Advertisement

Bihar: ಮೀಸಲು ಪ್ರಮಾಣ ಶೇ.65ಕ್ಕೆ ಏರಿಕೆ-ವಿಧಾನಸಭೆಯಲ್ಲಿ ಅವಿರೋಧವಾಗಿ ವಿಧೇಯಕ ಅಂಗೀಕಾರ

08:58 PM Nov 09, 2023 | Team Udayavani |

ಪಾಟ್ನಾ: ಬಿಹಾರ ವಿಧಾನಸಭೆಯಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇಬಿಸಿ ವರ್ಗಕ್ಕೆ ಇರುವ ಮೀಸಲು ಪ್ರಮಾಣವನ್ನು ಶೇ.50ರಿಂದ ಶೇ.65ಕ್ಕೆ ಏರಿಸುವ ವಿಧೇಯಕಕ್ಕೆ ಒಮ್ಮತದ ಅಂಗೀಕಾರ ದೊರೆತಿದೆ. ಇದರಿಂದಾಗಿ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಉದ್ಯೋಗಗಳಲ್ಲಿ ಎಸ್‌ಟಿ ಸಮುದಾಯಕ್ಕೆ ಇರುವ ಮೀಸಲಾತಿ ದ್ವಿಗುಣವಾಗಲಿದೆ. ಅಂದರೆ ಶೇ.1 ಇದ್ದದ್ದು ಶೇ.2ಕ್ಕೆ ಏರಿಕೆಯಾಗಲಿದ್ದರೆ, ಎಸ್‌ಸಿ ಸಮುದಾಯಕ್ಕೆ ಮೀಸಲು ಪ್ರಮಾಣ ಶೇ.16ರಿಂದ ಶೇ.20, ಅತ್ಯಂತ ಹಿಂದುಳಿದ ವರ್ಗಕ್ಕೆ (ಇಬಿಸಿ) ಶೇ.18ರಿಂದ ಶೇ.25, ಇತರ ಹಿಂದುಳಿದ ವರ್ಗ (ಒಬಿಸಿ)ಕ್ಕೆ ಶೇ.12ರಿಂದ ಶೇ.15ಕ್ಕೆ ಏರಿಕೆ ಆಗಲಿದೆ.

Advertisement

ಗಮನಾರ್ಹ ಅಂಶವೆಂದರೆ ಹಿಂದುಳಿದ ವರ್ಗದ ಮಹಿಳೆಯರಿಗಾಗಿ ಸದ್ಯ ಇರುವ ಶೇ.3 ಮೀಸಲು ಪ್ರಮಾಣವನ್ನು ರದ್ದುಗೊಳಿಸಲಾಗಿದೆ. ವಿಧಾನಮಂಡಲದಲ್ಲಿ ಅನುಮೋದನೆಗೊಂಡ ವಿಧೇಯಕ ಕಾನೂನಾಗಿ ಮಾರ್ಪಾಡಾಗಲು ರಾಜ್ಯಪಾಲರ ಸಹಿಗಾಗಿ ಕಡತವನ್ನು ಕಳುಹಿಸಲಾಗುತ್ತದೆ. ಅವರು ಸಹಿ ಹಾಕಿದ ಬಳಿಕ ಅದು ಕಾನೂನಾಗಿ ಮಾರ್ಪಾಡಾಗಲಿದೆ.

