ಯಳಂದೂರು: ಜಿಲ್ಲೆಯ ಪ್ರಸಿದ್ಧ ಪ್ರಾಕೃತಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ಬಿಳಿಗಿರಿ ರಂಗನಬೆಟ್ಟದ ಬಿಳಿಗಿರಿ ರಂಗನಾಥಸ್ವಾಮಿ ದೇಗುಲ ಜೀರ್ಣೋದ್ಧಾರ ಕಾಮಗಾರಿ ಭಾಗಶಃ ಪೂರ್ಣವಾಗಿದ್ದು, ಅಂದುಕೊಂಡಂತೆ ಆದರೆ ಈ ತಿಂಗಳ 24 ಅಥವಾ ಏ. 2ರಂದು ದೇಗುಲ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ.
ಕುಂಟುತ್ತಾ ಸಾಗಿದ ಕಾಮಗಾರಿ: ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ ಶಿಥಿಲಗೊಂಡಿರುವ ನೆಪವೊಡ್ಡಿ 2017 ಮಾರ್ಚ್ ತಿಂಗಳಿನಲ್ಲಿ ಪುರಾತತ್ವ ಇಲಾಖೆಯ ವತಿಯಿಂದ 2.40 ಕೋಟಿರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿಯನ್ನು ಶಿವಮೊಗ್ಗದ ಪರಂಪರಾ ಕನ್ಸಟ್ರಕ್ಷನ್‌ನಿಂದ ಕಾಮಗಾರಿ ಆರಂಭಿಸಲಾಗಿತ್ತು. 20 ತಿಂಗಳ ಒಳಗೆ ಕಾಮಗಾರಿ ಮುಗಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗಿ ಸುಮಾರು 4ವರ್ಷ ಹತ್ತಿರವಾಗುತ್ತಿದೆ. ಈಗಾಗಲೇ ಶೇ. 80 ರಷ್ಟು ಕಾಮಗಾರಿ ಮುಗಿಸಲಾಗಿದೆ ಎಂದು ಇಲಾಖೆ ಹೇಳುತ್ತಿದೆ. ಆದರೆ, ಕಾಮಗಾರಿ ಇನ್ನೂ ಅಪೂರ್ಣವಾಗಿದೆ. ಈಗಾಗಲೇ 4 ವರ್ಷ ಮುಗಿದಿದ್ದರೂ ಇನ್ನೂಪೂರ್ಣಗೊಂಡಿಲ್ಲ. ಬಾಕಿ ಇರುವ ಕಾಮಗಾರಿಗಳನ್ನುಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸಗಳು ಭರದಿಂದಸಾಗುತ್ತಿದೆ.
ಕೈ ಜೋಡಿಸಿದ ಭಕ್ತಗಣ: ಬಿಳಿಗಿರಿ ರಂಗನನಾಥಸ್ವಾಮಿಗೆ ಹೊರ ರಾಜ್ಯ ಸೇರಿದಂತೆ ದೇಶ ವಿದೇಶದಲ್ಲೂ ಭಕ್ತರು ಇದ್ದಾರೆ. ದಾನಿಗಳ ಸಹಾಯದಿಂದ ಪಾಕ ಶಾಲೆ, ನೀರಿನ ಸಂಪು, ರಾಜಗೋಪುರ ದುರಸ್ತಿ, ಶ್ರೀನಿವಾಸ ಕಲ್ಯಾಣ ವಿಗ್ರಹ ನಿರ್ಮಾಣ, ಅಮ್ಮನವರ ಸನ್ನಿಧಿಯ ಪ್ರಭಾವಳಿ ನಿರ್ಮಾಣ, ಉಭಯ ಸನ್ನಿಧಿ ವಿಮಾನ ಗೋಪುರ ಕಳಶ ಕೆಲಸ ನಿರ್ಮಾಣ,ಉತ್ಸವದ ಅಭಿಷೇಕ ಪೀಠ, ಯಾಗಶಾಲೆ, ಗರ್ಭಗುಡಿಗೆ ಬೆಳ್ಳಿ ಕವಚ ಹಾಸುವಿಕೆ, ಕೆಲಸಗಳು ಸೇರಿದಂತೆಬೆಳ್ಳಿ ಪದಾರ್ಥಗಳು, ಫ್ಯಾನ್‌ಗಳ ನಿರ್ಮಾಣ,ಪರಣಿಯ ಪೀಠ, ಕಂಚಿನ ದೀಪ, ಸೇರಿದಂತೆ ಅನೇಕ ಸಾಮಗ್ರಿಗಳನ್ನು ನೀಡಿದ್ದಾರೆ. ದೇಗುಲಕ್ಕೆ ದಾನಿಗಳೇಹೆಚ್ಚಿನ ದೇಣಿಗೆಯನ್ನು ನೀಡಿದ್ದಾರೆ.
