ಮೂಡುಬಿದಿರೆ: ಉ.ಕ. ಜಿಲ್ಲೆ ಮತ್ತು ದ.ಕ.ದ ಮೂಡುಬಿದಿರೆಯಿಂದ ಬೈಕ್ ಕಳವು ಮಾಡಿದ್ದ ಅಂತರ್ ಜಿಲ್ಲಾ ಚೋರರನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದ ಪೊಲೀಸರ ತಂಡ ಆ.27 ಶುಕ್ರವಾರ ಬಂಧಿಸಿದೆ.
ತುಮಕೂರು ಜಿಲ್ಲೆಯ ಅಂಜನೇಯ ದೇವಸ್ಥಾನದ ಬಳಿ ಕೊಡವತಿ ಗ್ರಾಮದ ಆಕಾಶ್ ಕಲ್ಕಿ ಹಾಗೂ ಅಂಜನೇಯ ದೇವಸ್ಥಾನದ ಬಳಿಯ, ಬೀರ್ಗನಹಳ್ಳಿಯ ವೀರೇಂದ್ರ ಬಂಧಿತರು.
ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಾಂತ ಗ್ರಾಮದ ಕೊಡಂಗಲ್ಲು ಮಹಾವೀರ ಕಾಲೇಜಿನ ಎದುರು ವಾಹನ ತಪಾಸಣೆ ನಡೆಸುತ್ತಿರುವ ಸಂದರ್ಭ ದ್ವಿ ಚಕ್ರ ವಾಹನದಲ್ಲಿ ಬರುತ್ತಿದ್ದ ಇಬ್ಬರನ್ನು ನಿಲ್ಲಿಸಲು ಹೇಳಿದಾಗ ವಾಹನ ನಿಲ್ಲಿಸದೇ ವಾಪಾಸ್ ಹಿಂತಿರುಗಲು ಪ್ರಯತ್ನಿಸುತ್ತಿರುವ ವೇಳೆ ಪೊಲೀಸ್ ನಿರೀಕ್ಷಕ ಸಂದೇಶ್ ಹಾಗೂ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಅ.10 ರಂದು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಮತ್ತು ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಜೈನ್ ಪಿ.ಯು ಕಾಲೇಜಿನ ಎದುರಿರುವ ಅರ್ಹತ್ ಅಪಾರ್ಟ್ಮೆಂಟ್ ನ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ರಾಯಲ್ ಎನ್ ಫಿಲ್ಡ್ ಕ್ಲಾಸಿಕ್ 350 ಕಳ್ಳತನ ಮಾಡಿದ್ದರು. ಆರೋಪಿಗಳಿಂದ ಒಟ್ಟು ರೂ. 1,80,000 ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಂತೆ ಡಿಸಿಪಿಗಳಾದ ಸಿದ್ದಾರ್ಥ ಗೊಯಲ್, ದಿನೇಶ್ ಕುಮಾರ್, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ರವರ ನಿರ್ದೇಶನದಂತೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಮತ್ತು ಸಿಬಂದಿಗಳು ಕಾರ್ಯಾಚರಣೆ ನಡೆಸಿದ್ದರು.