ಅವಹೇಳನ ಮಾತಿಗೆ ತಿರುಗೇಟು:
ಮಹಿಳೆಯರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರು ವಿಧೇಯಕಗಳನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳುವ ಮೂಲಕ ಜನರ ಗಮನ ಬೇರೆಡೆಗೆ ಸೆಳೆಯಲು ಪ್ರಯತ್ನ ಮಾಡಿದ್ದಾರೆ. ಜತೆಗೆ ಅವಹೇಳನಕಾರಿ ಮಾತನ್ನಾಡಿದ್ದಾರೆ ಎಂಬ ವಿಚಾರ ಮುಂದಿಟ್ಟುಕೊಂಡು ಅದನ್ನೇ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಳಕೆ ಮಾಡಲು ಮುಂದಾಗಿದ್ದ ಬಿಜೆಪಿಗೂ ಬ್ರೇಕ್‌ ನೀಡಿದ್ದಾರೆ ಜೆಡಿಯು ನಾಯಕ. ರಾಜಕೀಯ ಅನಿವಾರ್ಯತೆಯಿಂದ ಬಿಜೆಪಿ ವಿಧೇಯಕಕ್ಕೆ ಬೆಂಬಲ ನೀಡುವಂಥ ಪರಿಸ್ಥಿತಿಯನ್ನೂ ನಿತೀಶ್‌ ನಿರ್ಮಾಣ ಮಾಡಿದ್ದಾರೆ.

“ಭಾರತೀಯಳಾಗಿದಿದ್ದರೆ ನಿತೀಶ್‌ ವಿರುದ್ಧ ಸ್ಪರ್ಧಿಸುತ್ತಿದ್ದೆ”
ವಾಷಿಂಗ್ಟನ್‌: ಜನಸಂಖ್ಯೆ ನಿಯಂತ್ರಣ ವಿಚಾರವಾಗಿ ಮಹಿಳೆಯರ ಕುರಿತು ಬಿಹಾರ ಸಿಎಂ ನಿತೀಶ್‌ ಹೇಳಿಕೆ ಟೀಕೆಗೆ ಗುರಿಯಾದ ಬೆನ್ನಲ್ಲೇ, ಆಫ್ರಿಕನ್‌ ಮೂಲದ ಅಮೆರಿಕನ್‌ ಗಾಯಕಿ ಮೇರಿ ಮಿಲ್ಬನ್‌, ನಿತೀಶ್‌ ವಿರುದ್ಧ ದೇಶದ ಧೈರ್ಯಶಾಲಿ ಮಹಿಳೆಯರು ನಿಲ್ಲಬೇಕು ಎಂದು ಕರೆ ನೀಡಿದ್ದಾರೆ. ಅಲ್ಲದೇ, ನಾನು ಭಾರತೀಯ ಪ್ರಜೆಯಾಗಿದ್ದಿದ್ದರೆ ನಿತೀಶ್‌ ವಿರುದ್ಧ ಸ್ಪರ್ಧಿಸುತ್ತಿದ್ದೆ ಎಂದಿದ್ದಾರೆ. ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಆಕೆ, ಮಹಿಳೆಯರ ಬಗ್ಗೆ ತುತ್ಛ ಹೇಳಿಕೆ ನೀಡಿರುವ ನಿತೀಶ್‌ ವಿರುದ್ಧ ಬಿಹಾರವನ್ನು ಮುನ್ನಡೆಸುವ ಸಾಮರ್ಥ್ಯವಿರುವ ಧೈರ್ಯಶಾಲಿ ಹೆಣ್ಣುಮಕ್ಕಳು ಚುನಾವಣೆಗೆ ನಿಲ್ಲಬೇಕು. ಅಂಥ ಹೆಣ್ಣುಮಕ್ಕಳಿಗೆ ಬಿಜೆಪಿ ಅವಕಾಶ ನೀಡಬೇಕು ಎಂದಿದ್ದಾರೆ. ಇದೇ ವೇಳೆ ಮೋದಿ ಅವರನ್ನು ಶ್ಲಾ ಸಿದ ಆಕೆ, ಬಹಳಷ್ಟು ಮಂದಿ ನನ್ನನ್ನು ಕೇಳುತ್ತಾರೆ ನಾನೇಕೆ ಮೋದಿ ಅವರನ್ನು ಬೆಂಬಲಿಸುತ್ತೇನೆಂದು? ಏಕೆಂದರೆ ನಾನು ಭಾರತವನ್ನು ಪ್ರೀತಿಸುತ್ತೇನೆ. ಮೋದಿ ಭಾರತದ ಅಭಿವೃದ್ಧಿಗೆ ಪೂರಕವಾದ ನಾಯಕ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next