Advertisement

ಬೈಕ್‌ ರೇಸ್‌ ಹುಚ್ಚಾಟಕ್ಕೆ ಜೀವ ಬಲಿಯಾಗದಿರಲಿ

08:20 AM Jul 26, 2017 | Team Udayavani |

ಮಡಂತ್ಯಾರು, ಪುಂಜಾಲಕಟ್ಟೆ ರೇಸ್‌ಗೆ ನಡೆಯುತ್ತಿದೆ ಯುವಕರ ತಯಾರಿ

Advertisement

ಮಡಂತ್ಯಾರು: ರೇಸ್‌ ಜನರಿಗೆ ಮನೋರಂಜನೆ ನೀಡುವ ಒಂದು ಕ್ರೀಡೆ. ಇದರಲ್ಲಿ ಬೈಕ್‌ ರೇಸ್‌, ಕಾರ್‌ ರೇಸ್‌, ಕುದುರೆ ರೇಸ್‌ ಹೀಗೆ ಹಲವಾರು ರೇಸ್‌ಗಳನ್ನು ಜನ ನೋಡಿ ಆನಂದಿಸುತ್ತಾರೆ. ಆದರೆ ಅದನ್ನು ನಾವು ಕೂಡ ಮಾಡಬೇಕೆಂದು ಹೊರಟರೆ ಮಾತ್ರ ನಮ್ಮ ಜೀವಕ್ಕೆ ಕುತ್ತು ಹುಷಾರ್‌!.

ಮೊಸರು ಕುಡಿಕೆ ಉತ್ಸವದಲ್ಲಿ ಬೈಕ್‌ ರೇಸ್‌
ಇನ್ನೇನು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮೀಪಿಸುತ್ತಿದೆ. ನಾಡಿನೆಲ್ಲೆಡೆ ಅದ್ದೂರಿ ತಯಾರಿ ನಡೆಯುತ್ತಿದೆ. ಕೃಷ್ಣಜನ್ಮಾಷ್ಟಮಿ ಬಂತೆಂದರೆ ನೆನಪಾಗುವುದು ಮೊಸರು ಕುಡಿಕೆ ಉತ್ಸವ. ಅಲ್ಲಲ್ಲಿ ಸಾರ್ವಜನಿಕ ಕೃಷ್ಣ ಜನ್ಮಾಷ್ಟಮಿ ಸಮಿತಿ ರಚನೆ ಮಾಡಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಹಾಗೆಯೆ ಬೈಕ್‌ ರೇಸ್‌ನಂತಹ ಅಪಾಯಕಾರಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ರಾಜ್ಯದ ಮೂಲೆಗಳಿಂದ ಬೈಕ್‌ ಸ್ಪರ್ಧಿಗಳು ಆಗಮಿಸುತ್ತಾರೆ. ಇದೊಂದು ಕುತೂಹಲಕಾರಿ ಹಾಗೂ ಮನೋರಂಜನೆ ಕೂಡ ಆಗಿದ್ದು ಮೊಸರು ಕುಡಿಕೆ ಉತ್ಸವದ ಕೇಂದ್ರ ಬಿಂದು ಎಂದೇ ಹೇಳಬಹುದು.

ಬೆಳ್ತಂಗಡಿ ತಾಲೂಕಿನ ಹಲವೆಡೆ ಬೈಕ್‌ ರೇಸ್‌
ಮಡಂತ್ಯಾರು, ಬಳ್ಳಮಂಜ, ಮದ್ದಡ್ಕ, ಪುಂಜಾಲಕಟ್ಟೆ ಸೇರಿದಂತೆ ಹಲವೆಡೆ ಮೊಸರು ಕುಡಿಕೆ ಉತ್ಸವದಲ್ಲಿ ಬೈಕ್‌ ರೇಸ್‌ ಸ್ಪರ್ಧೆ ಹಲವು ವರ್ಷದಿಂದ ನಡೆದುಕೊಂಡು ಬರುತ್ತಿದೆ. ಅಪಾಯಕಾರಿಯಾದ ಬೈಕ್‌ ರೇಸ್‌ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧೆಗೆ ಸ್ಪರ್ಧಿಗಳೇ ಜವಾಬ್ದಾರಿಯಾಗಿರುತ್ತಾರೆ. ತಮ್ಮ ಜೀವದ ಹಂಗುತೊರೆದು ಸ್ಪರ್ಧೆಯಲ್ಲಿ ಭಾಗವಹಿಸಬೇಕು.

