಭದಲ್ಲಿ ಮಾಲೂರು ತಾಲೂಕಿನ ಬೈರತನಹಳ್ಳಿ ಯಲ್ಲಿರುವ ಫಾರಂಹೌಸ್‌ನಲ್ಲಿ ತಲೆ ಮರೆಸಿ ಕೊಂಡಿರಬಹುದೆಂಬ ಅನುಮಾನ ಸ್ಥಳೀಯರಿಗೆ ಮೂಡಿತ್ತು. ಇದಕ್ಕೆ ಇಂಬು ಕೊಡು ವಂತೆ ಅಪರಿಚಿತ ವ್ಯಕ್ತಿಗಳು ಫಾರಂಹೌಸ್‌ನಲ್ಲಿ ಬಳಿ ಸಂತೆ ಕತ್ತಲಲ್ಲಿ ಸುಳಿದಾಡುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದರು. ಆದರೆ, ಈ ಫಾರಂ ಹೌಸ್‌ ಮನ್ಸೂರ್‌ ಆಲಿಖಾನ್‌ಗೆ ಸೇರಿದ್ದು ಎಂಬ ಬಗ್ಗೆ ಸ್ಥಳೀಯರಿಗೆ ಯಾವುದೇ ಮಾಹಿತಿ ಇರಲಿಲ್ಲ.

ಫಾರಂ ಪೌಸ್‌ಗೆ ಬೀಗ: ಈ ಕುರಿತು ಫಾರಂಹೌಸ್‌ ಕಾವಲುಗಾರರು ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಫಾರಂ ಹೌಸ್‌ನ ಗೇಟ್‌ಗೆ ಬೀಗ ಜಡಿದು ವಾಚ್ಮೆನ್‌ ಓಡಾಡುತ್ತಿದ್ದ. ರಾತ್ರಿ ವೇಳೆ ನಾಲ್ಕೈದು ಮಂದಿ ಫಾರಂಹೌಸ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದರು.

ಇವೆಲ್ಲಾ ಅನುಮಾನಗಳಿಗೆ ಇಂಬು ಕೊಡುವಂತೆ, ಎಸ್‌ಐಟಿ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿರುವ ಮನ್ಸೂರ್‌ ಆಲಿಖಾನ್‌ ತಮ್ಮ ಆಸ್ತಿ ಹಾಗೂ ಬೇನಾಮಿ ಆಸ್ತಿಗಳ ಕುರಿತು ಮಾಹಿತಿ ನೀಡುವ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಪುರ ಹಾಗೂ ಬೈರತನಹಳ್ಳಿಯ ಆಸ್ತಿ, ಫಾರಂ ಹೌಸ್‌ ಕುರಿತು ಖಚಿತ ಸುಳಿವು ನೀಡಿದ್ದನು.

ಈ ಸುಳಿವನ್ನಾಧರಿಸಿ ಎಸ್‌ಐಟಿ ಅಧಿಕಾರಿಗಳು ಕಂದಾಯ ಅಧಿಕಾರಿಗಳ ಮೂಲಕ ಮನ್ಸೂರ್‌ ಅಲಿಖಾನ್‌ರಿಗೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆ ಯಲ್ಲಿರುವ ಆಸ್ತಿಗಳ ಬಗ್ಗೆ ಖಚಿತಪಡಿಸಿ ಕೊಂಡಿದ್ದರು.

ಈ ಕುರಿತು ಕೋಲಾರ ಜಿಲ್ಲಾಧಿಕಾರಿ ಜೆ.ಮಂಜು ನಾಥ್‌ರಿಗೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕವೇ ಮಾಹಿತಿ ರವಾನಿಸಿ, ಸಂಬಂಧಿಸಿದ ಆಸ್ತಿಗಳನ್ನು ವಶಕ್ಕೆ ಪಡೆದುಕೊಳ್ಳುವಂತೆ ಮಾಡುವಲ್ಲಿ ಎಸ್‌ಐಟಿ ಅಧಿಕಾರಿಗಳು ಯಶಸ್ವಿ ಯಾಗಿದ್ದಾರೆ. ತಮ್ಮ ಗ್ರಾಮದ ಸರಹದ್ದಿನಲ್ಲಿಯೇ ಬಹುಕೋಟಿ ವಂಚನೆ ಆರೋಪಿ ಮನ್ಸೂರ್‌ ಆಲಿಖಾನ್‌ಗೆ ಸೇರಿದ್ದ ಆಸ್ತಿ ಪತ್ತೆಯಾಗಿರುವುದು ಸ್ಥಳೀಯರನ್ನು ಆಶ್ಚರ್ಯಚಕಿತರನ್ನಾಗಿಸಿದೆ.

