Advertisement

ಜನಾರ್ದನ ಪೂಜಾರಿ, ಬಿಲ್ಲವರಿಗೆ ಕಾಂಗ್ರೆಸ್‌ನಿಂದ ಅವಗಣನೆ ಆಗಿಲ್ಲ: ಸಂತೋಷ್‌ ಜೆ. ಪೂಜಾರಿ

10:26 AM Apr 13, 2019 | Team Udayavani |

ಮಂಗಳೂರು: “ಕಾಂಗ್ರೆಸ್‌ ಪಕ್ಷ ಬಿಲ್ಲವ ಸಮುದಾಯವನ್ನು ಅಥವಾ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರನ್ನು ಯಾವುದೇ ಕಾರಣಕ್ಕೂ ಅವಗಣಿಸಿಲ್ಲ. ತಂದೆಯವರಿಗೆ ಚುನಾವಣಾ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಆಗದಿರುವ ಕಾರಣ ಅವರ ಪರವಾಗಿ ಕಳೆದ ಒಂದು ವಾರದಿಂದ ನಾನು ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಭರ್ಜರಿ ಗೆಲುವು ಪಡೆಯಲಿದ್ದಾರೆ’ ಎಂದು ಜನಾರ್ದನ ಪೂಜಾರಿ ಅವರ ಪುತ್ರ ಸಂತೋಷ್‌ ಜೆ. ಪೂಜಾರಿ ಹೇಳಿದರು.

