Advertisement

ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ

12:33 AM Jan 27, 2022 | Team Udayavani |

ಮಂಗಳೂರು: ಗಣರಾಜ್ಯೋತ್ಸವ ಪರೇಡ್‌ಗೆ ನಾರಾಯಣ ಗುರುಗಳ ಮೂರ್ತಿ ಇದ್ದ ಕೇರಳ ಸರಕಾರದ ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿದ್ದನ್ನು ಖಂಡಿಸಿ ಬುಧವಾರ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಾರಾಯಣಗುರುಗಳ ಮೂರ್ತಿಯನ್ನು ಒಳಗೊಂಡ ಸ್ತಬ್ಧಚಿತ್ರ ಜಾಥಾ ನಡೆಯಿತು.

Advertisement

ಬಿಲ್ಲವ ಸಂಘಗಳು ಮತ್ತು ಸಂಘಟನೆಗಳು ಹಾಗೂ ಬಿಲ್ಲವ ಸಮಾಜದ ವತಿಯಿಂದ ನಡೆದ ಈ ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾಕ್ಕೆ ಜನಾರ್ದನ ಪೂಜಾರಿ ಅವರು ಕಂಕನಾಡಿಯ ಗರಡಿ ಶ್ರೀ ಬೈದರ್ಕಳ ಕ್ಷೇತ್ರದಲ್ಲಿ ಚಾಲನೆ ನೀಡಿದರು. ಮಾಜಿ ಶಾಸಕ ವಸಂತ ಬಂಗೇರ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌, ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್‌, ವಿವಿಧ ಸಂಘಟನೆಗಳ ಮುಖಂಡರಾದ ಎಂ.ಬಿ. ಪುರಾಣಿಕ್‌, ಶರಣ್‌ ಪಂಪ್‌ವೆಲ್‌, ಸಂದೀಪ್‌ ಗರೋಡಿ ಉಪಸ್ಥಿತರಿದ್ದರು.

ಜಾಥಾವು ಪಂಪ್‌ವೆಲ್‌, ಜ್ಯೋತಿ ಜಂಕ್ಷನ್‌, ಹಂಪನಕಟ್ಟೆ, ಪಿವಿಎಸ್‌ ಜಂಕ್ಷನ್‌, ಮಣ್ಣಗುಡ್ಡ ಮಾರ್ಗವಾಗಿ ಕುದ್ರೋಳಿ ಕ್ಷೇತ್ರದಲ್ಲಿ ಸಮಾಪನಗೊಂಡಿತು.

ನಗರದ ವಿವಿಧೆಡೆಗಳಿಂದ ಹಲವು ತಂಡಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರ / ಮೂರ್ತಿ ಇರುವ ಟ್ಯಾಬ್ಲೊಗಳೊಂದಿಗೆ ಲೇಡಿಹಿಲ್‌ನಲ್ಲಿ ಈ ಜಾಥಾದಲ್ಲಿ ಸೇರಿಕೊಂಡವು. ಲೇಡಿಹಿಲ್‌ನಿಂದ ಕುದ್ರೋಳಿ ಕ್ಷೇತ್ರದ ತನಕ ಸ್ವಾಭಿಮಾನದ ನಡಿಗೆ ನಡೆದಿದ್ದು, ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ದಾರಿಯುದ್ದಕ್ಕೂ ಹಳದಿ ಧ್ವಜ, ಬಂಟಿಂಗ್‌ಗಳಿಂದ ಶೃಂಗರಿಸಲಾಗಿತ್ತು. ಯಾವುದೇ ರಾಜಕೀಯ ಪಕ್ಷಗಳ ಧ್ವಜ ಇಲ್ಲದೆ ಕೇವಲ ಹಳದಿ ಬಟ್ಟೆಯ ಧ್ವಜ ಮತ್ತು ಶಾಲುಗಳನ್ನು ಧರಿಸಿದ್ದು ವಿಶೇಷ.

