Advertisement

ಬಿಲ್ಲವರ ಅಸೋಸಿಯೇಶನ್‌:ವಿದ್ಯಾರ್ಥಿ ವೇತನ ವಿತರಣೆ, ದತ್ತು ಸ್ವೀಕಾರ

04:43 PM Sep 11, 2018 | Team Udayavani |

 ನವಿಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ವಾರ್ಷಿಕ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಮತ್ತು ಶೈಕ್ಷಣಿಕ ದತ್ತು ಸ್ವೀಕಾರ ಕಾರ್ಯಕ್ರಮವು ಸೆ. 8ರಂದು ಅಪರಾಹ್ನ ಸಾಂತಾಕ್ರೂಜ್‌ ಪೂರ್ವದ ಬಿಲ್ಲವರ ಭವನದ  ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ನೆರವೇರಿತು.
ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ  ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು. ಮುಖ್ಯ ಅತಿಥಿಯಾಗಿ ಕೈಗಾರಿಕೋದ್ಯಮಿ ಸತೀಶ್‌ ಎಚ್‌. ಪೂಜಾರಿ, ಗೌರವ ಅತಿಥಿಯಾಗಿ ಭಾರತ್‌ ಬ್ಯಾಂಕಿನ  ನಿರ್ದೇಶಕ ಭಾಸ್ಕರ ಎಂ. ಸಾಲ್ಯಾನ್‌ ಅವರು ಉಪಸ್ಥಿತರಿದ್ದರು.

Advertisement

ಮುಖ್ಯ ಅತಿಥಿ ಸತೀಶ್‌ ಪೂಜಾರಿ ಅವರು ಮಾತನಾಡಿ, ನಾವು ಯಾವ ಕ್ಷೇತ್ರವನ್ನು ಆಯ್ಕೆ ಮಾಡುತ್ತೇವೆ ಅದೇ ಕ್ಷೇತ್ರದಲ್ಲಿ ನಾವು ಸಾಧನೆ ಮಾಡಬೇಕು. ಜೀವನದಲ್ಲಿ ಮಾನವೀಯತೆ,  ನಂಬಿಕೆ, ಆತ್ಮ ಗೌರವ, ಆತ್ಮ ವಿಶ್ವಾಸವನ್ನು ಬೆಳೆಸಿಕೊಂಡಾಗ ಸಾಧನೆಗಳನ್ನು ಮಾಡಲು ಸಾಧ್ಯ. ಇದೆಲ್ಲಾ ನಮ್ಮಲ್ಲಿ ಅಳವಡಿಸಿದಾಗ ನಾವೂ ನಮ್ಮ ಗುರಿಯನ್ನು ಸಾಧಿಸಲು ಅನುಕೂಲವಾಗುತ್ತದೆ. ಹಣದ ಹಿಂದೆ ಹೋಗುವುದಕ್ಕಿಂತ ಜ್ಞಾನ ಸಂಪಾದನೆಯಾದರೆ ಎಲ್ಲವೂ ದೊರಕಿದಂತೆ. ಸರಸ್ವತಿಯನ್ನು ಪೂಜಿಸಿದರೆ ಲಕ್ಷ್ಮೀ ಪ್ರಸಿದ್ಧಿಯಾಗುತ್ತದೆ. ಅಸೋಸಿಯೇಶನ್‌ನ ಇಂತಹ ಯೋಜನೆಗಳ ಸದುಪಯೋಗವನ್ನು ಅರ್ಹ ಸಮಾಜ ಬಾಂಧವರು ಪಡೆದುಕೊಂಡು ಭವಿಷ್ಯದಲ್ಲಿ ಇನ್ನೊಬ್ಬರಿಗೆ ಸಹಕರಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು.
ಮಕ್ಕಳ ಭವಿಷ್ಯ ರೂಪಿಸುವ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ. ನಮ್ಮ ಕಾಲದಲ್ಲಿ ನಮಗೆ ಯಾವ ಸೌಕರ್ಯ, ಯಾರ ಬೆಂಬಲವೂ ಇರಲಿಲ್ಲ. ನಾವೂ ಬಹಳಷ್ಟು ಕಷ್ಟಪಟ್ಟು ಮುಂದೆ ಬಂದಿದ್ದೇವೆ. ಆದರೆ ಈಗ ಎಲ್ಲಾ ತರದ ಸೌಲಭ್ಯಗಳು ಲಭ್ಯವಾಗಿವೆ. ಆದರ ಸದುಪಯೋಗ ಪಡೆಯಬೇಕು. ಅಸೋಸಿಯೇಶನ್‌ನ ಎಲ್ಲಾ 22 ಸ್ಥಳೀಯ ಕಚೆೇರಿಗಳಲ್ಲಿಯೂ ಮಕ್ಕಳಿಗೆ ಅನುಕೂಲವಾಗುವಂತಹ ಸಹಾಯ ಲಭ್ಯವಿದೆ. ಸಾಧನೆ ಮಾಡುವ ಗುರಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದ‌ು ಇನ್ನೋರ್ವ ಅತಿಥಿ ಭಾಸ್ಕರ ಎಂ. ಸಾಲ್ಯಾನ್‌ ತಿಳಿಸಿದರು.