Advertisement

ಮಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ದೇವರಾಯ ನಾಯ್ಕ, ವಿನಯ ಕುಮಾರ್‌ ಸೊರಕೆ, ಆರ್‌.ಎಲ್‌. ಜಾಲಪ್ಪ, ಜನಾರ್ದನ ಪೂಜಾರಿ, ಎಸ್‌. ಬಂಗಾರಪ್ಪ ಮತ್ತು ಈ ಚುನಾವಣೆಯಲ್ಲಿ ಬಿ.ಕೆ. ಹರಿಪ್ರಸಾದ್‌, ಮಧು ಬಂಗಾರಪ್ಪ ಅವರಿಗೆ ಕಾಂಗ್ರೆಸ್‌ ಅವಕಾಶ ನೀಡಿದೆ. ಕಾಂಗ್ರೆಸ್‌ ಪಕ್ಷ ಆರಂಭದಿಂದಲೂ ಬಿಲ್ಲವ, ಈಡಿಗ ಸಹಿತ ಹಿಂದುಳಿದ ವರ್ಗಗಳಿಗೆ ಬೆಂಬಲ ನೀಡಿದೆ. ಆದ್ದರಿಂದ ಜನಾರ್ದನ ಪೂಜಾರಿ ಅವರ ಕನಸು ನನಸು ಮಾಡಲು ಸಾರ್ವಜನಿಕರು, ಅವರ ಹಿತೈಷಿಗಳು ಯುವಜನರು ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಬೇಕಿದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ದ.ಕ.ದ ಅಗತ್ಯಗಳ ಬಗ್ಗೆ ಸಂಸತ್‌ನಲ್ಲಿ ಸಮರ್ಥವಾಗಿ ಧ್ವನಿ ಎತ್ತಬಲ್ಲ ಸಾಮರ್ಥ್ಯವಿರುವ ಸುಶಿಕ್ಷಿತ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಅವರಿಗೆ ನಾವೆಲ್ಲ ಬೆಂಬಲ ನೀಡಿದ್ದೇವೆ. ಕಳೆದ 28 ವರ್ಷಗಳಲ್ಲಿ ಜಿಲ್ಲೆಯಲ್ಲಿ ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕಳೆದ 5 ವರ್ಷಗಳಲ್ಲಿ ಅಭಿವೃದ್ಧಿ ಬದಲು ಕರಾವಳಿಯ ಆರ್ಥಿಕ, ಔದ್ಯೋಗಿಕ ವ್ಯವಸ್ಥೆಗಳನ್ನು ತಲ್ಲಣಗೊಳಿಸುವ ನೀತಿಗಳನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ. ಇದರಿಂದ ಇಲ್ಲಿನ ವಾಣಿಜ್ಯ, ಸಣ್ಣ ವ್ಯಾಪಾರ ಕ್ಷೇತ್ರಗಳಲ್ಲಿ ಅಪಾರ ನಷ್ಟ ಮತ್ತು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಜಿಲ್ಲೆಯಿಂದ ಔದ್ಯೋಗಿಕ ವಲಸೆ ಉಂಟಾಗಿದ್ದು, ಯುವ ಪೀಳಿಗೆಗೆ ಜಿಲ್ಲೆಯಲ್ಲೇ ಉದ್ಯೋಗ ನೀಡಬೇಕು ಎಂಬುದು ತಂದೆಯವರ ಆಶೆಯಾಗಿದೆ. ಅದಕ್ಕೆ ಪೂರಕವಾದ ಮೂಲ ಸೌಕರ್ಯಗಳ ಕೊರತೆ ಇಲ್ಲಿದೆ. ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ಕಿರು ಕೈಗಾರಿಕೆಗಳು ಅಭಿವೃದ್ಧಿಯಾಗಿಲ್ಲ ಎಂದರು.
ಚುನಾವಣಾ ಪ್ರಚಾರ ಕಾರ್ಯದಲ್ಲಿ ಮುಂದೆಯೂ ನಾನು ತೊಡಗಿಸಿ ಕೊಳ್ಳಲಿದ್ದು, ರಾಜಕೀಯಕ್ಕೆ ಬರುವ ಯಾವುದೇ ಯೋಚನೆ ಸದ್ಯಕ್ಕಿಲ್ಲ. ಒಂದು ವೇಳೆ ಮುಂದೆ ಅಂತಹ ಪರಿಸ್ಥಿತಿ ಎದುರಾದರೆ ಆ ಸಂದರ್ಭದಲ್ಲಿ ನೋಡೋಣ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಿರಿಯ ಸ್ಥಾನದಲ್ಲಿದ್ದು ಆಶೀರ್ವಾದ!
ಸಂತೋಷ್‌ ಜೆ. ಪೂಜಾರಿ ಮಾತನಾಡಿ, ಕುದ್ರೋಳಿ ಕ್ಷೇತ್ರಕ್ಕೆ ಬಂದು ನಳಿನ್‌ ಅವರು ತಮ್ಮ ತಂದೆ ಜನಾರ್ದನ ಪೂಜಾರಿ ಅವರ ಆಶೀರ್ವಾದ ಬಯಸಿದಾಗ ಸಹಜವಾಗಿ ತಂದೆ ಆಶೀರ್ವಾದ ಮಾಡಿದ್ದಾರೆ. ಮೋದಿ ಬಗ್ಗೆ ಆಗ ಮಾತನಾಡಿದ್ದಾರೆ. ಇದಕ್ಕೆ ಯಾವುದೇ ಬೇರೆ ಅರ್ಥ ಕಲ್ಪಿಸಬೇಕಾದ ಅಗತ್ಯವಿಲ್ಲ. ಆದರೆ ಆ ಬಳಿಕ ಕಾಂಗ್ರೆಸ್‌ ಸಮಾವೇಶದಲ್ಲಿ ತಮ್ಮ ಮನಸ್ಸಿನಲ್ಲಿದ್ದ ಭಾವನೆಯನ್ನು ಜನಾರ್ದನ ಪೂಜಾರಿ ಅವರು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಗೆ ಪೂರ್ಣ ಬೆಂಬಲವನ್ನೂ ಘೋಷಿಸಿದ್ದಾರೆ. ಈಗ ಯುವಕರಲ್ಲಿ ಹುಮ್ಮಸ್ಸಿದ್ದು, ಲೋಕಸಭೆಯಲ್ಲಿ ಕರಾವಳಿಯನ್ನು ಪ್ರತಿನಿಧಿಸುವ ತಾಕತ್ತು ಮಿಥುನ್‌ ರೈ ಅವರಲ್ಲಿದೆ ಎಂದು ಜನಾರ್ದನ ಪೂಜಾರಿ ಅವರು ಕೂಡ ಹೇಳಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next