Advertisement

ವ್ಯಾಪಾರದ ಭಾರೀ ಪೈಪೋಟಿಯಲ್ಲಿ ಬಿಗ್‍ ಬಿಲಿಯನ್‍ ಡೇಸ್‍ v/s ಗ್ರೇಟ್‍ ಇಂಡಿಯನ್‍ ಫೆಸ್ಟಿವಲ್‍

07:34 PM Sep 28, 2021 | Team Udayavani |

ವರ್ಷಕ್ಕೊಮ್ಮೆ ಫ್ಲಿಪ್‍ಕಾರ್ಟ್‍ ಬಿಗ್‍ ಬಿಲಿಯನ್‍ ಡೇಸ್‍ ಎಂಬ ಹೆಸರಿನಲ್ಲಿ ಹಾಗೂ ಅಮೆಜಾನ್‍, ಗ್ರೇಟ್‍ ಇಂಡಿಯನ್‍ ಫೆಸ್ಟಿವಲ್‍  ಹೆಸರಿನಲ್ಲಿ ಭಾರಿ ರಿಯಾಯ್ತಿ, ಆಫರ್‍ ಗಳ ಮಾರಾಟ ಮೇಳವನ್ನು ನಡೆಸುತ್ತವೆ. ಈ ಬಾರಿ ಎರಡೂ ಕಂಪೆನಿಗಳು ಪರಸ್ಪರ ಪೈಪೋಟಿಗೆ ಬಿದ್ದು, ತಮ್ಮ ಮೇಳದ ದಿನಾಂಕಗಳನ್ನು ಪದೇ ಪದೇ ಬದಲಿಸಿರುವುದು ಸ್ವಾರಸ್ಯಕರವಾಗಿದೆ!

Advertisement

ಸದ್ಯ ಭಾರತದ ಬೃಹತ್‍ ಆನ್‍ ಲೈನ್‍ ಮಾರುಕಟ್ಟೆಯಲ್ಲಿ ಗ್ರಾಹಕರ ವಿಶ್ವಾಸ ಗಳಿಸಿ, ಉತ್ತಮ ಸೇವೆ ನೀಡುತ್ತಿರುವುದು ಅಮೆಜಾನ್‍ ಮತ್ತು ಫ್ಲಿಪ್‍ಕಾರ್ಟ್‍ ಮಾತ್ರ. ಈ ಎರಡೂ ಕಂಪೆನಿಗಳ ಪೈಪೋಟಿಯಿಂದಾಗಿ ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ ವಸ್ತುಗಳು ದೊರಕುತ್ತಿವೆ.

ಈ ಎರಡೂ ಕಂಪೆನಿಗಳು, ದಸರಾ, ದೀಪಾವಳಿಯನ್ನು ಗಮನದಲ್ಲಿಟ್ಟುಕೊಂಡು ವರ್ಷಕ್ಕೊಮ್ಮೆ ಭಾರಿ ಆಫರ್‍ ಗಳನ್ನುಳ್ಳ ಮಾರಾಟ ಮೇಳ ನಡೆಸುತ್ತವೆ. ಇದಕ್ಕೆ ಫ್ಲಿಪ್‍ ಕಾರ್ಟ್‍ ಬಿಗ್‍ ಬಿಲಿಯನ್ ಡೇಸ್‍ ಎಂಬ ಹೆಸರು ಇಟ್ಟಿದ್ದರೆ, ಅಮೆಜಾನ್‍ ಗ್ರೇಟ್‍ ಇಂಡಿಯನ್‍ ಫೆಸ್ಟಿವಲ್‍ ಎಂದು ಕರೆಯುತ್ತದೆ.

