ಕೊರೊನಾ ಮಹಾಮಾರಿ ಮತ್ತು ಅದರ ನಿಯಂತ್ರಣಕ್ಕಾಗಿ ಸರ್ಕಾರ ಹೇರಿದ ಲಾಕ್‌ಡೌನ್‌ನಿಂದಾಗಿ ಜನಜೀವನ ಹೇಗೆಲ್ಲಾ ನಲುಗಿತು ಎಂಬುದು ಬಹುತೇಕರಿಗೆ ಗೊತ್ತೇ ಇದೆ. ಕೋವಿಡ್ ಲಾಕ್‌ಡೌನ್ ವೇಳೆ ಸಾಮಾನ್ಯ ಜನರ ಜೀವನವೇ ಹೀಗಾಗಿದ್ದಾಗ, ಇನ್ನು ಪ್ರತಿದಿನ ಜನರು ನೀಡುವ ಭಿಕ್ಷೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಭಿಕ್ಷುಕರ ಜೀವನ ಏನಾಗಿರಬೇಡ? ಇದೇ ವಿಷಯವನ್ನು ಇಟ್ಟುಕೊಂಡು ಯುವ ನಿರ್ದೇಶಕ ಜಿ. ಶಿವಮಣಿ ನಿರ್ದೇಶನದಲ್ಲಿ “ಭಿಕ್ಷುಕ’ ಎಂಬ ಹೆಸರಿನಲ್ಲೇ ಸಿನಿಮಾವೊಂದು ನಿರ್ಮಾಣವಾಗಿದೆ.
ಇತ್ತೀಚೆಗೆ ಈ ಸಿನಿಮಾದ ಟೀಸರ್ ಹಾಗೂ ಹಾಡುಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇನ್ನು “ಭಿಕ್ಷುಕ’ ಸಿನಿಮಾದಲ್ಲಿ ತೆರೆಮೇಲೆ ಬುಲೆಟ್ ರಾಜ ನಾಯಕನಾಗಿ ಕಾಣಿಸಿಕೊಂಡಿದ್ದು, ತೆರೆಹಿಂದೆ ನಿರ್ಮಾಪಕನಾಗಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಜ್ಯೋತಿ ಮರೂರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹಿರಿಯ ನಟ ಬಿರಾದಾರ್, ತಬಲಾ ನಾಣಿ, ಶೋಭರಾಜ್, ಶರತ್ ಲೋಹಿತಾಶ್ವ, ಶಂಖನಾದ ಅರವಿಂದ್, ಆನಂದ್ ಗಣೇಶ್, ಪೂಜಾ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ಹೊಸ ಚಿತ್ರದಲ್ಲಿ ನಕುಲ್
ಟೀಸರ್ ಮತ್ತು ಹಾಡುಗಳ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ಶಿವಮಣಿ, “ಕೊರೊನಾ ಲಾಕ್‌ಡೌನ್ ಟೈಮ್‌ನಲ್ಲಿ ಹುಟ್ಟಿದ ಕಥೆಯಿದು. ಆ ಸಮಯದಲ್ಲಿ ಭಿಕ್ಷುಕರು ಏನೆಲ್ಲ ತೊಂದರೆ ತಾಪತ್ರಯಗಳನ್ನು ಅನುಭವಿಸಿದರು ಎಂಬುದನ್ನು ಹೇಳುವ ಸಿನಿಮಾ ಇದಾಗಿದೆ. ಮೊದಲು ಶಾರ್ಟ್ ಫಿಲಂ ಮಾಡೋಣ ಎಂದುಕೊಂಡು ಆರಂಭಿಸಿದೆವು. ನಂತರ ಅದು ಸಿನಿಮಾವಾಯಿತು. ಹಿರಿಯ ಸಾಹಿತಿ ಬಿ.ಆರ್ ಲಕ್ಷ್ಮಣ ರಾವ್ ಸಿನಿಮಾದ ಟೈಟಲ್ ಸಾಂಗ್ ಬರೆದಿದ್ದಾರೆ. ಬೆಂಗಳೂರು ಸುತ್ತಮುತ್ತ ಸಿನಿಮಾದ ಶೂಟಿಂಗ್ ಮಾಡಲಾಗಿದೆ’ ಕೋವಿಡ್ ಸಂಕಷ್ಟದಲ್ಲಿ ಸಿಲುಕಿದ ನಿರ್ಗತಿಕನ ಕಥೆ ಎಂದು ಮಾಹಿತಿ ನೀಡಿದರು.
ಚಿತ್ರದ ಬಗ್ಗೆ ಮಾತನಾಡಿದ ನಾಯಕ ಕಂ ನಿರ್ಮಾಪಕ ಬುಲೆಟ್ ರಾಜ, “ಈಗಿನ ಕಾಲಘಟ್ಟಕ್ಕೆ ಈ ಸಿನಿಮಾ ಬೇಕು ಎನಿಸಿತು. ಎಲ್ಲರೂ ಸೇರಿ ಪ್ರೇಕ್ಷಕರ ಮನಮುಟ್ಟುವಂತೆ ಸಿನಿಮಾ ಮಾಡಿದ್ದೇವೆ’ ಎಂದರು.
ನಟಿ ಜ್ಯೋತಿ ಮರೂರು, ಹಿರಿಯ ನಟ ಬಿರಾದಾರ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. “ಭಿಕ್ಷುಕ’ ಚಿತ್ರದ ಹಾಡುಗಳಿಗೆ ಕಿರಣ್ ವಾಘ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ನಾಗ್ ಶೆಟ್ಟಿ ಛಾಯಾಗ್ರಹಣವಿದೆ. ಎಸ್.ಕೆ.ಸಾಲಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸದ್ಯ ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಶೀಘ್ರದಲ್ಲಿಯೇ “ಭಿಕ್ಷುಕ’ನನ್ನು ತೆರೆಗೆ ತರುವ ಯೋಚನೆಯಲ್ಲಿದೆ