ನೆಲಹಾಸು ಕಾರ್ಯ ಆರಂಭ: ದೇವಸ್ಥಾನವನ್ನು ಭಕ್ತರಿಗೆ ಮುಕ್ತ ಮಾಡುವ ಉದ್ದೇಶದಿಂದ ದೇವಸ್ಥಾನದ ಸುತ್ತಲೂ ಇರುವ ನೆಲಹಾಸು ಕಾಮಗಾರಿಯನ್ನು ಬುಧವಾರದಿಂದ ಆರಂಭಿಸಲಾಗಿದೆ. ಇದಕ್ಕೆಈಗಾಗಲೇ ಮಣ್ಣನ್ನು ಸಮತಟ್ಟು ಮಾಡುವ ಕೆಲಸ ಆರಂಭಿಸಲಾಗಿದೆ. ಇದಕ್ಕಾಗಿ 1 ಕೋಟಿ ರೂ.ಅನುದಾನವನ್ನು ಜಿಲ್ಲಾಧಿಕಾರಿಗಳ ಕಾಳಜಿಯಿಂದ ಬಿಡುಗಡೆಯಾಗಿದೆ. ಮತ್ತೂಂದು ಬದಿಯ ಸುತ್ತುಗೋಡೆ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ.
ಸತತ 3 ವರ್ಷ ರಥೋತ್ಸವ ಇಲ್ಲ: ಬಿಳಿಗಿರಿರಂಗನಬೆಟ್ಟದಲ್ಲಿ ವರ್ಷದಲ್ಲಿ 3 ರಥೋತ್ಸವಗಳು ನಡೆಯುತ್ತವೆ. ಇದರಲ್ಲಿ ಎರಡು ಬಿಳಿಗಿರಿ ರಂಗನಾಥಸ್ವಾಮಿರಥೋತ್ಸವಗಳಾಗಿದ್ದು, ಮತ್ತೂಂದು ಗಂಗಾಧರೇಶ್ವರನ ರಥವಾಗಿದೆ. ಆದರೆ, ಶಿವರಾತ್ರಿ ಹಬ್ಬದ ಮಾರನೇ ದಿನ ನಡೆಯುವ ಗಂಗಾಧರೇಶ್ವರ ರಥೋತ್ಸವ ಹೊರತು ಪಡಿಸಿ ಇನ್ನೆರಡು ರಥೋತ್ಸವಗಳು ನಡೆದಿಲ್ಲ. ದೊಡ್ಡ ತೇರು ದೇಗುಲದ ತಳಭಾಗದಲ್ಲಿರುವ ರಥಧ ಬೀದಿಯಲ್ಲಿ ನಡೆಯುತ್ತದೆ. ಆದರೆ ಇದೂ ಕೂಡ ಶಿಥಿಲವಾಗಿದ್ದು ಜೀರ್ಣೋದ್ಧಾರ ಕಾಮಗಾರಿಗಿಂತ ಮುಂಚೆ ಶಿಥಿಲಗೊಂಡ ಹಿನ್ನೆಲೆಯಲ್ಲಿ 5 ವರ್ಷ ಗಳಿಂದಲೂ ಈ ತೇರು ನಡೆದಿಲ್ಲ.
ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಇದು ನಡೆಯುತ್ತದೆ. ಇದಲ್ಲದೆ ದೇವಸ್ಥಾನದ ಆವರಣದಲ್ಲೇ ಸಂಕ್ರಾಂತಿ ತೇರು ನಡೆಯುವ ವಾಡಿಕೆ ಇದೆ. ಆದರೆ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯ ಹಿನ್ನೆಲೆಯಲ್ಲಿ ಇದು ನಡೆದಿಲ್ಲ.
ಹೊಸ ತೇರು ನಿರ್ಮಾಣ: ಈಗ ಜಿಲ್ಲೆಯ ಚಾಮರಾಜನಗರದ ಚಾಮರಾಜೇಶ್ವರ ಹಾಗೂ ಬಿಳಿಗಿರಿ ರಂಗನಬೆಟ್ಟದ ಎರಡೂ ತೇರುಗಳು ಹೊಸದಾಗಿ ನಿರ್ಮಿಸಲು ಟೆಂಡರ್ ನೀಡಲಾಗಿದೆ. ಬೆಂಗಳೂರಿನಲ್ಲಿಈ ತೇರಿನ ಕಾಮಗಾರಿಗಳು ನಡೆಯುತ್ತಿದೆ. ಮಾರ್ಚ್ ಅಂತ್ಯದೊಳಗೆ ದೊಡ್ಡ ರಥದ ನಿರ್ಮಾಣವೂ ಆಗಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಹೀಗೆ ಆಗಿ ದೇವಸ್ಥಾನ ಉದ್ಘಾಟನೆಯೂ ಆದಲ್ಲಿ ದೊಡ್ಡ ರಥೋತ್ಸವವೂ ನೆರವೇರಲಿದೆ ಎಂಬುದು ಭಕ್ತರಿಗೆ ಸಂತಸ ಮೂಡಿಸಿದೆ.
ಫೈರೋಜ್‌ಖಾನ್