ಈ ಆನ್‍ಲೈನ್‍ ಮಾರುಕಟ್ಟೆಗಳು ವರ್ಷದಲ್ಲಿ ಮೂರ್ನಾಲ್ಕು ಬಾರಿ  (ಗಣರಾಜ್ಯೋತ್ಸವ, ಸ್ವಾತಂತ್ರ್ಯ, ದಿನಾಚರಣೆ, ದೀಪಾವಳಿ ಇಂಥ ಸಂದರ್ಭಗಳಲ್ಲಿ) ರಿಯಾಯಿತಿಯ ಮಾರಾಟ ಮೇಳಗಳನ್ನು ನಡೆಸುತ್ತವೆ. ಆದರೆ ಸೆಪ್ಟೆಂಬರ್‍ ಅಥವಾ ಅಕ್ಟೋಬರ್‍ ತಿಂಗಳಲ್ಲಿ ಹಮ್ಮಿಕೊಳ್ಳುವ ಬಿಗ್‍ ಬಿಲಿಯನ್‍ ಡೇಸ್‍- ಗ್ರೇಟ್‍ ಇಂಡಿಯನ್‍ ಫೆಸ್ಟಿವಲ್‍ ನಲ್ಲಿ ದೊರಕುವ ರಿಯಾಯಿತಿಗಳು, ಆಫರ್‍ ಗಳು ಬೇರಿನ್ನಾವುದೇ ಸಂದರ್ಭದಲ್ಲೂ ದೊರಕುವುದಿಲ್ಲ. ಇದರ ಬಗ್ಗೆ ಬಲ್ಲ ಗ್ರಾಹಕರು ಈ ಮಾರಾಟ ಮೇಳಕ್ಕಾಗಿ ತಿಂಗಳುಗಳಿಂದ ಕಾದಿರುತ್ತಾರೆ. ತಮ್ಮ ಮನೆಗೆ ಕೊಳ್ಳಬೇಕಾಗಿರುವ ಫ್ರಿಜ್‍, ವಾಶಿಂಗ್‍ ಮೆಷೀನ್‍, ಎಲ್‍ಇಡಿ ಟಿವಿ, ಹೆಚ್ಚು ಬೆಲೆಯ ಮೊಬೈಲ್‍ ಫೋನ್‍ ಗಳು, ಲ್ಯಾಪ್ ಟಾಪ್‍ಗಳು ಇಂಥ ಗೃಹೋಪಯೋಗಿ ಹಾಗೂ ಗ್ಯಾಜೆಟ್‍ ಗಳನ್ನು ಕೊಳ್ಳಲು ಬಿಗ್‍ ಬಿಲಿಯನ್‍ ಡೇಸ್‍ ಹಾಗೂ ಗ್ರೇಟ್‍ ಇಂಡಿಯನ್‍ ಫೆಸ್ಟಿವಲ್‍ ಸೇಲ್‍ ಸಂದರ್ಭ ಸುಸಮಯ.

ಈಗ ವಿಷಯ ಏನಪಾ ಅಂದ್ರೆ, ಈ ಸೇಲ್‍ ನ ದಿನಾಂಕ ಘೋಷಣೆ ವಿಷಯದಲ್ಲಿ ಫ್ಲಿಪ್‍ಕಾರ್ಟ್‍ ಹಾಗೂ ಅಮೆಜಾನ್‍ ಎರಡೂ ಒಂದರ ಮೇಲೊಂದು ಬಿದ್ದು ಪೈಪೋಟಿ ನಡೆಸಿವೆ!

Advertisement

ಮೊದಲಿಗೆ 15 ದಿನಗಳ ಹಿಂದೆಯೇ ಫ್ಲಿಪ್‍ ಕಾರ್ಟ್‍ ತನ್ನ ಬಿಗ್‍ ಬಿಲಿಯನ್‍ ಡೇಸ್‍ ಅನ್ನು, ತನ್ನ APP ನಲ್ಲಿ ಕಮಿಂಗ್‍ ಸೂನ್‍ ಎಂದು ಪ್ರಕಟಿಸಿತು. ಅದಾದ ಮೂರ್ನಾಲ್ಕು ದಿನಕ್ಕೆ ಅಮೆಜಾನ್‍ ಕೂಡ ಕಮಿಂಗ್‍ ಸೂನ್‍ ಎಂದು ಹಾಕಿಕೊಂಡಿತು.

ಮೊದಲಿಗೆ ಫ್ಲಿಪ್‍ ಕಾರ್ಟ್‍ ಅಕ್ಟೋಬರ್‍ 7 ರಿಂದ 12 ರವರೆಗೆ ತನ್ನ ಬಿಗ್‍ ಬಿಲಿಯನ್‍ ಡೇಸ್‍ ಮಾರಾಟ ಆರಂಭ ಎಂದು ಪ್ರಕಟಣೆ ಹೊರಡಿಸಿತು. ಈ ಘೋಷಣೆಯ ಬಳಿಕ ಅಮೆಜಾನ್‍ ಇಂಡಿಯಾ, ಅಕ್ಟೋಬರ್‍ 4 ರಿಂದ ತನ್ನ ಗ್ರೇಟ್‍ ಇಂಡಿಯನ್‍ ಫೆಸ್ಟಿವಲ್‍ ಮಾರಾಟ ಪ್ರಕಟಿಸಿತು. ಅಮೆಜಾನ್‍ ಅ.4ರಿಂದಲೇ ಫೆಸ್ಟಿವಲ್‍ ಮಾರಾಟ ಆರಂಭಿಸಿದರೆ, ನಂತರ ಬರುವ ನಮ್ಮ ಬಿಗ್‍ ಬಿಲಿಯನ್‍ ಡೇಸ್‍ ವರೆಗೆ ಜನ ಕಾಯುತ್ತಾರಾ? ಎಂದು ತಿಳಿದ, ಫ್ಲಿಪ್‍ಕಾರ್ಟ್‍ ಅ. 3ರಿಂದ 10 ರವರೆಗೆ ತನ್ನ ಬಿಗ್ ಬಿಲಿಯನ್‍ ಡೇಸ್‍ ಘೋಷಿಸಿತು!

