ನವದೆಹಲಿ: ಬಿಲ್ಕಿಸ್ ಬಾನು ಪ್ರಕರಣದ 11 ಅಪರಾಧಿಗಳನ್ನು ಅವಧಿಪೂರ್ವವಾಗಿ ಬಿಡುಗಡೆಗೊಳಿಸಿ ಗುಜರಾತ್ ಸರ್ಕಾರ ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಸೋಮವಾರ (ಜನವರಿ 08)ರದ್ದುಗೊಳಿಸಿದ್ದು, ಇದು ಗುಜರಾತ್ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾದಂತಾಗಿದೆ.
ಇದನ್ನೂ ಓದಿ:UI Teaser: ‘ಯುಐʼ ಲೋಕಕ್ಕೆ ಉಪ್ಪಿಯೇ ಅಧಿಪತಿ.. ಸಖತ್ ಕುತೂಹಲ ಹುಟ್ಟಿಸಿದ ಟೀಸರ್
ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳನ್ನು ಅವಧಿಪೂರ್ವವಾಗಿ ಬಿಡುಗಡೆಗೊಳಿಸಿರುವ ಗುಜರಾತ್ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಮನವಿಯನ್ನು ಜಸ್ಟೀಸ್ ಬಿ.ವಿ.ನಾಗರತ್ನಾ ಮತ್ತು ಜಸ್ಟೀಸ್ ಉಜ್ಜಾಲ್ ಭುವನ್ ಅವರನ್ನೊಳಗೊಂಡ ಪೀಠ ಈ ತೀರ್ಪನ್ನು ನೀಡಿರುವುದಾಗಿ ವರದಿ ತಿಳಿಸಿದೆ.
2002ರಲ್ಲಿ ಗುಜರಾತ್ ನ ಗೋಧ್ರಾದಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿ, ಆಕೆಯ 7 ಮಂದಿ ಕುಟುಂಬ ಸದಸ್ಯರನ್ನು ಕೊಲೆಗೈದ ಪ್ರಕರಣದಲ್ಲಿ 11 ಮಂದಿ ದೋಷಿತರಾಗಿದ್ದರು. ಇದೀಗ ಗುಜರಾತ್ ಸರ್ಕಾರ 11 ಅಪರಾಧಿಗಳನ್ನು ಅವಧಿ ಪೂರ್ವ ಬಿಡುಗಡೆಗೊಳಿಸಲು ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ.
ಅಂತಹ ಆದೇಶವನ್ನು ಜಾರಿಗೊಳಿಸುವ ಅಧಿಕಾರ ಗುಜರಾತ್ ಸರ್ಕಾರಕ್ಕಿಲ್ಲ, ಇದೊಂದು ವಂಚನೆ ಕೃತ್ಯ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. 11 ಅಪರಾಧಿಗಳು ಎರಡು ವಾರದೊಳಗೆ ಶರಣಾಗಿ, ಜೈಲಿಗೆ ಮರಳಬೇಕು ಎಂದು ತೀರ್ಪಿನಲ್ಲಿ ವಿವರಿಸಿದೆ.
ಅಪರಾಧಿಗಳ ಶೀಘ್ರ ಬಿಡುಗಡೆಯ ಅಧಿಕಾರ ಗುಜರಾತ್ ಸರ್ಕಾರಕ್ಕಿಲ್ಲ ಎಂದು ತಿಳಿಸಿರುವ ಸುಪ್ರೀಂ ಪೀಠ. ಅಪರಾಧಿಗಳ ಅವಧಿ ಪೂರ್ವ ಬಿಡುಗಡೆಗೆ ಮಹಾರಾಷ್ಟ್ರ ಸರ್ಕಾರ ಇಂತಹ ಆದೇಶವನ್ನು ಹೊರಡಿಸಲು ಸಮರ್ಪಕವಾಗಿದೆ, ಯಾಕೆಂದರೆ ಆರೋಪಿಗಳ ವಿಚಾರಣೆ ನಡೆದಿರುವುದು ಮಹಾರಾಷ್ಟ್ರದಲ್ಲಿ, ಗುಜರಾತ್ ನಲ್ಲಿ ಅಲ್ಲ ಎಂದು ಸ್ಪಷ್ಟಪಡಿಸಿದೆ.