ತುಂಬಾ ದಿನಗಳಿಂದ “ಬಿಲ್‌ಗೇಟ್ಸ್’ ಎಂಬ ಸಿನಿಮಾದ ಹೆಸರು ಗಾಂಧಿನಗರದಲ್ಲಿ ಓಡಾಡುತ್ತಲೇ ಇತ್ತು. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇಂದು ತೆರೆಕಾಣುತ್ತಿದೆ. ಚಿಕ್ಕಣ್ಣ ಹಾಗೂ ಶಿಶಿರ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವನ್ನು ಶ್ರೀನಿವಾಸ್ ಸಿ ನಿರ್ದೇಶಿಸಿದ್ದಾರೆ.ಇಲ್ಲಿ ಶಿಶಿರ ಬಿಲ್ ಆಗಿ, ಚಿಕ್ಕಣ್ಣ ಗೇಟ್ಸ್ ಆಗಿಯೂ ಕಾಣಿಸಿಕೊಂಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಶ್ರೀನಿವಾಸ್, “ಇದು ಔಟ್ ಅಂಡ್ ಔಟ್ ಎಂಟರ್‌ಟೈನ್‌ಮೆಂಟ್ ಚಿತ್ರ. ಸಮಾಜಕ್ಕೊಂದು ಸಂದೇಶವೂ ಇಲ್ಲಿದೆ. ಹುಟ್ಟು ತರಲೆ ಹುಡುಗರು, ಹಳ್ಳಿಯಲ್ಲಿ ಸದಾ ಹಾವಳಿ ಇಡುತ್ತಿರುತ್ತಾರೆ. ಅವರಿಗೆ ಆ ಊರಿನಲ್ಲಿ ಒಬ್ಬ ಮಾಸ್ಟರ್ ಸ್ಪೂರ್ತಿಯಾಗುತ್ತಾರೆ. ಅವರಂತೆ, ನಾವೂ ಆಗಬೇಕು ಎಂಬ ಮನಸ್ಸು ಮಾಡುತ್ತಾರೆ. ಹಾಗಾಗಿ, ಸಾಧಿಸಬೇಕು ಅಂತ ಹಳ್ಳಿಯಿಂದ ಬೆಂಗಳೂರಿಗೆ ಬರುತ್ತಾರೆ. ಅಲ್ಲಿ ಏನೆಲ್ಲಾ ಆಗಿ ಹೋಗುತ್ತೆ ಅನ್ನೋದು ಕಥೆ.
ಇಲ್ಲಿ ಸಾಕಷ್ಟು ವಿಶೇಷತೆಗಳಿವೆ. ಇದೇ ಮೊದಲ ಬಾರಿಗೆ ಯಮಲೋಕವನ್ನು ಸೃಷ್ಟಿಸಲಾಗಿದೆ. ಅದೊಂದು ಪ್ಯಾಂಟಸಿ. ಈವರೆಗೆ ಆ ಜಾನರ್ ಎಲ್ಲೂ ಬಂದಿಲ್ಲ. ಕನ್ನಡಕ್ಕೆ ಅದು ಹೊಸತು. ಚಿಕ್ಕಣ್ಣ ಅವರು ಹಿಂದಿನ ಸಿನಿಮಾಗಳಿಗಿಂತಲೂ ಇಲ್ಲಿ ವಿಶೇಷವಾಗಿ ಕಾಣುತ್ತಾರೆ’ ಎಂದು ವಿವರ ಕೊಡುತ್ತಾರೆ ಶ್ರೀನಿವಾಸ್. ನಾಯಕ ಶಿಶಿರ್ ಕೂಡಾ ತಮ್ಮ ಅನಿಸಿಕೆ ಹಂಚಿಕೊಂಡರು. ಒಂದು ಹೊಸ ಬಗೆಯ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸ ಅವರಿಗಿದೆ. ನಾಯಕಿ ರೋಜಾ ಕೂಡಾ ತಮ್ಮ ಅನಿಸಿಕೆ ಹಂಚಿಕೊಂಡರು.
ಚಿತ್ರಕಥೆ ರಾಜಶೇಖರ್ ಬರೆದರೆ, ಸಂಭಾಷಣೆಯನ್ನು ರಾಜಶೇಖರ್ ಹಾಗೂ ಜಯ ಮಲ್ಲಿಕಾರ್ಜುನ್ ಬರೆದಿದ್ದಾರೆ. ನೊಬಿನ್ ಪೌಲ್ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ರಾಜೇಶ್ ಮತ್ತು ಅರುಣ್ ಸಾಹಿತ್ಯವಿದೆ. ಸಂಚಿತ್ ಹೆಗ್ಡೆ ಹಾಗು ವಿಜಯಲಕ್ಷ್ಮಿ ಹಾಡಿದ್ದಾರೆ. ರಾಕೇಶ್ ಪಿ.ತಿಲಕ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಮರಿಸ್ವಾಮಿ ಸಂಕಲನವಿದೆ.
ಚಿತ್ರದಲ್ಲಿ ಅಕ್ಷರಾ ರೆಡ್ಡಿ ಮತ್ತು ರೋಜಾ ನಾಯಕಿಯರಾದರೆ, ಗಿರಿ, ಕುರಿಪ್ರತಾಪ್, ರಾಜಶೇಖರ, ವಿ.ಮನೋಹರ್, ಬ್ಯಾಂಕ್ ಜನಾರ್ದನ್, ರಾಜೇಶ್ ನಟರಂಗ ಇತರರು ನಟಿಸಿದ್ದಾರೆ. ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಡಿ ಗೆಳೆಯರು ಸೇರಿ “ಬಿಲ್‌ಗೇಟ್ಸ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ, ಪಾಂಡವಪುರ, ಕೊಳ್ಳೆಗಾಲ, ಶ್ರೀರಂಗಪಟ್ಟಣ್ಣ ಸುತ್ತಮುತ್ತಲ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