ಇದು ಇಷ್ಟಕ್ಕೇ ನಿಲ್ಲಲಿಲ್ಲ! ಅ. 4ರಿಂದ ತನ್ನ ಗ್ರೇಟ್‍ ಇಂಡಿಯನ್‍ ಡೇಸ್‍ ಪ್ರಕಟಿಸಿದ್ದ ಅಮೆಜಾನ್‍ ಇಂಡಿಯಾ, ಮತ್ತೆ 1 ದಿನ ಹಿಂದಕ್ಕೆ ಹೋಗಿ, ತಾನೂ ಅ. 3ರಿಂದ ಗ್ರೇಟ್‍ ಇಂಡಿಯನ್‍ ಫೆಸ್ಟಿವಲ್‍ ಅನ್ನು ಘೋಷಿಸಿದೆ! ಫ್ಲಿಪ್‍ಕಾರ್ಟ್‍ ಅ. 3ರಿಂದ 10ರವರೆಗೆ ತನ್ನ ವಿಶೇಷ ಮಾರಾಟ ದಿನಾಂಕ ನಿಗದಿಪಡಿಸಿದ್ದರೆ, ಅಮೆಜಾನ್‍ ಮಾತ್ರ ಅ. 3ರಿಂದ ಎಂದು ತಿಳಿಸಿದೆಯೇ ಹೊರತು ಯಾವ ದಿನಾಂಕದವರೆಗೆ ಎಂದು ಪ್ರಕಟಿಸಿಲ್ಲ.

ಮತ್ತೂ ಒಂದು ತಿಳಿಯಬೇಕಾದ ಅಂಶ  ಎಂದರೆ, ಎರಡೂ ಕಂಪೆನಿಗಳ ವಿಶೇಷ ಗ್ರಾಹಕರಿಗೆ ಈ ಸೇಲ್‍ ಗಳು ಒಂದು ದಿನ ಮುಂಚೆಯೇ ಲಭ್ಯವಾಗುತ್ತವೆ. ಅಂದರೆ ಅಮೆಜಾನ್‍ ಪ್ರೈಮ್‍ ಸದಸ್ಯರು ಹಾಗೂ ಫ್ಲಿಪ್‍ ಕಾರ್ಟ್‍ ಪ್ಲಸ್‍ ಸದಸ್ಯರು ಈ ವಿಶೇಷ ಮೇಳದ ಪ್ರಯೋಜನವನ್ನು ಅಕ್ಟೋಬರ್‍ 2 ರಿಂದಲೇ (ಅ.11 ರ ಮಧ್ಯರಾತ್ರಿ 12ರಿಂದ) ಪಡೆಯಬಹುದು.

ಈ ಮೇಳಗಳಲ್ಲಿ ಗೃಹೋಪಯೋಗಿ ಉಪಕರಣಗಳು, ಗ್ಯಾಜೆಟ್‍ ಗಳು ಎಂದಿನ ದರಗಳಿಗಿಂತ ಕಡಿಮೆ ದರಕ್ಕೆ ದೊರಕಲಿವೆ. ಅಲ್ಲದೇ ಫ್ಲಿಪ್‍ಕಾರ್ಟ್‍ ನಲ್ಲಿ ಆಕ್ಸಿಸ್‍ ಹಾಗೂ ಐಸಿಐಸಿಐ ಕ್ರೆಡಿಟ್‍ ಮತ್ತು ಡೆಬಿಟ್‍ ಕಾರ್ಡ್‍ ಮೂಲಕ ಖರೀದಿಗೆ ಶೇ. 10ರಷ್ಟು ತಕ್ಷಣದ ರಿಯಾಯಿತಿ ದೊರಕುತ್ತದೆ. ಅಮೆಜಾನ್‍ನಲ್ಲಿ ಎಚ್‍ಡಿಎಫ್‍ಸಿ ಕ್ರೆಡಿಟ್‍ ಹಾಗೂ ಡೆಬಿಟ್‍ ಕಾರ್ಡ್ ಗೆ ಶೇ. 10ರಷ್ಟು ತಕ್ಷಣದ ರಿಯಾಯಿತಿ ದೊರಕುತ್ತದೆ.

ಕೆ.ಎಸ್‍. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next