ಸಹಾಯಹಸ್ತ ಸದುಪಯೋಗವಾಗಲಿ
ಅಸೋಸಿಯೇಶನ್‌ನ ಉಪಾಧ್ಯಕ್ಷ‌ ಹರೀಶ್‌ ಜಿ. ಅಮೀನ್‌ ಅವರು ಮಾತನಾಡಿ,  ಬಿಲ್ಲವರ ಅಸೋಸಿಯೇಶನ್‌ ಇಂತಹ ಶೈಕ್ಷಣಿಕ ನೆರವು ನೀಡುತ್ತಿರುವುದು  ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯೋಗವಾಗುತ್ತಿದೆ. ನಾವೂ ತುಂಬಾ ಪರಿಶ್ರಮಪಟ್ಟು ಈ ಮಟ್ಟಕ್ಕೆ ಬಂದಿದ್ದೇವೆ. ಸಾಧನೆ ಗುರಿ ನಮ್ಮದಾಗಬೇಕು. ಸಹಾಯಹಸ್ತ ಸದುಪಯೋಗ ಒಳ್ಳೆಯ ರೀತಿಯಲ್ಲಿ ಆಗಬೇಕು. ಪರಿಶ್ರಮ, ಸಮರ್ಪಣೆ ನಿಮ್ಮದಾಗಬೇಕು. ಆವಾಗಲೇ ಜೀವನದಲ್ಲಿ ಸಾಧನೆ ಸಿದ್ಧಿಯಾಗುವುದು ಎಂದು ನುಡಿದರು.

ಅಸೋಸಿಯೇಶನ್‌ನ ಉಪಾಧ್ಯಕ್ಷ‌ ಶಂಕರ ಡಿ. ಪೂಜಾರಿ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್‌ ಜೆ. ಬಂಗೇರ, ಮಹಿಳಾ ವಿಭಾಗಾಧ್ಯಕ್ಷೆ  ಜಯಂತಿ ವಿ. ಉಳ್ಳಾಲ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಇದೇ ಸಂದರ್ಭದಲ್ಲಿ  ಬಂಟ್ಸ್‌ ಸಂಘದ ಎಸ್‌ಎಂ ಶೆಟ್ಟಿ ಕಾಲೇಜ್‌ ಪೊವಾಯಿ ಇದರ ಪ್ರಾಂಶುಪಾಲ  ಡಾ| ಶ್ರೀಧರ್‌ ಶೆಟ್ಟಿ ಅವರು ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗಾಗಿ ಸ್ವಜ್ಞಾನಾಭಿವೃದ್ಧಿ ವಿಚಾರಿತ ಉಪನ್ಯಾಸ ನೀಡಿದರು.

ಲೇಖಾ ಸುವರ್ಣ ಪ್ರಾರ್ಥನೆಗೈದರು. ವಿದ್ಯಾ ಉಪ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್‌ ತೋನ್ಸೆ ಸ್ವಾಗತಿಸಿದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್‌. ಕೋಟ್ಯಾನ್‌ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಸಮಿತಿಯ ಗೌರವ ಕಾರ್ಯದರ್ಶಿ ಹರೀಶ್‌ ಜಿ. ಸಾಲ್ಯಾನ್‌ ವಂದಿಸಿದರು. ಸಮಾರಂಭದಲ್ಲಿ ಆರ್ಥಿಕವಾಗಿ ಹಿಂದುಳಿದ ನೂರಾರು ಮಕ್ಕಳ ಶೈಕ್ಷಣಿಕ ದತ್ತು ಸ್ವೀಕಾರ, ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆಯಿತು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

Advertisement

ಜಯ ಸಿ. ಸುವರ್ಣ  ಅವರ ಮಾರ್ಗದರ್ಶನದಿಂದ ಬಿಲ್ಲವರ ಅಸೋಸಿಯೇಶನ್‌ ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜದ ಮಕ್ಕಳಿಗೆ ಸಹಾಯ ನೀಡುತ್ತಿದೆ. ಸುಮಾರು ಮಕ್ಕಳು ಇವತ್ತು ಸಿಎ, ಎಂಜಿನಿಯರಿಂಗ್‌, ಡಾಕ್ಟರ್‌ ಸೇರಿದಂತೆ ಅನೇಕ ಒಳ್ಳೆಯ ಹುದ್ದೆಗಳನ್ನು ಅಲಂಕರಿಸಿಕೊಂಡಿದ್ದಾರೆ.  ಅಸೋಸಿಯೇಶನ್‌ನಿಂದ ಸಹಾಯ ಪಡೆದು ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳು ಮುಂದಿನ ಪೀಳಿಗೆಗೆ ಸಹಾಯ ಮಾಡಬೇಕು. ಐಕ್ಯತೆ ಮತ್ತು ಒಗ್ಗಟ್ಟು ನಮ್ಮಲ್ಲಿದ್ದಾಗ ಸಂಘಟನೆಯು ಮತ್ತಷ್ಟು ಬಲಗೊಳ್ಳುತ್ತದೆ. ಅಸೋಸಿಯೇಶನ್‌ನ ಮೇಲೆ ಪ್ರೀತಿ ಇರಬೇಕು. ಎಲ್ಲ  ಮಕ್ಕಳು ಬಿಲ್ಲವರ ಅಸೋಸಿಯೇಶನ್‌ನ ಸದಸ್ಯರಾಗಬೇಕು.

ಚಂದ್ರಶೇಖರ ಎಸ್‌. ಪೂಜಾರಿ , ಅಧ್ಯಕ್ಷರು: ಬಿಲ್ಲವರ ಅಸೋ. ಮುಂಬಯಿ

ಚಿತ್ರ-ವರದಿ: ರೊನಿಡಾ ಮುಂಬಯಿ 

Advertisement

Udayavani is now on Telegram. Click here to join our channel and stay updated with the latest news.

Next