ಬೆಂಗಳೂರು: ಹೊಸವರ್ಷದ ಸಂಭ್ರಮದಲ್ಲಿ ಪ್ರವಾಸಿ ತಾಣಗಳಿಗೆ ಪ್ರೇಯಸಿಯನ್ನು ಕರೆದೊಯ್ಯಲು ಬೈಕ್ ಕಳ್ಳತನದಲ್ಲಿ ಭಾಗಿಯಾಗಿದ್ದ ಯುವಕನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್ ಅಲಿಯಾಸ್ ಕಾಕಾ (26)ಬಂಧಿತ ಆರೋಪಿ.
ಮೂರು ತಿಂಗಳ ಹಿಂದಷ್ಟೇ ಜಾಮೀನಿನ ಆಧಾರದಲ್ಲಿ ಬಿಡುಗಡೆಯಾಗಿರುವ ಆರೋಪಿ ಕಾರ್ತಿಕ್, ಬೈಕ್ ಕಳವು ಪ್ರಕರಣಗಳಲ್ಲಿ ಕೋರಮಂಗಲ ಪೊಲೀಸರಿಗೆ ಮೂರನೇ ಬಾರಿ ಬಲೆಗೆ ಬಿದ್ದಿದ್ದಾನೆ. ಆತನ ಬಂಧನದಿಂದ ಆಗ್ನೇಯ ವಿಭಾಗದ 10 ಪ್ರಕರಣಗಳು ಪತ್ತೆಯಾಗಿದ್ದು. ಆರು ಪಲ್ಸರ್ ಸೇರಿದಂತೆ 6.15 ಲಕ್ಷ ರೂ ಮೌಲ್ಯದ 10 ಬೈಕ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್‌ನಲ್ಲಿ ಜೈಲಿಂದ ಬಿಡುಗಡೆಯಾದ ಬಳಿಕ ಪ್ರೇಯಸಿ ಜತೆ ಹೊಸವರ್ಷದಲ್ಲಿ ಸುತ್ತಾಡಲು 6 ಬಜಾಜ್ ಪಲ್ಸರ್ ಬೈಕ್‌ಗಳನ್ನು ಕಳವು ಮಾಡಿದ್ದ, ಬಳಿಕ ಮಾರಾಟ ಮಾಡಿ ಹಣ ಪಡೆದುಕೊಂಡಿದ್ದ. ಕದ್ದ ಬೈಕ್‌ನಲ್ಲಿಯೇ ಪ್ರೇಯಸಿ ನಂದಿ ಬೆಟ್ಟ, ಹೊಗೇನಕಲ್ ಫಾಲ್ಸ್, ಕೊಡಗು, ಧರ್ಮಸ್ಥಳ ಹಾಗೂ ಇನ್ನಿತರೆ ಪ್ರವಾಸಿ ತಾಣಗಳಿಗೆ ಪ್ರವಾಸ ಹೋಗಿದ್ದರು.
ಆರೋಪಿಯ ಬೈಕ್ ಕಳ್ಳತನದ ಚಾಳಿಗೆ ಬೇಸತ್ತು ಪತ್ನಿ ಬಿಟ್ಟು ಹೋಗಿದ್ದಾರೆ. ಬಳಿಕ ಪ್ರೇಯಸಿ ಜತೆ ಗಾಢವಾದ ಓಡನಾಟ ಇಟ್ಟುಕೊಂಡಿರುವ ಕಾರ್ತಿಕ್, ಆಕೆಯನ್ನು ಸುತ್ತಾಡಿಸಲು ಬೈಕ್‌ಗಳನ್ನು ಕಳವು ಮಾಡುತ್ತಾನೆ. ಜೈಲಿಂದ ಬಿಡುಗಡೆಯಾಗಲು ಬೇಕಾಗುವ ಕಾನೂನು ಪ್ರಕ್ರಿಯೆಗಳಿಗೆ ಹಣ ಹೊಂದಿಸುತ್ತಾನೆ. ಹಣದ ಅವಶ್ಯಕತೆ ಇಲ್ಲದಿದ್ದರೆ ಕದ್ದ ಬೈಕ್‌ಗಳನ್ನು ಎಲ್ಲೆಂದರಲ್ಲಿ ಬಿಟ್ಟುಹೋಗುತ್ತಿದ್ದ.
ಅದೇ ಮೂರು ಬೈಕ್‌ಗಳನ್ನು ಪ್ರತ್ಯೇಕ ಸ್ಥಳಗಳಲ್ಲಿ ಬಿಟ್ಟುಹೋಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.