Advertisement

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಟ್ರಸ್ಟಿ ಶೇಖರ್‌ ಪೂಜಾರಿ, ಡಾ| ಬಿ.ಜಿ. ಸುವರ್ಣ, ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್‌ ಸುರತ್ಕಲ್‌, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್‌, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಮುಖಂಡರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್‌, ಜೆ.ಆರ್‌. ಲೋಬೋ, ಐವನ್‌ ಡಿ’ಸೋಜಾ, ಮಿಥುನ್‌ ರೈ, ಶಕುಂತಳಾ ಶೆಟ್ಟಿ, ಮಮತಾ ಗಟ್ಟಿ, ಶಾಲೆಟ್‌ ಪಿಂಟೋ, ಬಿರುವೆರ್‌ ಕುಡ್ಲ ಸಂಘಟನೆಯಲಕ್ಷೀಶ್, ದೀಪು ಶೆಟ್ಟಿಗಾರ್‌, ಅಕ್ಷಿತ್‌ ಸುವರ್ಣ, ವಿಶ್ವಾಸ್‌ ಕುಮಾರ್‌ ದಾಸ್‌, ಶಶಿಧರ ಹೆಗ್ಡೆ, ಭಾಸ್ಕರ ಮೊಲಿ, ನವೀನ್‌ ಡಿ’ಸೋಜಾ, ಲಾರೆನ್ಸ್‌ ಡಿ’ಸೋಜಾ ಭಾಗವಹಿಸಿದ್ದರು.

ಇದನ್ನೂ ಓದಿ:ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜು

ಗುರುಗಳು ಆಶೀರ್ವದಿಸಲಿ
ಸಮಾರೋಪದಲ್ಲಿ ಜನಾರ್ದನ ಪೂಜಾರಿ ಮಾತನಾಡಿ, ನಾರಾಯಣ ಗುರುಗಳ ಆಶೀರ್ವಾದ ನಮ್ಮ ಮೇಲಿರಲಿ. ದೇವರು ಒಳ್ಳೆಯದನ್ನೇ ಮಾಡುತ್ತಾರೆ ಎಂದರು.

ಮಾತು ಆರಂಭಿಸಿದಾಗ ಭಾವುಕರಾದ ಜನಾರ್ದನ ಪೂಜಾರಿ, ಹೆಚ್ಚು ಮಾತನಾಡಲು ನನಗೆ ಶಕ್ತಿ ಇಲ್ಲ. ಕ್ಷಮಿಸಬೇಕು; ಶಕ್ತಿ ಬಂದಾಗ ಇನ್ನೊಮ್ಮೆ ಮಾತನಾಡುತ್ತೇನೆ ಎಂದರು.

ಜಾಥಾ ಮಾಡಿದ್ದೇಕೆ?
ಕ್ಷೇತ್ರದ ಆಡಳಿತ ಸಮಿತಿಯ ಕೋಶಾ ಧಿಕಾರಿ ಪದ್ಮರಾಜ್‌, ಗಣರಾಜ್ಯೋತ್ಸವ ಪರೇಡ್‌ಗೆ ಕೇರಳ ಸರಕಾರ ಕಳುಹಿಸಿದ್ದ ಸ್ತಬ್ಧಚಿತ್ರವನ್ನು ಕೇಂದ್ರ ಸರಕಾರದ ಆಯ್ಕೆ ಸಮಿತಿ ನೇರವಾಗಿ ತಿರಸ್ಕರಿಸಿದ್ದರೆ ನಮಗೆ ನೋವಾಗುತ್ತಿರಲಿಲ್ಲ. ಬದಲಾಗಿ ಸ್ತಬ್ಧಚಿತ್ರದ ಪರಿಕಲ್ಪನೆಯನ್ನು ಒಪ್ಪಿ ನಾರಾಯಣಗುರುಗಳ ಪ್ರತಿಮೆಯನ್ನು ತೆಗೆದು ಅಲ್ಲಿ ಶಂಕರಾಚಾರ್ಯರ ಪ್ರತಿಮೆ ಅಳವಡಿಸಬೇಕೆಂದು ಹೇಳಿರುವುದು ನೋವುಂಟು ಮಾಡಿದೆ. ಹಾಗಾಗಿ ಈ ಜಾಥಾ ಸಂಘಟಿಸ ಬೇಕಾಯಿತು ಎಂದರು.

