ಮುಂಬಯಿ: ಸಂಘದ ಕಾರ್ಯಚಟು ವಟಿಕೆಗಳಲ್ಲಿ ಯುವ ಜನರು ಸಕ್ರಿಯರಾದರೆ ಸಂಘ ಉತ್ತಮ ರೀತಿಯಲ್ಲಿ ಬೆಳೆಯಲು ಸಾಧ್ಯ. ತಮ್ಮಲ್ಲಿರುವ ಪ್ರತಿಭೆ ತೋರಿಸಲು ಸಂಘ ವೇದಿಕೆ ನೀಡುತ್ತ ಬಂದಿದೆ. ಕಳೆದ 35 ವರ್ಷಗಳಿಂದ ಸಮಾಜಪರ ಕಾರ್ಯಗಳೊಂದಿಗೆ ಕುಂದಾಪುರ ಬಿಲ್ಲವ ಸೇವಾ ಸಂಘ ಮುಂಬಯಿಯಲ್ಲಿ ಪ್ರತಿಷ್ಠಿತ ಸಮುದಾಯದ ಸಂಘವಾಗಿ ಬೆಳೆದಿದೆ ಎನ್ನಲು ಸಂತೋಷವಾಗುತ್ತಿದೆ. ಆದಷ್ಟು ಬೇಗನೆ ನಮ್ಮೆಲ್ಲರ ಕನಸಿನ ಭವನ ನಿರ್ಮಾಣವಾಗು ವಂತೆ ಆಗಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಅಧ್ಯಕ್ಷ ಸೂರ್ಯ ಎಸ್. ಪೂಜಾರಿ ತಿಳಿಸಿದರು.
ದಾದರ್ ಪೂರ್ವದ ಹಿಂದೂ ಕಾಲನಿಯ ಇಂಡಿಯನ್ ಎಜುಕೇಶನ್ ಸೊಸೈಟಿಯ ಸಭಾಗೃಹದಲ್ಲಿ ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಇದರ 34ನೇ ವಾರ್ಷಿಕ ಮಹಾಸಭೆ ಹಾಗೂ ಬಳಿಕ ಜರಗಿದ ವಾರ್ಷಿಕೋತ್ಸವ, ಸಮ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದೆರಡು ವರ್ಷಗಳಿಂದ ಸಂಘವು ಬಹುದೊಡ್ಡ ರೀತಿಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸದಿದ್ದರೂ ಸಮಾಜ ಬಾಂಧವರಿಗೆ ಸಹಾಯವಾಗುವಂತಹ ಅನೇಕ ಕಾರ್ಯಚಟುವಟಿಕೆಗಳನ್ನು ನಿರಂತರ ಮಾಡುತ್ತಾ ಬಂದಿದೆ ಎಂದರು.
ಸಮ್ಮಾನ ಸ್ವೀಕರಿಸಿದ ಮುಖ್ಯ ಅತಿಥಿ, ನ್ಯಾಯವಾದಿ ಶಾಕುಂತಲಾ ಆನಂದ್ ಪೂಜಾರಿ ಮಾತನಾಡಿ, ನಮ್ಮ ಸಂಸ್ಥೆ ಉತ್ತಮ ರೀತಿಯಲ್ಲಿ ಬೆಳೆಯುತ್ತಿದ್ದು, ಸಂಘಕ್ಕೊಂದು ಭವನ ನಿರ್ಮಾಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಆಡಳಿತ ಸಮಿತಿ ಹಾಗೂ ಸಮಾಜದ ಮುಖಂಡರು ಶ್ರಮಿಸಬೇಕು. ಸಮಾಜದ ಎಲ್ಲರೂ ಸಹಕಾರ ನೀಡಬೇಕು ಎಂದರು.
ಗೌರವ ಅತಿಥಿಯಾಗಿದ್ದ ಉದ್ಯಮಿ, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ ಮಾತನಾಡಿ, ಸಂಘ-ಸಂಸ್ಥೆಗಳಿಗೆ ನಾವು ದೇಣಿಗೆ ನೀಡಿದರೆ ಸಮಾಜಪರ ಕಾರ್ಯಗಳಿಗೆ ಸಹಾಯವಾಗುತ್ತದೆ. ನಮ್ಮ ಸಂಸ್ಥೆಗೆ ನಮ್ಮದೇ ಆದ ಭವನ ನಿರ್ಮಿಸಿದರೆ ಮುಂದೆ ಅದರಿಂದ ಬರುವ ಉತ್ಪತ್ತಿಯು ಸಮಾಜ ಬಾಂಧವರ ಒಳಿತಿಗಾಗಿ ಉಪಯೋಗಿಸಬಹುದು. ಕುಂದಾಪುರ ಬಿಲ್ಲವ ಸೇವಾ ಸಂಘದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳ ನಿರಂತರ ಪರಿಶ್ರಮದಿಂದ ಈ ಸಂಸ್ಥೆ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಯುವಜನರು ಹಾಗೂ ಮಹಿಳೆಯರು ಹೆಚ್ಚು ಆಕರ್ಷಿತರಾಗಿ ನಮ್ಮ ಸಂಘದಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡುವಾಗ ಸಂತೋಷವಾಗುತ್ತಿದೆ. ಇದು ಒಂದು ಉತ್ತಮ ಬೆಳವಣಿಗೆ ಎಂದರು.