ಬಂಧುಗಳ ಹೆಸರಿನಲ್ಲಿದ್ದ 50 ಗುಂಟೆ ಜಮೀನು, ಫಾರಂಹೌಸ್‌ ಸ್ವಾಧೀನ

ಟೇಕಲ್: ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿಯೂ ಹಲವು ಸಂಪರ್ಕಗಳಿವೆ ಎಂಬ ಮಾಹಿತಿ ಬೆನ್ನಹಿಂದೆಯೇ ಹಗರಣದ ಮುಖ್ಯ ಆರೋಪಿ ಮನ್ಸೂರ್‌ಅಲಿಖಾನ್‌ ಸಂಬಂಧಿಕರ ಹೆಸರಿನಲ್ಲಿದ್ದ ಇಲ್ಲಿಗೆ ಟೇಕಲ್ನ ಪುರ ಗ್ರಾಮದ ಸ.ನಂ.6ರ 20 ಗುಂಟೆ, ಸರ್ವೆ ನಂ. 5ರ 30 ಗುಂಟೆ ಜಮೀನು ಮತ್ತು ಬೈರತ್ನಹಳ್ಳಿಯಲ್ಲಿನ ಫಾರಂಹೌಸ್‌ ಅನ್ನು ಜಿಲ್ಲಾಡಳಿತ ವಶಪಡಿಸಿಕೊಂಡು, ಆ ಪ್ರದೇಶಗಳಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಸೂಚನಾ ಫ‌ಲಕಗಳನ್ನು ಅಳವಡಿಸಿ ಕ್ರಮ ತೆಗೆದುಕೊಂಡಿದೆ.

ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಉಪವಿಭಾಗಾಧಿ ಕಾರಿ ವಿ.ಸೋಮಶೇಖರ್‌, ತಹಶೀಲ್ದಾರ್‌ ನಾಗರಾಜ್‌, ಕಂದಾಯ ನಿರೀಕ್ಷಕ ಮುನಿಸ್ವಾಮಿಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ಸೋಮವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಜು.10ರಂದು ಕರ್ನಾಟಕ ರಾಜ್ಯ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿರುವ ಕಂದಾಯ ಇಲಾಖೆಯ ವಿಶೇಷಕೋಶ ಅಧೀನ ಕಾರ್ಯದರ್ಶಿಗಳಾದ ಕೆ.ಆರ್‌.ರವಿಕುಮಾರ್‌ ಅವರ ಆದೇಶವಿರುವ ಪತ್ರದ ಆದೇಶದ ಮೇರೆಗೆ

ಕಂದಾಯ ನಿರೀಕ್ಷಕ ಮುನಿಸ್ವಾಮಿಶೆಟ್ಟಿ ಅವರು ಸರ್ಕಾರಕ್ಕೆ ಕಳುಹಿಸಿಕೊಟ್ಟಿರುವ ವರದಿಯಲ್ಲಿ ಬೈರತ್ನ ಹಳ್ಳಿಪುರ ಗ್ರಾಮದಲ್ಲಿ ಐಎಂಎ ಸಂಸ್ಥೆಗೆ ಸೇರಿದ ಸ.ನಂ. 6/2ಎ1 ರಲ್ಲಿನ 0-20 ಗುಂಟೆ ಜಮೀನು ನಜ್ಮಾಖಾನಂ ಕೋಂ ಖಲೀಮುಲ್ಲಾರವರ ಹೆಸರಿನಲ್ಲಿದ್ದು, ಇದರಲ್ಲಿ ಸಿಮೆಂಟ್ ಇಟ್ಟಿಗೆ ಕಾರ್ಖಾನೆ ಸಲುವಾಗಿ ನಿರ್ಮಿಸಿದ ಶೆಡ್‌ ಮತ್ತು ಕಾರ್ಖಾನೆ ಇದೆ.

ಇದೇ ಗ್ರಾಮದ ಸರ್ವೆ ನಂ.5ರಲ್ಲಿ 0-30 ಗುಂಟೆ ಜಮೀನು ಕೂಡಾ ಸದರಿ ನಜ್ಮಾಖಾನಂ ಕೋಂ ಖಲೀಮುಲ್ಲಾ ಅವರು ಖರೀದಿಸಿದ್ದು, ಇನ್ನೂ ಖಾತೆ ಬದಲಾವಣೆಯಾಗಿಲ್ಲ. ಈ ಜಮೀನಿನಲ್ಲಿ ವಾಸದ ಮನೆ ಮತ್ತು ಉದ್ಯಾನವಿದ್ದು ಇವರೇ ಅನುಭವದಲ್ಲಿದ್ದರು. ಎರಡೂ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ಸರ್ಕಾರಿ ಆಸ್ತಿ ಎಂಬ ಫ‌ಲಕ ಅಳವಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next