ಯಳಂದೂರು: ಸೋಮವಾರದಿಂದ ಬಹುತೇಕ ಎಲ್ಲಾ ದೇಗುಲ ಬಾಗಿಲು ತೆರೆದಿದ್ದರೂ ಬಿಳಿಗಿರಿರಂಗನಾಥಸ್ವಾಮಿ ದೇಗುಲ ಮಾತ್ರ ಬಾಗಿಲು ತೆರೆದಿಲ್ಲ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇಗುಲ ಬಾಗಿಲು ತೆರೆಯಲು ಸೂಚನೆ ನೀಡಲಾಗಿದೆ. ಆದರೆ ಇಲ್ಲಿನ ಅರ್ಚಕರು ಹಾಗೂ ಸಿಬ್ಬಂದಿ ಬಾಗಿಲು ತೆರೆಯಲು ಹಿಂದೇಟು ಹಾಕಿದ್ದರಿಂದ ಸೋಮವಾರ ಎಂದಿನಂತೆ ನಿತ್ಯ ಪೂಜೆ ಮಾಡಿ ಬಾಗಿಲು ಬಂದ್ ಮಾಡಲಾಗಿದೆ.
ಕೋವಿಡ್ 19 ಭಯ: ರಾಜ್ಯದಲ್ಲಿ ಕೋವಿಡ್ 19 ಭೀತಿ ಇನ್ನೂ ಹೆಚ್ಚಾ ಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಲ್ಲಿಗೆ ಬಸ್‌ಗಳ ನಿಷೇಧವೂ ಇತ್ತು. ಈಗ ಕೆಎಸ್ ಆರ್‌ಟಿಸಿ ಬಸ್ ಬಿಡಲಾಗಿದೆ. ಬಿಳಿಗಿರಿರಂಗನಾಥಸ್ವಾಮಿಗೆ ಬೇರೆ ರಾಜ್ಯ, ಜಿಲ್ಲೆಗಳ ಭಕ್ತರೇ ಅಧಿಕವಾಗಿರುತ್ತಾ ರೆ. ಹಾಗಾಗಿ ಅವರಿಂದ ಸೋಂಕು ಹರಡುವ ಭಯವಿದೆ. ಅಲ್ಲದೆ ಇಲ್ಲಿ ಶೀತ ಹೆಚ್ಚಾಗಿರುತ್ತದೆ. ಸೂಕ್ತ ಜೀವರಕ್ಷಕ ಸಾಮಗ್ರಿಗಳೂ ಇಲ್ಲ.
ಚಿಕ್ಕ ದೇಗುಲವೂ ಅಪಾಯ: ದೇಗುಲದ ಜೀರ್ಣೋದ್ಧಾರ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಬಾಲಾಲಯದಲ್ಲಿರುವ ಮೂರ್ತಿ ಸ್ಥಳವೂ ಚಿಕ್ಕದಾಗಿದೆ. ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಸ್ಥಳ ಚಿಕ್ಕದಿರುವುದರಿಂದ ಭಕ್ತರ ನಿಯಂತ್ರಣವೂ ಕಷ್ಟವಾಗುತ್ತದೆ. ಜೊತೆಗೆ ತೀರ್ಥ, ಪ್ರಸಾದಗಳ ವಿತರಣೆ ನಿಷೇಧಿಸಲಾಗಿದೆ. ಇನ್ನೂ ಕೆಲ ದಿನ ಬಾಗಿಲು ತೆರೆಯದಿರಲು ಇಲ್ಲಿನ ಅರ್ಚಕರು ತೀರ್ಮಾನಿಸಿದ್ದಾರೆ.
ದೇಗುಲ ತರೆಯಲು ಸೂಚನೆ ಬಂದಿದೆ. ಪ್ರತಿನಿತ್ಯ ಪೂಜೆ ನಡೆಯುತ್ತಿದೆ. ಆದರೆ ಇದು ಶೀತ ಪ್ರದೇಶ. ನಮ್ಮ ದೇಗುಲಕ್ಕೆ ಹೊರ ರಾಜ್ಯ, ಜಿಲ್ಲೆ ಭಕ್ತರೇ ಹೆಚ್ಚಾಗಿದ್ದಾರೆ. ಸೋಂಕಿತರು ಇಲ್ಲಿಗೆ ಬಂದರೆ ಅಪಾಯ. ಹಾಗಾಗಿ ಅರ್ಚಕರು, ನೌಕರರು ಇನ್ನಷ್ಟು ದಿನ ದೇಗುಲ ಬಾಗಿಲು ತೆರೆಯದಂತೆ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು.
-ವೆಂಕಟೇಶ್‌ಪ್ರಸಾದ್, ಇಒ, ಬಿಳಿಗಿರಿ ರಂಗನಾಥಸ್ವಾಮಿ ದೇಗುಲ