ಸಮ್ಮಾನ ಸ್ವೀಕರಿಸಿದ ಅತಿಥಿ, ಉದ್ಯಮಿ ತಿಮ್ಮಪ್ಪ ಸಿ. ಪೂಜಾರಿ ಬಂಗಲೆಮನೆ, ಸಾಗರ್ ಕೋ – ಆಪರೇಟಿವ್ ಕ್ರೆಡಿಟ್ ಸೊಸೈಟಿ ಬೈಂದೂರು ಇದರ ನಿರ್ದೇಶಕ ಕೇಶವ ಜೆ. ಪೂಜಾರಿ ಉಪ್ಪುಂದ, ಅರುಣ್ ಟೆಕ್ಸ್‌ಟೈಲ್ಸ್‌ನ ಮಾಲಕ ವಿಶ್ವನಾಥ ಪೂಜಾರಿ, ಮುಂಬಯಿ ಉದ್ಯಮಿ ಸುರೇಶ್ ಸಿ. ಪೂಜಾರಿ ಬಡಕೆರೆ ನಾವುಂದ, ಮುಂಬಯಿ ಉದ್ಯಮಿ ರಮೇಶ್ ಎ. ಬಿಲ್ಲವ, ಉದ್ಯಮಿ ಪರಮೇಶ್ವರಿ ಎನ್. ಪೂಜಾರಿ, ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಮಾಜಿ ಅಧ್ಯಕ್ಷರಾದ ಎನ್. ಜಿ. ಪೂಜಾರಿ ಹಾಗೂ ಎಸ್. ಕೆ. ಪೂಜಾರಿ ಶುಭ ಹಾರೈಸಿದರು. ಸಮಾರಂಭದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.
ಅತಿಥಿಗಳು ದೀಪಪ್ರಜ್ವಲಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೀತಾ ಪೂಜಾರಿ ಬೈಂದೂರು ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ನರಸಿಂಹ ಬಿಲ್ಲವ ಅತಿಥಿಗಳನ್ನು ಸ್ವಾಗತಿಸಿದರು, ಕಾರ್ಯದರ್ಶಿ ಅಶೋಕ್ ಎನ್. ಪೂಜಾರಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ನ್ಯಾಯವಾದಿ ಶಾಕುಂತಲಾ ಆನಂದ್ ಪೂಜಾರಿ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ಅರುಣಾ ಟೆಕ್ಸ್‌ಟೈಲ್ಸ್‌ನ ವಿಶ್ವನಾಥ ಎ. ಪೂಜಾರಿ, ಉದ್ಯಮಿ ಸುರೇಶ್ ಸಿ. ಪೂಜಾರಿ ಬಡಕೆರೆ ನಾವುಂದ, ಮುಂಬಯಿ ಉದ್ಯಮಿ ಪರಮೇಶ್ವರ ಎನ್.ಪೂಜಾರಿ, ಮಾಜಿ ಅಧ್ಯಕ್ಷರಾದ ಎನ್. ಜಿ. ಪೂಜಾರಿ, ಎಸ್. ಕೆ. ಪೂಜಾರಿ ಅವರನ್ನು ಸಂಘದ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ ಹಾಗೂ ಸಮ್ಮಾನ ಪತ್ರದೊಂದಿಗೆ ಗೌರವಿಸಲಾಯಿತು.
ಸಮಿತಿ ಸದಸ್ಯ ಲಕ್ಷ್ಮಣ್ ಎಂ. ಪೂಜಾರಿ ಕೋಡೇರಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಶ್ರೀಧರ ವಿ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ದೀಪ ವೈ. ಪೂಜಾರಿ, ಧಾರ್ಮಿಕ ಸಮಿತಿಯ ಕಾರ್ಯಾಧ್ಯಕ್ಷ ನಾಗರಾಜ್ ಎಂ. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಸಮಾಜದ ಮಕ್ಕಳಿಂದ ಹಾಗೂ ಮಹಿಳೆಯರಿಂದ ವಿವಿಧ ಮನೋರಂಜನ ಕಾರ್ಯಕ್ರಮಗಳು ಜರಗಿದವು. ಸಮಿತಿಯ ಸರ್ವ ಸದಸ್ಯರು, ಪದಾಧಿಕಾರಿಗಳು, ಉಪ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
-ಚಿತ್ರ-ವರದಿ: ಸುಭಾಷ್ ಶಿರಿಯಾ