ಸಮಿತಿಯ ಜಾಥಾ
ಬುಧವಾರ ಬೆಳಗ್ಗೆ ಸ್ವಾಭಿಮಾನದ ನಡಿಗೆ ಸಮಿತಿ ವತಿಯಿಂದ ಸ್ವಾಭಿಮಾನದ ಜಾಥಾ ಗರಡಿ ಕ್ಷೇತ್ರದಿಂದ ಹೊರಟು ಮಂಗಳೂರು ತಾಲೂಕಿನಾದ್ಯಂತ ಸಂಚರಿಸಿ ಸಂಜೆ ವೇಳೆಗೆ ಉರ್ವಸ್ಟೋರ್‌ ತಲುಪಿ ಅಲ್ಲಿಂದ ಪಾದಯಾತ್ರೆಯಲ್ಲಿ ಕುದ್ರೋಳಿ ಕ್ಷೇತ್ರಕ್ಕೆ ತೆರಳಿತ್ತು. ಇದರಲ್ಲಿ ಕಾಂಗ್ರೆಸ್‌ ಮುಖಂಡರು ಅಧಿಕ ಸಂಖ್ಯೆಯಲ್ಲಿದ್ದರು.

ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ವಿಶೇಷ ಪೂಜೆ
ಕಟಪಾಡಿ: ಬಿಲ್ಲವ ಮಹಾ ಮಂಡಳದ ನಿರ್ಣಯದಂತೆ ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು ತಾಲೂಕು ವ್ಯಾಪ್ತಿಯ ಬಿಲ್ಲವ ಸಂಘಗಳ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರಗಳೊಂದಿಗೆ ಆಗಮಿಸಿದ ವಾಹನ ಜಾಥಾವನ್ನೊಳಗೊಂಡ ಸ್ವಾಭಿಮಾನ ಜಾಥಾವು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಬುಧವಾರ ಸಂಜೆ ಸಮಾಪನಗೊಂಡಿತು.

ಕ್ಷೇತ್ರದ ಪ್ರಧಾನ ಅರ್ಚಕ ದೇವದಾಸ ಶಾಂತಿ ಅವರು ದೇವಸ್ಥಾನದ ಮುಂಭಾಗಕ್ಕೆ ಆಗಮಿಸಿದ ಎಲ್ಲ ಟ್ಯಾಬ್ಲೋಗಳ ಸ್ತಬ್ಧಚಿತ್ರವನ್ನು ಹೊಂದಿದ ರಥಕ್ಕೆ ವಿಶೇಷ ಪೂಜೆಸಲ್ಲಿಸಿದರು. ಬಳಿಕ ಶ್ರೀ ವಿಶ್ವನಾಥ ಕ್ಷೇತ್ರದ ಬ್ರಹ್ಮಶ್ರೀ ನಾರಾಯಣಗುರುಗಳ ಸನ್ನಿಧಿಯಲ್ಲಿ ವಿಶೇಷವಾಗಿ ಗುರುಪೂಜೆ ಸಲ್ಲಿಸಿದರು. ಕ್ಷೇತ್ರಾಡಳಿತ ಮಂಡಳಿಯ ವತಿಯಿಂದ ಬಂದಂತಹ ಪ್ರಮುಖರಿಗೆ ಗೌರವಿಸಿ ಪ್ರಸಾದ ನೀಡಲಾಯಿತು.

ಸ್ವಾಭಿಮಾನ ಜಾಥಾದಲ್ಲಿ ಆಗಮಿಸಿದವರು ಹಳದಿ ಶಾಲು ಹಾಗೂ ವಾಹನಗಳಿಗೆ ಹಳದಿ ಪತಾಕೆ ಅಳವಡಿಸಿಕೊಂಡಿದ್ದರು.

ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎನ್‌. ಶಂಕರ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಯು. ಶಿವಾನಂದ, ಪ್ರಧಾನ ಕೋಶಾಧಿಕಾರಿ ವೀರೇಶ್‌ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಮಾಜಿ ಶಾಸಕ ಬೈಂದೂರು ಗೋಪಾಲ ಪೂಜಾರಿ, ಕಾಂಗ್ರೆಸ್‌ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಹಾಗೂ ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು ತಾಲೂಕುಗಳ ಹಾಗೂ ಜಿಲ್ಲೆಯ ಬಿಲ್ಲವರ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next