Advertisement

ಬಿಲ್ಲವ ಭವನ 19ನೇ ಈಸ್ಟ್‌ ಬೋಂಬೆ ಸ್ಕೌಟ್‌ ಉತ್ಸವ

04:12 PM Nov 08, 2017 | |

ಮುಂಬಯಿ: ಮದರ್‌ ಇಂಡಿಯಾ ಫ್ರೀನೈಟ್‌ ಹೈಸ್ಕೂಲ್‌ ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಯಾಗಿದೆ. ಬದುಕಿನ ಮೌಲ್ಯ ಹೆಚ್ಚಿಸಲು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರತಿಭಾ ವಿಕಾಸಕ್ಕೆ ಅವಕಾಶ ಕಲ್ಪಿಸಿದೆ. ಇದರ ಸ್ಕೌಟ್‌ ವಿಭಾಗದ ವಿದ್ಯಾರ್ಥಿಗಳು ತನ್ನ ಕಾರ್ಯಕ್ಷಮತೆಯಿಂದ ಹನ್ನೊಂದು ರಾಷ್ಟ್ರಪತಿ ಪದಕವನ್ನು ಪಡೆದಿದ್ದಾರೆ. ವಿದ್ಯಾದಾನದ ಮೂಲಕ ಕೂಡು ಕುಟುಂಬವನ್ನು ಸೃಷ್ಟಿಸಿದ ಈ ಶಿಕ್ಷಣ ಸಂಸ್ಥೆ ಮಾತ್ರ ವಾತ್ಸಲ್ಯದ ಆರೈಕೆಯ ತಾಣವಾಗಿದೆ ಎಂದು ಮದರ್‌ ಇಂಡಿಯಾ ಫ್ರಿ ನೈಟ್‌ ಹೈಸ್ಕೂಲ್‌ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಸಾಯಿಕೇರ್‌ ಲಾಜಿಸ್ಟಿಕ್ಸ್‌ ಲಿಮಿಟೆಡ್‌ ಇದರ ಮುಖ್ಯ ಆಡಳಿತ ನಿರ್ದೇಶಕ ಸುರೇಂದ್ರ ಎ. ಪೂಜಾರಿ ನುಡಿದರು.

Advertisement

ನ. 5ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಮದರ್‌ ಇಂಡಿಯಾ ಫ್ರಿ ನೈಟ್‌ ಹೈಸ್ಕೂಲ್‌ ಹಳೆ ವಿದ್ಯಾರ್ಥಿ ಸಂಘ ಮತ್ತು ಜನತಾ ಶಿಕ್ಷಣ ಸಂಘದ 19ನೇ ಈಸ್ಟ್‌ ಬೋಂಬೆ ಸ್ಕೌಟ್‌ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದಸ್ಯರ ಸಹಕಾರದಿಂದ ಸಂಘಟನೆ ಬಲಾಡ್ಯ ಹೊಂದಿದೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶಾಲಾ ಪರಿಕರಗಳನ್ನು ನೀಡಿ ಗೌರವಿಸಿದೆ. ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯ ಪದವಿ ಶಿಕ್ಷಣದವರೆಗಿನ ಸಂಪೂರ್ಣ ವೆಚ್ಚವನ್ನು ಹಳೆ ವಿದ್ಯಾರ್ಥಿ ಸಂಘ ನೀಡಿದೆ. ಇದೇ ರೀತಿ ಉತ್ತಮ ಮನಸ್ಸಿನಿಂದ ರಾತ್ರಿಶಾಲೆಯ ಸ್ಮರಣೆಯನ್ನು ಜಾಗೃತಗೊಳಿಸೋಣ ಎಂದರು.