ಮೊಸರು ಕುಡಿಕೆ ಉತ್ಸವ ಸಮೀಪಿಸುತ್ತಿದ್ದಂತೆ ಯುವಕರು ಬೈಕ್‌ ರೇಸ್‌ಗೆ ಸಿದ್ಧತೆ ನಡೆಸುತ್ತಿರುತ್ತಾರೆ. ಬೈಕ್‌ ಸದ್ದು ಕೇಳುತ್ತಿದ್ದಂತೆ ಉತ್ಸಾಹಿ ಯುವಕರ ಮನಸ್ಸಿನ ಹತೋಟಿ ತಪ್ಪುತ್ತದೆ. ಇದರ ಹುಚ್ಚು ಹಿಡಿಯುತ್ತದೆ. ಈಗಾಗಲೇ ಯುವಕರು ಮಡಂತ್ಯಾರು, ಪುಂಜಾಲಕಟ್ಟೆ, ಪಣಕಜೆ ಪ್ರದೇಶದಲ್ಲಿ ಕರ್ಕಶ ಸದ್ದಿನ ಬೈಕ್‌ ಚಾಲನೆ ಮಾಡಿ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾರೆ. ಶಾಲೆ, ಕಾಲೇಜು ಬಿಡುವ ಸಂದರ್ಭ ಹೆಚ್ಚಾಗಿ ಓಡಾಟ ನಡೆಸುವ ಬೈಕ್‌ಗಳು ದಾರಿಯಲ್ಲಿ ನಡೆದುಹೋಗುವವರಿಗೂ ಅಪಾಯ ತರುತ್ತಿದ್ದಾರೆ. ಈ ಸದ್ದಿನಿಂದಾಗಿ ಶಾಲೆಯಲ್ಲಿ ಪಾಠ ಕೇಳುವ ಮಕ್ಕಳ ಗಮನ ಬೇರೆಡೆ ತಿರುಗಿದರೆ ಇನ್ನೊಂದೆಡೆ ಪೇಟೆಯಲ್ಲಿರುವ ವ್ಯಾಪಾರಸ್ಥರಿಗೂ ಕಿರಿ ಕಿರಿ ಆಗುತ್ತದೆ ಎನ್ನುತ್ತಾರೆ ಸ್ಥಳೀಯರು.

Advertisement

ಇದೊಂದು ಅನುಭವಿ ಕ್ರೀಡೆ
ಇದೊಂದು ಅನುಭವಿ ಕ್ರೀಡೆಯಾಗಿದ್ದು ಇದಕ್ಕೆ ಪೂರ್ವ ತಯಾರಿ ನಡೆಸಿ ಅದರಲ್ಲಿ ಚಾಣಾಕ್ಷತೆ ಹೊಂದಿದವರು ಮಾತ್ರ ಈ ಕ್ರೀಡೆಗೆ ಸೂಕ್ತ ಸ್ಪರ್ಧಿಗಳು ಎನ್ನಬಹುದು. ಜನರಿಗೆ ನಾನು ಮನೋರಂಜನೆ ನೀಡುತ್ತೇನೆ ಎಂದು ಹುಚ್ಚು ಸಾಹಸಕ್ಕೆ ಇಳಿದರೆ ಅದು ಭ್ರಮೆ ಎಂದು ಹೇಳಬಹುದು. ಕೆಲವರು ಮನೆಯವರ ಕಣ್ಣು ತಪ್ಪಿಸಿ ಇಂತಹದೊಂದು ಸಾಹಸಕ್ಕೆ ಮುಂದಾಗುತ್ತಾರೆ, ಅವಘಡ ಸಂಭವಿಸಿದರೆ ಯಾರೂ ನೆರವಿಗೆ ಬರುವುದಿಲ್ಲ.

