ಹೊಸದಿಲ್ಲಿ : ಈ ಬಾರಿಯ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ತ್ರಿವಳಿ ತಲಾಕನ್ನು ಕೊನೆಗೊಳಿಸುವ ಮಸೂದೆಯನ್ನು ಮಂಡಿಸಲಿದೆ.
ತ್ರಿವಳಿ ತಲಾಕನ್ನು ಕೊನೆಗೊಳಿಸುವ ಹೊಸ ಕಾನೂನನ್ನು ರೂಪಿಸುವುದಕ್ಕೆ ಸಚಿವ ಮಟ್ಟದ ಸಮಿತಿಯೊಂದನ್ನು ರೂಪಿಸಲಾಗಿದೆ.
ಮುಸ್ಲಿಂ ಪುರುಷರು ಒಂದೇ ಉಸಿರಿನಲ್ಲಿ ಮೂರು ಬಾರಿ ತಲಾಕ್ ಎಂಬ ಪದವನ್ನು ಉಚ್ಚರಿಸುವ ಮೂಲಕ ಪತ್ನಿಗೆ ವಿಚ್ಛೇದನ ನೀಡುವ ತಲಾಕ್ ಎ ಬಿದ್ದತ್ ಎಂಬ ವಿವಾದಿತ ಕ್ರಮವನ್ನು ಸುಪ್ರೀಂ ಕೋರ್ಟ್ ಕಳೆದ ಆಗಸ್ಟ್ ನಲ್ಲಿ ಹೊಡೆದು ಹಾಕಿತ್ತು.
ಮೂರು ಬಾರಿ ತಲಾಕ್ ಪದವನ್ನು ಒಂದೇ ಉಸಿರಿನಲ್ಲಿ ಉಚ್ಚರಿಸಿ ಪತ್ನಿಗೆ ವಿಚ್ಛೇದನೆ ನೀಡುವ ಕ್ರಮವು ಸ್ವೇಚ್ಚಾಚಾರದ್ದೂ ಅಸಾಂವಿಧಾನಿಕವಾದುದೂ ಆಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿತ್ತು.
ಜಸ್ಟಿಸ್ ಜೆ ಎಸ್ ಖೇಹರ್, ಜಸ್ಟಿಸ್‌ಗಳಾದ ಕುರಿಯನ್ ಜೋಸೆಫ್, ರೊಹಿನ್‌ಟನ್ ಎಫ್ ನಾರಿಮನ್, ಯು ಯು ಲಲಿತ್ ಮತ್ತು ಅಬ್ದುಲ್ ನಝೀರ್ ಅವರನ್ನು ಒಳಗೊಂಡ ಐವರು ಸದಸ್ಯರ ಸುಪ್ರೀಂ ಪೀಠ, “ತ್ರಿವಳಿ ತಲಾಕ್ ಕುರಿತ ವಿಭಿನ್ನ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು 3:2 ಬಹುಮತದಲ್ಲಿ ತಲಾಕ್ ಎ ಬಿದ್ದತ್ ಎಂಬ ತ್ರಿವಳಿ ತಲಾಕ್ ಪದ್ಧತಿಯನ್ನು ನಾವು ಕಾನೂನು ಬಾಹಿರವೆಂದು ಅನೂರ್ಜಿತಗೊಳಿಸುತ್ತಿದ್ದೇವೆ” ಎಂದು ಹೇಳಿತ್ತು.
ತ್ರಿವಳಿ ತಲಾಕ್ ಇಸ್ಲಾಂ ನಲ್ಲಿ ಮೂಲಭೂತವಾದುದೇ ಎಂಬ ಮುಖ್ಯ ವಿಷಯದಲ್ಲಿ ಮೂವರು ನ್ಯಾಯಾಧೀಶರಾದ ಜಸ್ಟಿಸ್ ಜೋಸೆಫ್, ಜಸ್ಟಿಸ್ ನಾರಿಮನ್ ಮತ್ತು ಯು ಯು ಲಲಿತ್ ಅವರು ಸಿಜೆಐ ಮತ್ತು ಜಸ್ಟಿಸ್ ನಝೀರ್ ವಿರುದ್ಧ ಭಿನ್ನಮತ ಪ್ರಕಟಿಸಿದ್ದರು.