ಬಿಲ್ಲವರ ಅಸೋಸಿಯೇಶನ್‌ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಮಾತನಾಡಿ, ಸಂಪೂರ್ಣ ಜನಜೀವನ ಅಸ್ತವ್ಯಸ್ತಗೊಂಡಿದ್ದ ಬ್ರಿಟಿಷರ ವಿರುದ್ಧದ ಹೋರಾಟದ ಸಮಯದಲ್ಲಿ ಹುಟ್ಟಿಕೊಂಡ ಮದರ್‌ ಇಂಡಿಯಾ ರಾತ್ರಿಶಾಲೆ ದೇಶ ಪ್ರೇಮದ ಪ್ರತೀಕವಾಗಿದೆ. ಇದರಲ್ಲಿ ಶಿಕ್ಷಣ ಪಡೆದವರು ಉನ್ನತ ಹುದ್ದೆ ಹಾಗೂ ಯಶಸ್ಸಿ ಉದ್ದಿಮೆದಾರರಾಗಿ ಶ್ರೇಷ್ಠತೆಯನ್ನು ಪಡೆದಿರುವುದು ಸೌಭಾಗ್ಯದ ವಿಚಾರವಾಗಿದೆ. ರಾತ್ರಿಶಾಲೆ ಮಕ್ಕಳ ಕೊರತೆಯಿಂದ ಮುಚ್ಚಿದ್ದರೂ ಅದರ ಹಳೆವಿದ್ಯಾರ್ಥಿಗಳು ಸಮಾನ ಮನಸ್ಕರಾಗಿ ಸಾಮಾಜಿಕ ಕಳಕಳಿಯೊಂದಿಗೆ ದುಡಿಯುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸ್ಕೌಟ್‌ ಕ್ಷೇತ್ರದಲ್ಲಿ ಗಮನೀಯ ಸಾಧನೆಗೈದ ರಾಮದಾಸ್‌ ಎಚ್‌. ನಾಯಕ್‌ ಅವರಿಗೆ ಗರುಡ ಪ್ರಮುಖ, ಮುದ್ದು ಅಂಚನ್‌ ಅವರಿಗೆ ಗರುಡ ಸಾಹಸಿ, ಮಂದಾರ ಹೆಗ್ಡೆ ಅವರಿಗೆ ಗರುಡ ಚೇತನ ಬಿರುದು ಪ್ರದಾನಿಸಿ ಶಾಲು ಹೊದೆಸಿ, ಫಲಪುಷ್ಪ, ಸಮ್ಮಾನ ಪತ್ರ, ಸ್ಮರಣಿಕೆಯೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.

ಸ್ಕೌಟ್‌ ಅಧ್ಯಾಪಕರಾದ ಗೋಪಾಲ್‌ ಕಾಂಚನ್‌ ಮತ್ತು ಕೆ. ಬಿ. ಪಾಲನ್‌ ಸ್ಕೌಟ್‌ನಲ್ಲಿ ರಾಷ್ಟ್ರಪತಿ ಪದಕ ಪಡೆದಿರುವ ನಾಗೇಶ್‌ ನಾಯಕ್‌, ಶುಭಾನಂದ ಹೆಗ್ಡೆ, ಚಂದ್ರಹಾಸ ಎ. ಶೆಟ್ಟಿ, ಸುರೇಂದ್ರ ಎ. ಪೂಜಾರಿ, ಅಶೋಕ್‌ ಮೆಂಡನ್‌, ಆನಂದ ಶೆಟ್ಟಿ ಮತ್ತು ಮಹಾಬಲ ದೇವಾಡಿಗ ಅವರನ್ನು ಸಮ್ಮಾನಿಸಲಾಯಿತು.

Advertisement

ವೇದಿಕೆಯಲ್ಲಿ ಉದ್ಯಮಿಗಳಾದ ಸಂತೋಷ್‌ ಕುಮಾರ್‌ ಶೆಟ್ಟಿ, ಸದಾಶಿವ ಶೆಟ್ಟಿ, ಪದಾಧಿಕಾರಿಗಳಾದ ಸುಂದರ ಮೊಲಿ, ಯಶವಂತ ಪೂಜಾರಿ, ನಾಗೇಶ್‌ ನಾಯಕ್‌, ಟಿ. ವಿ. ಪೂಜಾರಿ, ಜಯ ಸಿ. ಪೂಜಾರಿ, ಜಯರಾಮ ಪೂಜಾರಿ, ಚಂದ್ರಹಾಸ ಬೆಳ್ಚಡ, ಮಂಜುನಾಥ ಪೂಜಾರಿ, ಸದಾನಂದ ಶೆಟ್ಟಿ, ಮಲ್ಲಿಕಾ ರಮೇಶ್‌ ಪೂಜಾರಿ, ಮಹಾಬಲ ಹೆಗ್ಡೆ ಅವರು ಅತಿಥಿಗಳನ್ನು ಗೌರವಿಸಿದರು.