ಪ್ರೋತ್ಸಾಹಕರು ಆರೈಕೆಗಿಲ್ಲ
ಇಂತಹದೊಂದು ಸಾಹಸ ನೋಡುಗರಿಗೆ ಖುಷಿ ನೀಡುತ್ತದೆ. ಕೆಲವರು ಯುವಕರನ್ನು ಪ್ರೋತ್ಸಾಹಿಸುತ್ತಾರೆ. ಆದರೆ ಹೆಚ್ಚು ಕಡಿಮೆ ಆದರೆ ‘ಬೇಕಿತ್ತ ಹುಚ್ಚು ಸಾಹಸ’ ಎನ್ನುವವರೇ ಜಾಸ್ತಿ. ಯಾರಧ್ದೋ ಮನಸ್ಸು ಖುಷಿಪಡಿಸಲು ನಿಮ್ಮ ಜೀವನ ಬಲಿಕೊಡಬೇಡಿ. ನಿಮ್ಮಲ್ಲಿರುವ ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸುವ ಆತುರ ನಿಮ್ಮಲ್ಲಿದ್ದರೆ ಸೂಕ್ತ ತರಬೇತಿ ಪಡೆದುಕೊಂಡು ಯಾರಿಗೂ ತೊಂದರೆಯಾಗದ ರೀತಿಯಲ್ಲಿ ನಡೆದುಕೊಳ್ಳಿ ಎನ್ನುವುದು ಕೆಲವರ ಅಭಿಪ್ರಾಯ.

ಒಂದು ದಿನಕ್ಕಾಗಿ ಜೀವನವೇ ಕತ್ತಲು
ಬೈಕ್‌ ರೇಸ್‌ ಯುವಕರಿಗೆ ಮಾತ್ರ ಅಲ್ಲ ಯುವತಿಯರೂ ಇಷ್ಟ ಪಡುತ್ತಾರೆ. ಸ್ಪರ್ಧೆ ನಡೆಯುವ ಮೊದಲೇ ಅಭ್ಯಾಸದಲ್ಲಿ ತೊಡಗಿಕೊಂಡು ಹಲವಾರು ಅನಾಹುತಗಳನ್ನು ಕಂಡಿರುತ್ತಾರೆ. ಸ್ಪರ್ಧೆನಡೆಯುವುದು ದಿನದ ಒಂದು ಘಳಿಗೆ ಒಂದು ದಿನಕ್ಕಾಗಿ ಜೀವನವೇ ಕತ್ತಲಾದ ಹಲವಾರು ನಿದರ್ಶನಗಳು ಇವೆ.

ವೇಗದ ಸಂಚಾರಕ್ಕೆ ಕಾನೂನು ಕ್ರಮ
ಮುಖ್ಯ ರಸ್ತೆಯಲ್ಲಿ ಅನಗತ್ಯ ಕರ್ಕಶ ಸದ್ದುಮಾಡಿಕೊಂಡು ತಿರುಗಾಡುವುದು, ದಾಖಲೆ ಇಲ್ಲದಿದ್ದರೆ, ವೇಗದ ಸಂಚಾರ ಮಾಡಿದರೆ ಕಾನೂನು ಕ್ರಮ ಜರಗಿಸಲಾಗುವುದು.
– ಚಂದ್ರಶೇಖರ ಕೆ., ಪುಂಜಾಲಕಟ್ಟೆ , ಠಾಣಾಧಿಕಾರಿ

– ಪ್ರಮೋದ್‌ ಬಳ್ಳಮಂಜ

Advertisement

Udayavani is now on Telegram. Click here to join our channel and stay updated with the latest news.

Next