ಚಿಕ್ಕಣ್ಣ ಹಾಗು ಶಿಶಿರ್ ಅಭಿನಯದ “ಬಿಲ್‌ಗೇಟ್ಸ್’ ಚಿತ್ರ ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. “ಬಿಲ್‌ಗೇಟ್ಸ್’. ಇದು ಜಗತ್ತಿನ ಸಾಫ್ಟ್ವೇರ್ ಕಂಪೆನಿಯ ಅತಿ ದೊಡ್ಡ ಶ್ರೀಮಂತ ಬಿಲ್‌ಗೇಟ್ಸ್ ಅವರ ಕುರಿತ ಸಿನಿಮಾ ಕಥೆ ಅಂದುಕೊಳ್ಳುವಂತಿಲ್ಲ. ಅವರಿಗೂ ಈ ಚಿತ್ರದ ಶೀರ್ಷಿಕೆಗೂ ಯಾವುದೇ ಸಂಬಂಧವಿಲ್ಲ. ಇಲ್ಲಿ ಆ ಹೆಸರಷ್ಟೇ ಸ್ಪೂರ್ತಿ. ಅದನ್ನು ಇಟ್ಟುಕೊಂಡೇ ನಿರ್ದೇಶಕ ಶ್ರೀನಿವಾಸ್ ನಿರ್ದೇಶನ ಮಾಡಿದ್ದಾರೆ.
ಇಬ್ಬರು ಹುಡುಗರು ತಮ್ಮ ಲೈಫಲ್ಲಿ ದೊಡ್ಡದ್ದಾಗಿ ಸಾಧಿಸಬೇಕು ಅಂತ ಹೊರಡೋದೇ ಸಿನಿಮಾದ ಕಥೆ. ಸದ್ಯಕ್ಕೆ ಚಿತ್ರ ಬಿಡುಗಡೆಗೆ ಅಣಿಯಾಗಿದ್ದು, ಫೆಬ್ರವರಿಯಲ್ಲಿ “ಬಿಲ್‌ಗೇಟ್ಸ್’ ದರ್ಶನವಾಗಲಿದೆ. ಇದು ಇಬ್ಬರು ಗೆಳೆಯರ ಕಥೆ. ಇಲ್ಲಿ ಶಿಶಿರ ಬಿಲ್ ಆಗಿ, ಚಿಕ್ಕಣ್ಣ ಗೇಟ್ಸ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಇದು ಔಟ್ ಅಂಡ್ ಔಟ್ ಎಂಟರ್‌ಟೈನ್‌ಮೆಂಟ್ ಚಿತ್ರ. ಸಮಾಜಕ್ಕೊಂದು ಸಂದೇಶವೂ ಇಲ್ಲಿದೆ.
ಹುಟ್ಟು ತರಲೆ ಹುಡುಗರು, ಹಳ್ಳಿಯಲ್ಲಿ ಸದಾ ಹಾವಳಿ ಇಡುತ್ತಿರುತ್ತಾರೆ. ಅವರಿಗೆ ಆ ಊರಿನಲ್ಲಿ ಒಬ್ಬ ಮಾಸ್ಟರ್ ಸ್ಪೂರ್ತಿಯಾಗುತ್ತಾರೆ. ಅವರಂತೆ, ನಾವೂ ಆಗಬೇಕು ಎಂಬ ಮನಸ್ಸು ಮಾಡುತ್ತಾರೆ. ಹಾಗಾಗಿ, ಸಾಧಿಸಬೇಕು ಅಂತ ಹಳ್ಳಿಯಿಂದ ಬೆಂಗಳೂರಿಗೆ ಬರುತ್ತಾರೆ. ಅಲ್ಲಿ ಏನೆಲ್ಲಾ ಆಗಿ ಹೋಗುತ್ತೆ ಅನ್ನೋದು ಕಥೆ. ಇಲ್ಲಿ ಸಾಕಷ್ಟು ವಿಶೇಷತೆಗಳಿವೆ. ಇದೇ ಮೊದಲ ಬಾರಿಗೆ ಯಮಲೋಕವನ್ನು ಸೃಷ್ಟಿಸಲಾಗಿದೆ. ಅದೊಂದು ಪ್ಯಾಂಟಸಿ. ಈವರೆಗೆ ಆ ಜಾನರ್ ಎಲ್ಲೂ ಬಂದಿಲ್ಲ.
ಕನ್ನಡಕ್ಕೆ ಅದು ಹೊಸತು. ಚಿಕ್ಕಣ್ಣ ಅವರು ಹಿಂದಿನ ಸಿನಿಮಾಗಳಿಗಿಂತಲೂ ಇಲ್ಲಿ ವಿಶೇಷವಾಗಿ ಕಾಣುತ್ತಾರೆ ಎಂಬುದು ನಿರ್ದೇಶಕರ ಮಾತು. ಬೆಂಗಳೂರು, ಮೈಸೂರು, ಮಂಡ್ಯ, ಪಾಂಡವಪುರ, ಕೊಳ್ಳೆಗಾಲ, ಶ್ರೀರಂಗಪಟ್ಟಣ್ಣ ಸುತ್ತಮುತ್ತಲ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕಥೆ ರಾಜಶೇಖರ್ ಬರೆದರೆ, ಸಂಭಾಷಣೆಯನ್ನು ರಾಜಶೇಖರ್ ಹಾಗು ಜಯ ಮಲ್ಲಿಕಾರ್ಜುನ್ ಬರೆದಿದ್ದಾರೆ. ನೊಬಿನ್ ಪೌಲ್ ಸಂಗೀತವಿದೆ. ರಾಕೇಶ್ ಪಿ.ತಿಲಕ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ಅಕ್ಷರಾ ರೆಡ್ಡಿ ಮತ್ತು ರೋಜಾ ನಾಯಕಿಯರು.