ಹರೀಶ್‌ ಜಿ. ಮೆಂಡನ್‌ ಸಂಸ್ಥೆಯ ಬಗ್ಗೆ ವಿವರಿಸಿದರು. ಲೇಖಕ ಅಶೋಕ್‌ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೃತ್ಯ ವೈವಿಧ್ಯ ಮತ್ತು ಶ್ರೀ ಗುರುಕಲಾ ತಂಡ ಮುದರಂಗಡಿ ಕಲಾವಿದರಿಂದ ನಸೀಬು ತುಳು ನಾಟಕ ಪ್ರದರ್ಶನಗೊಂಡಿತು.

ನಾನು ಮದರ್‌ ಇಂಡಿಯಾ ರಾತ್ರಿಶಾಲೆಯ ಹಳೆವಿದ್ಯಾರ್ಥಿ. ಅಂದಿನ ಅಧ್ಯಾಪಕರ ಅವಿರತ ಶ್ರಮದ ಶಿಕ್ಷಣ ನನ್ನ ಬದುಕಿನ ಭವಿಷ್ಯ ರೂಪಿಸಿತು. ಇಂದು ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದೇನೆ. ಹಲವಾರು ಜನಪರ ಯೋಜನೆಯೊಂದಿಗೆ ಸಮಾಜ ಸೇವೆ ಮಾಡುತ್ತಿದ್ದೇನೆ 
 – ಎನ್‌. ಟಿ. ಪೂಜಾರಿ (ಅಧ್ಯಕ್ಷರು: ಬಿಲ್ಲವರ ಚೇಂಬರ್‌ ಆಫ್‌ ಕಾಮರ್ಸ್‌).

ಲಕ್ಷಾಂತರ ಮಂದಿಗೆ ದಾರಿ ದೀಪವಾಗಿರುವ ಶಿಕ್ಷಣ ಸಂಸ್ಥೆ ಹಾಗೂ ಸ್ಕೌಟ್‌ ವಿಭಾಗ ಸ್ವಾವಲಂಬಿ ಜೀವನ ಬದುಕಿನ ರೂಪುರೇಷೆಗಳನ್ನು ನಿರೂಪಿಸಿದೆ. ದೇಶ ಪ್ರೇಮವನ್ನು ವಿಸ್ತರಿಸಿದೆ 
– ಗೋವಿಂದ ಪೂಜಾರಿ (ಆಡಳಿತ ನಿರ್ದೇಶಕ: ಶೀಫ್‌ ಟಾಲ್ಕ್ ಫುಡ್‌ ಹಾಸ್ಪಿಟಾಲಿಟಿ    ಪ್ರೈವೇಟ್‌ ಲಿಮಿಟೆಡ್‌).

ಭಾರತಾಂಬೆಯ ಋಣ ತೀರಿಸಲು ಅಸಾಧ್ಯ. ಈ ಮಣ್ಣಿನಿಂದ ಬೆಳೆದ ನಾವು ಆಕೆಯನ್ನು ಗೌರವ ಸ್ಥಾನದಿಂದ ಆರಾಧಿಸಬೇಕು. ಭಾರತ್‌ ಮಾತಾಕೀ ಜೈ, ವಂದೇ ಮಾತರಂ ರಾಷ್ಟ್ರಪ್ರೇಮವನ್ನು ನೀಡುತ್ತಿದೆ ಎನ್‌ಸಿಸಿ.  ಸ್ಕೌಟ್‌ ಶಿಸ್ತಿನ ಅವಿಭಾಜ್ಯ ಅಂಗವಾಗಿದೆ 
 – ಕರುಣಾಕರ ಜಿ. ಪುತ್ರನ್‌ (ಟ್ರಸ್ಟಿ : ಹರೇ ಕೃಷ್ಣ ಫೌಂಡೇಷನ್‌).
 

Advertisement

Udayavani is now on Telegram. Click here to join our channel and stay updated with the latest news.

Next