Advertisement

ಮಂಗಳೂರು ಜತೆ ದ್ವಿಪಕ್ಷೀಯ ಒಪ್ಪಂದಗಳಿಗೆ ಇಂಡೋನೇಶ್ಯಾ ಆಸಕ್ತಿ

12:14 PM Mar 27, 2017 | Team Udayavani |

ಮಂಗಳೂರು: ಮಂಗಳೂರು ನಗರದ ಜತೆ ಆಯ್ದ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧ ಹೊಂದಲು ಇಂಡೋನೇಶ್ಯಾ ಆಸಕ್ತವಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸಂಬಂಧಿಸಿದವರ ಜತೆ ಹಂತ ಹಂತವಾಗಿ ಮಾತುಕತೆ ನಡೆಸಲಾಗುವುದು ಎಂದು ಮುಂಬಯಿಯಲ್ಲಿರುವ ಇಂಡೋನೇಶ್ಯಾದ ಕಾನ್ಸುಲ್‌ ಜನರಲ್‌ ಸಾಟ್‌ ಸಿರಿಂಗೋರಿಂಗೋ ಹೇಳಿದ್ದಾರೆ. 

Advertisement

ಸಾಟ್‌ ಅವರೊಂದಿಗೆ ಮಂಗಳೂರಿನಲ್ಲಿ ಶನಿವಾರ “ಉದಯವಾಣಿ’ ನಡೆಸಿದ ಮಾತುಕತೆಯ ಆಯ್ದಭಾಗ ಇಲ್ಲಿದೆ.

ಪ್ರಶ್ನೆ: ನಿಮ್ಮ ಮಂಗಳೂರು ಭೇಟಿ ಉದ್ದೇಶ ?
ಉತ್ತರ:
ಮಂಗಳೂರು ನಗರ ಸರ್ವಾಂಗೀಣ ಪ್ರಗತಿ ಬಗ್ಗೆ ನಾವು ಅಧ್ಯಯನ ನಡೆಸಿದ್ದೇವೆ. ಮುಖ್ಯವಾಗಿ, ಭಾರತದ ಜತೆ ಎಲ್ಲ ಕ್ಷೇತ್ರಗಳಲ್ಲೂ ದ್ವಿಪಕ್ಷೀಯ ಒಪ್ಪಂದಕ್ಕೆ ನಾವು ಮುಂದಾಗಿದ್ದೇವೆ. ಹಾಗಾಗಿ, ಮಂಗಳೂರಿಗೆ ನಿನ್ನೆ ನಮ್ಮ ನಿಯೋಗ ಬಂದಿದ್ದು, ಕೆನರಾ ಚೇಂಬರ್ನಲ್ಲಿ ವಿಚಾರ ವಿನಿಮಯ ನಡೆಸಿದ್ದೇವೆ. ಈದಿನ ಮತ್ತಷ್ಟು ಸಂಗತಿ ತಿಳಿದುಕೊಳ್ಳುತ್ತೇವೆ. ಮುಂದೆ, ವ್ಯವಹಾರ ಸಂಬಂಧಿತ ನಿರ್ಧಾರಕ್ಕೆ ಇದು ಪೂರಕವಾಗಲಿದೆ. 

ಪ್ರ: ಮಂಗಳೂರಲ್ಲಿ ಏನನ್ನು ಗಮನಿಸಿದಿರಿ ?
ಉ:
ಮಂಗಳೂರು ಅದ್ಭುತ ನಗರ-ಇಟ್ಸ್‌ ಎಮೇಜಿಂಗ್‌ ಸಿಟಿ. ಇಲ್ಲಿನ ಜನತೆಯ ಅಚ್ಚುಕಟ್ಟುತನ ಗಮನ ಸೆಳೆಯಿತು. ಉನ್ನತ ಶಿಕ್ಷಣ ರಂಗದ ಸಾಧನೆ ಅದ್ವಿತೀಯ. ಈ ಬಗ್ಗೆ ನಾವು ಮಾತುಕತೆಗೆ ಆಸಕ್ತರಾಗಿದ್ದೇವೆ. ಅಂತೆಯೇ ಫಾರ್ಮಸುಟಿಕಲ್‌ ಕ್ಷೇತ್ರದಲ್ಲಿ ನಮಗೆ ಹೆಚ್ಚಿನ ಸಾಧನೆಯಾಗಬೇಕಿದೆ. ಕರಾವಳಿಯ ಈ ಪ್ರದೇಶ ಈ ಬಗ್ಗೆ ಅನುಕೂಲಕರವಾಗಿದೆ.

ಪ್ರ: ನಿಮ್ಮ ಈಗಿನ  ಯೋಜನೆಗಳು ?
ಉ:
ಮುಂದಿನ ತಿಂಗಳು ಟ್ರೇಡ್‌ ಎಕ್ಸ್‌ಪೋ ಇಂಡೋನೇಶ್ಯಾ ಏರ್ಪಡಿಸಿದ್ದೇವೆ. ನಮ್ಮ ಆಮದು-ರಫ್ತು ಕ್ಷೇತ್ರಕ್ಕೆ ಇದು ನಿರ್ಣಾಯಕವಾಗಿದೆ. ಪ್ರವಾಸೋದ್ಯಮಕ್ಕೆ ಇಂಡೋನೇಶ್ಯಾ ಆದ್ಯತೆ ನೀಡುತ್ತಿದೆ. ಮಂಗಳೂರು ಸಹಿತ ಭಾರತದಂತೆ ನಾವು ಕೂಡ ಸರ್ವ ಧರ್ಮ ಸಮನ್ವಯದವರು. ಮಂಗಳೂರು ಮತ್ತು ನಮ್ಮ ಜಕಾರ್ತಾ ನಗರಗಳ ನಡುವೆ ಪ್ರವಾಸೋದ್ಯಮ ಸಂಬಂಧ ಬೆಳೆಸಬಹುದು.

Advertisement

ಪ್ರ: ಮಂಗಳೂರು ಬಗ್ಗೆ ಏನನಿಸುತ್ತದೆ ?
ಉ:
ಅಪಾರ ಪ್ರಗತಿ ಸಾಧ್ಯತೆ ಹೊಂದಿರುವ ನಗರವಿದು. ಸ್ಮಾರ್ಟ್‌ಸಿಟಿ ಆದಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಸಾಧನೆ ಮಾಡಬಹುದು. ಎಲ್ಲ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆ ಮಂಗಳೂರಿನ ವೈಶಿಷ್ಟ.

– ಎಂಪಿ

Advertisement

Udayavani is now on Telegram. Click here to join our channel and stay updated with the latest news.

Next